ರಾಜ್ಯದಲ್ಲಿ ಏಡ್ಸ್ ಸೋಂಕು ಇಳಿಕೆ: ಸಚಿವ ದಿನೇಶ್ ಗುಂಡೂರಾವ್
ಕಳೆದ ವರ್ಷ ರಾಜ್ಯದಲ್ಲಿ 13,183 ಪ್ರಕರಣಗಳು ವರದಿಯಾಗಿದ್ದು, ಈ ಸಾಲಿನಲ್ಲಿ ಅಕ್ಟೋಬರ್ ವರೆಗೆ 7,720 ಪ್ರಕರಣಗಳು ಪತ್ತೆಯಾಗಿವೆ. ಗರ್ಭಿಣಿಯರಲ್ಲಿ ಕಳೆದ ವರ್ಷ 539 ಸೋಂಕು, ಈ ವರ್ಷ ಅಕ್ಟೋಬರ್ ವರೆಗೆ 247 ಸೋಂಕು ವರದಿಯಾಗಿವೆ.

ಬೆಂಗಳೂರು: ರಾಜ್ಯದಲ್ಲಿ ಏಡ್ಸ್ ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದು, ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸೋಮವಾರ ಹೇಳಿದರು.
ಸೋಮವಾರ ಬೆಂಗಳೂರಿನ ದೇವರಾಜ ಅರಸು ಟ್ರಕ್ ಟರ್ಮಿನಲ್ ನಲ್ಲಿ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಆಯೋಜಿಸಿದ್ದ ವಿಶ್ವ ಏಡ್ಸ್ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ವರ್ಷ ರಾಜ್ಯದಲ್ಲಿ 13,183 ಪ್ರಕರಣಗಳು ವರದಿಯಾಗಿದ್ದು, ಈ ಸಾಲಿನಲ್ಲಿ ಅಕ್ಟೋಬರ್ ವರೆಗೆ 7,720 ಪ್ರಕರಣಗಳು ಪತ್ತೆಯಾಗಿವೆ. ಗರ್ಭಿಣಿಯರಲ್ಲಿ ಕಳೆದ ವರ್ಷ 539 ಸೋಂಕು, ಈ ವರ್ಷ ಅಕ್ಟೋಬರ್ ವರೆಗೆ 247 ಸೋಂಕು ವರದಿಯಾಗಿವೆ. ಗರ್ಭಿಣಿಯರಲ್ಲಿ ಸೋಂಕು ದೃಢಪಡುವ ಪ್ರಮಾಣ ಶೇ.0.03ರಷ್ಟಿದೆ. ಇದನ್ನು ಶೂನ್ಯಕ್ಕೆ ಇಳಿಸುವ ಗುರಿಯೊಂದಿಗೆ ನಾವೆಲ್ಲರೂ ಕೆಲಸ ಮಾಡಬೇಕು ಎಂದು ಹೇಳಿದರು.
ಟ್ರಕ್ ಚಾಲಕರು, ಕೆಲಸದ ಮೇಲೆ ಪ್ರಯಾಣ ಮಾಡುವವರು, ಲೈಂಗಿಕ ಕಾರ್ಯಕರ್ತರು, ಮಾದಕವಸ್ತುಗಳನ್ನು ಸ್ವೀಕರಿಸುವವರಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿರುತ್ತದೆ. ಸುರಕ್ಷಿತ ಲೈಂಗಿಕ ಕ್ರಿಯೆಯೇ ಮಾರಣಾಂತಿಕ ಕಾಯಿಲೆಯಿಂದ ಪಾರಾಗಲು ದಾರಿ. ಲೈಂಗಿಕ ಕಾರ್ಯಕರ್ತೆಯರನ್ನು ಸಮಾಜದ ಮುಖ್ಯ ವಾಹಿನಿಯಿಂದ ಹೊರಗೆ ಇಟ್ಟಿರುವ ಕಾರಣ ಗಂಡಾಂತರಗಳು ಉಂಟಾಗುತ್ತಿವೆ. ಆದರೆ, ಅವರನ್ನು ಮಾನವೀಯತ ದೃಷ್ಟಿಯಿಂದ ನೋಡದಿದ್ದರೆ ಏಡ್ಸ್ ನಿಯಂತ್ರಣ ಅಸಾಧ್ಯ ಎಂದು ತಿಳಿಸಿದರು.
ರಾಜ್ಯದಲ್ಲಿ 433 ಆಪ್ತ ಸಮಾಲೋಚನಾ ಮತ್ತು ಪರೀಕ್ಷಾ ಕೇಂದ್ರಗಳಿವೆ. 2592 ಸೌಲಭ್ಯಾಧಾರಿತ ಸಮಗ್ರ ಆಪ್ತ ಸಮಾಲೋಚನಾ ಮತ್ತು ಪರೀಕ್ಷಾ ಕೇಂದ್ರಗಳಿವೆ. ಅಲ್ಲಿ ನೀಡುತ್ತಿರುವ ಚಿಕಿತ್ಸೆ, ಥೆರಪಿಗಳಿಂದಾಗಿ ಇಳಿಕೆಯಾಗಿದೆ. ಇಷ್ಟಕ್ಕೆ ಸುಮ್ಮನಾಗದೇ ಎಚ್‌ಐವಿ/ಏಡ್ಸ್ ಪತ್ತೆಯೇ ಇಲ್ಲ ಎಂದು ಆಗುವವರೆಗೆ ಕೆಲಸ ಮಾಡಬೇಕು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



