ಬೆಂಗಳೂರಿನಲ್ಲಿ ಮುಂದಿನ ವರ್ಷದಿಂದ ನೀರಿನ ದರ ಹೆಚ್ಚಳ: BWSSB ಸುಳಿವು!
ನೀರಿನ ದರ ಪರಿಷ್ಕರಣೆಗೆ ಬೆಂಬಲ ನೀಡುವಂತೆ BWSSB ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ನಗರದ ಎಲ್ಲಾ 27 ಶಾಸಕರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಬೆಂಗಳೂರು: ಬೆಂಗಳೂರಿಗರಿಗೆ ಮುಂದಿನ ವರ್ಷದ ಆರಂಭದಿಂದ ನೀರಿನ ದರ ಹೆಚ್ಚಳವಾಗುವ ಸಾಧ್ಯತೆಯಿದೆ. BWSSB ನೀರಿನ ದರ ಪರಿಷ್ಕರಣೆಗೆ ಮುಂದಾಗಿದ್ದು, ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆಯುವ ಮುಂದಿನ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತಿದೆ.
ನೀರಿನ ದರ ಪರಿಷ್ಕರಣೆಗೆ ಬೆಂಬಲ ನೀಡುವಂತೆ BWSSB ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ನಗರದ ಎಲ್ಲಾ 27 ಶಾಸಕರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಮಂಡಳಿಯು ಎದುರಿಸುತ್ತಿರುವ ತೀವ್ರ ಆರ್ಥಿಕ ಒತ್ತಡವನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ. ನೀರಿನ ದರವನ್ನು ಕೊನೆಯ ಬಾರಿಗೆ ನವೆಂಬರ್ 2014 ರಲ್ಲಿ ಪರಿಷ್ಕರಿಸಲಾಗಿತ್ತು.
ಕಳೆದೊಂದು ದಶಕದಲ್ಲಿ ಜಲಮಂಡಳಿ ವಿದ್ಯುತ್ ಸೇರಿದಂತೆ ಇತರ ಅಗತ್ಯ ಸೇವೆಗಳು ಮತ್ತು ಸೌಕರ್ಯಗಳಿಗಾಗಿ ಮಾಡಿದ ವೆಚ್ಚದಲ್ಲಿ ಗಮನಾರ್ಹ ಹೆಚ್ಚಳವನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ವೆಚ್ಚ ಶೇ.107.3ರಷ್ಟು ಮತ್ತು ನಿರ್ವಹಣಾ ವೆಚ್ಚದಲ್ಲಿ ಶೇ.122.5ರಷ್ಟು ಹೆಚ್ಚಳವಾಗಿದ್ದು, ವೇತನ ಮತ್ತು ಪಿಂಚಣಿಯಲ್ಲಿ ಶೇ.61.3ರಷ್ಟು ಹೆಚ್ಚಳವಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಅಲ್ಲದೆ, ಮಂಡಳಿಯ ಮಾಸಿಕ ವೆಚ್ಚ ರೂ. 170 ಕೋಟಿ ಆಗಿದ್ದು, ನೀರಿನ ಬಿಲ್‌ಗಳಿಂದ ಕೇವಲ 129 ಕೋಟಿ ರೂಪಾಯಿ ಆದಾಯ ಬರುತ್ತಿದ್ದು, 41 ಕೋಟಿ ರೂಪಾಯಿ ಕೊರತೆಯಾಗಿದೆ.
ಹೊಸ ಪ್ರದೇಶಗಳಿಗೆ ನೀರು ಸರಬರಾಜು, ಒಳಚರಂಡಿ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹೊಸ ನೀರಿನ ಸಂಪರ್ಕಗಳಿಗೆ ಮೀಸಲಿಟ್ಟ ಹಣವನ್ನು ಬಳಸಿಕೊಂಡು ಈ ಕೊರತೆಯನ್ನು ತಾತ್ಕಾಲಿಕವಾಗಿ ಪೂರೈಸಲಾಗುತ್ತಿದೆ. ನೀರಿನ ದರವನ್ನು ಪರಿಷ್ಕರಿಸದಿದ್ದಲ್ಲಿ ಮುಂದಿನ ಐದು ವರ್ಷಗಳಲ್ಲಿ ಮಂಡಳಿಯು 4,860 ಕೋಟಿ ರೂ. ನಷ್ಟ ಉಂಟಾಗಲಿದೆ ಎಂದು ಪತ್ರದಲ್ಲಿ ಹೇಳಲಾಗಿದೆ. ಕಳೆದ ಕೆಲವು ತಿಂಗಳಿಂದ ಡಿಸಿಎಂ ನೀರಿನ ದರ ಹೆಚ್ಚಳದ ಸುಳಿವು ನೀಡುತ್ತಿದ್ದು, ಮಂಡಳಿ ಅಸ್ತಿತ್ವ ಉಳಿಸಿಕೊಳ್ಳುವುದು ಅನಿವಾರ್ಯವಾಗಿದೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



