ಬಿಮ್ಸ್ ನಲ್ಲಿ ಬಾಣಂತಿಯರ ಸಾವು ಪ್ರಕರಣ: ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ
ಹೆರಿಗೆಗೆಂದು ಬಿಮ್ಸ್ಗೆ ದಾಖಲಾಗಿದ್ದ ಒಂಬತ್ತು ಮಂದಿ ಗರ್ಭಿಣಿಯರಾದ ನಂದಿನಿ, ಲಲಿತಮ್ಮ, ಸುಮಯಾ, ರೋಜಾ, ಮುಸ್ಕಾನ್, ಅಮೃತಾ, ಮಹಾಲಕ್ಷ್ಮೀ, ರಾಜೇಶ್ವರಿ, ಸುಮಲತಾ ಎಂಬುವರಿಗೆ ನವೆಂಬರ್ 9ರಂದು ಸಿಸೇರಿಯನ್ ಮೂಲಕ ಹೆರಿಗೆ ಮಾಡಲಾಗಿತ್ತು.

ಬಳ್ಳಾರಿ: ಬಳ್ಳಾರಿ ಜಿಲ್ಲಾಸ್ಪತ್ರೆ (BIMSನಲ್ಲಿ ಮೃತಪಟ್ಟ ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಇಂದು ಭಾನುವಾರ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ನಡೆದ ಅಭಿನಂದನಾ ಸಮಾವೇಶದಲ್ಲಿ ಮಾತನಾಡಿ, ಈಗಾಗಲೇ 2 ಲಕ್ಷ ರೂಪಾಯಿ ಪರಿಹಾರ ಘೋಷಣೆ ಆಗಿದೆ. ಇನ್ನೂ 3 ಲಕ್ಷ ರೂಪಾಯಿ ನೀಡಲಾಗುವುದು ಎಂದು ಹೇಳಿದರು.
ಬಳ್ಳಾರಿ ಬಿಮ್ಸ್ನಲ್ಲಿ ಐವರು ಬಾಣಂತಿಯರು ಮೃತಪಟ್ಟಿರುವ ಘಟನೆ ದುರದೃಷ್ಟಕರ. ಮೃತ ಬಾಣಂತಿಯರೆಲ್ಲರೂ ಬಡ ಕುಟುಂಬದವರು. ಹೀಗಾಗಿ, ಮೃತ ಬಾಣಂತಿಯರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡುತ್ತೇವೆ ಎಂದು ಹೇಳಿದರು.
ನಡೆದ ಘಟನೆಯೇನು?
ಹೆರಿಗೆಗೆಂದು ಬಿಮ್ಸ್ಗೆ ದಾಖಲಾಗಿದ್ದ ಒಂಬತ್ತು ಮಂದಿ ಗರ್ಭಿಣಿಯರಾದ ನಂದಿನಿ, ಲಲಿತಮ್ಮ, ಸುಮಯಾ, ರೋಜಾ, ಮುಸ್ಕಾನ್, ಅಮೃತಾ, ಮಹಾಲಕ್ಷ್ಮೀ, ರಾಜೇಶ್ವರಿ, ಸುಮಲತಾ ಎಂಬುವರಿಗೆ ನವೆಂಬರ್ 9ರಂದು ಸಿಸೇರಿಯನ್ ಮೂಲಕ ಹೆರಿಗೆ ಮಾಡಲಾಗಿತ್ತು. ಇವರಲ್ಲಿ ನಂದಿನಿ, ಲಲಿತಮ್ಮ, ರೋಜಾ, ಮುಸ್ಕಾನ್ ಹಾಗೂ ಸುಮಯಾ ಮೃತಪಟ್ಟಿದ್ದಾರೆ. ಇನ್ನುಳಿದ ನಾಲ್ವರು ಬಾಣಂತಿಯರು ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ.
ಹೆರಿಗೆ ಬಳಿಕ ಬಾಣಂತಿಯರಿಗೆ ಐವಿ ದ್ರಾವಣ ನೀಡಲಾಗಿತ್ತು. ಈ ದ್ರಾವಣ ಹಾಕಿ ಎರಡೇ ಗಂಟೆಯಲ್ಲಿ ಬಾಣಂತಿಯರು ಅಸ್ವಸ್ಥಗೊಂಡಿದ್ದಾರೆ. ಇವರಲ್ಲಿ ಏಳು ಮಂದಿ ಬಾಣಂತಿಯರು ಕಿಡ್ನಿ ಮತ್ತು ಬಹು ಅಂಗಾಂಗ ವೈಫಲ್ಯತೆಯಿಂದ ಬಳಲುತ್ತಿದ್ದರು. ಕೂಡಲೇ ಇವರನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಮ್ಸ್ನಲ್ಲಿ ಪರೀಕ್ಷಿಸಿದಾಗ ಏಳು ಮಂದಿ ಬಾಣಂತಿಯರ ಪೈಕಿ ಮೂವರಲ್ಲಿ ಇಲಿ ಜ್ವರ ಪತ್ತೆಯಾಗಿತ್ತು.
ಔಷಧಿ ತಯಾರಿಸಿದ ಕಂಪನಿ ಮೇಲೆ ಕ್ರಮ: ಸಚಿವ ದಿನೇಶ್ ಗುಂಡೂರಾವ್
ಪ್ರಕರಣ ಸಂಬಂಧ ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಆಸ್ಪತ್ರೆಯಲ್ಲಿ ಆದ ನ್ಯೂನತೆಗಳ ಬಗ್ಗೆ ತನಿಖೆ ನಡೆಸುತ್ತೇವೆ. ನಮಗೆ ಗೊತ್ತಾಗದೇ ಇನ್ನೆಷ್ಟು ಬಾಣಂತಿಯರು ಮೃತಪಟ್ಟಿದ್ದಾರೆ ಗೊತ್ತಿಲ್ಲ. ಔಷಧಿ ತಯಾರಿಸಿದ ಕಂಪನಿ ಮೇಲೆ ಕ್ರಮ ಕೈಗೊಳ್ಳುತ್ತಿದ್ದೇವೆ. ಮೃತ ಬಾಣಂತಿಯರ ಕುಟುಂಬಸ್ಥರಿಗೆ ಪರಿಹಾರ ಘೋಷಿಸಿದ್ದೇವೆ. ಇನ್ನು ಮುಂದೆ ಇಂತಹ ಘಟನೆಗಳು ಆಗದಂತೆ ಎಚ್ಚರಿಕೆ ವಹಿಸುತ್ತೇವೆ ಎಂದರು.
ಇಂದು ಆಸ್ಪತ್ರೆಗೆ ಭೇಟಿ ನೀಡಿ ಹೆರಿಗೆಯಾದ ಬಾಣಂತಿಯರ ಆರೋಗ್ಯ ಮತ್ತು ಆಸ್ಪತ್ರೆಯಲ್ಲಿ ನೀಡಲಾಗುತ್ತಿರುವ ಚಿಕಿತ್ಸೆ ಬಗ್ಗೆ ಪರಿಶೀಲನೆ ನಡೆಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಐವಿ ದ್ರಾವಣ ನೀಡಿದ್ದರಲ್ಲಿ ವ್ಯತ್ಯಾಸವಾಗಿ ಜ್ವರ ಬಂದು ಈ ರೀತಿ ಪ್ರಾಣ ಹೋಗುವ ಪರಿಸ್ಥಿತಿ ಬಂದಿದೆ ಎಂದು ರಾಜೀವ್ ಗಾಂಧಿ ವಿವಿಗೆ ಕಳುಹಿಸಿದ ವರದಿಯಿಂದ ತಿಳಿದುಬಂದಿದೆ. ಇದೇ ರೀತಿ ಕಳೆದ ಮಾರ್ಚ್ ತಿಂಗಳಲ್ಲಿ ಮಾಹಿತಿ ಬಂದಾಗ ಇಡೀ ರಾಜ್ಯದಲ್ಲಿ ಐವಿ ದ್ರಾವಣ ನೀಡುವ ಪ್ರಕ್ರಿಯೆಯನ್ನು ನಿಲ್ಲಿಸಿದ್ದೆ ಎಂದರು.
327 ಬಾಣಂತಿಯರ ಸಾವು
ರಾಜ್ಯದಲ್ಲಿ ಕಳೆದ ಏಪ್ರಿಲ್ ತಿಂಗಳಿನಿಂದ ಇಲ್ಲಿಯವರೆಗೆ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ 327 ಬಾಣಂತಿಯರ ಸಾವು ಸಂಭವಿಸಿದ್ದು, ಪ್ರತಿಯೊಂದು ಕೂಡ ತಪಾಸಣೆ ಮಾಡಲಿದ್ದೇವೆ. ಲೆಕ್ಕಪರಿಶೋಧನೆ ವರದಿ ಸಲ್ಲಿಸಲು ಹೇಳಿದ್ದೇವೆ. ಉನ್ನತ ತಜ್ಞರನ್ನು ಕರೆಸಿ ಮತ್ತೊಮ್ಮೆ ತಪಾಸಣೆ ಮಾಡಲು ಹೇಳಿದ್ದೇವೆ. ಏಕೆಂದರೆ ಕೋರ್ಟ್ ಗಳಲ್ಲಿ ಕಾನೂನು ಹೋರಾಟ ಮಾಡಬೇಕಾಗಿದೆ. ಸರಿಯಾದ ಸಾಕ್ಷಿ ಸಂಗ್ರಹಿಸಬೇಕಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



