ಬೆಂಗಳೂರಿನಲ್ಲಿ 60 ಎಕರೆ ಜಾಗದಲ್ಲಿ ಬೃಹತ್ ಕ್ರೀಡಾ ನಗರ ನಿರ್ಮಾಣ!
ಭಾರತದ ಕ್ರೀಡಾಪಟುಗಳಿಗೆ ಯಾವುದೇ ರೀತಿಯ ಕೊರತೆಯಾಗಿಲ್ಲ. ಆದರೂ ಎಲ್ಲರ ನಿರೀಕ್ಷೆಯಂತೆ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಚಾಂಪಿಯನ್ಶಿಪ್, ಮೆಡಲ್ ತರಲಾಗುತ್ತಿಲ್ಲ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 60 ಎಕರೆ ಜಾಗದಲ್ಲಿ ಬೃಹತ್ ಕ್ರೀಡಾ ನಗರ ನಿರ್ಮಿಸಲು ಸರ್ಕಾರ ಮುಂದಾಗಿದೆ.
ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ಹಾಕಿ ದಿಗ್ಗಜ ಧ್ಯಾನ್‌ಚಂದ್ ಅವರ ಜನ್ಮ ದಿನಾಚರಣೆ ಹಾಗೂ ರಾಷ್ಟ್ರಾಭಿವೃದ್ಧಿಯಲ್ಲಿ ಕ್ರೀಡೆ ಪಾತ್ರವನ್ನು ಸ್ಮರಿಸುವ ಕಾರ್ಯಕ್ರಮದಲ್ಲಿ ಗೃಹ ಸಚಿವ ಜಿ ಪರಮೇಶ್ವರ ಅವರು ಮಾತನಾಡಿದರು.
ಯುವಕರಲ್ಲಿ ಕ್ರೀಡಾ ಬದ್ಧತೆ ಕಡಿಮೆಯಾಗುತ್ತಿದೆ. ಕ್ರೀಡೆಯ ಬಗ್ಗೆ ಧ್ಯಾನ್ ಚಂದ್ಗಿದ್ದ ಮನಸ್ಥಿತಿ ಮತ್ತು ಬದ್ಧತೆಯನ್ನು ಅನುಕರಿಸುವಂತೆ ಸಲಹೆ ನೀಡಿದರು.
ಇದೇ ವೇಳೆ ಸರ್ಕಾರವು ಕ್ರೀಡಾಪಟುಗಳಿಗೆ ಮೀಸಲಾತಿ ಕಲ್ಪಿಸುತ್ತಿರುವ ಕುರಿತು ಪ್ರಸ್ತಾಪಿಸಿದ ಸಚಿವರು, ನಾನು ಉನ್ನತ ಶಿಕ್ಷಣ ಸಚಿವನಾಗಿದ್ದಾಗ ಕ್ರೀಡಾಪಟುಗಳಿಗೆ ಮೊದಲ ಬಾರಿಗೆ ಮೀಸಲಾತಿ ಕಲ್ಪಿಸಲಾಯಿತು. ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿಯೂ ಶೇ. 3ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ಇಲಾಖೆಯ ನೇಮಕಾತಿಯಲ್ಲಿ ಮೀಸಲಾತಿ ಕಲ್ಪಿಸಿ, ಎಲ್ಲ ರೀತಿಯ ಉತ್ತೇಜನ ನೀಡುತ್ತಿದ್ದಾರೆ ಎಂದು ಹೇಳಿದರು.
ಬಳಿಕ ಕ್ರೀಡಾ ನಗರ ನಿರ್ಮಾಣದ ಕುರಿತು ಮಾತನಾಡಿದ ಸಚಿವ, ಬೆಂಗಳೂರು ಐಟಿ ಸಿಟಿ ಎಂದು ವಿಶ್ವದ ಗಮನ ಸೆಳೆದಿದೆ. ಇದೇ ರೀತಿ ಕ್ರೀಡೆಯಲ್ಲೂ ವಿಶ್ವದ ಗಮನ ಸೆಳೆಯಬೇಕಿದೆ. ಅದಕ್ಕಾಗಿ ದೇವನಹಳ್ಳಿ ಸಮೀಪ 60 ಎಕರೆ ಜಾಗದಲ್ಲಿ ಸ್ಪೋರ್ಟ್ಸ್ ಸಿಟಿ ನಿರ್ಮಿಸಲು ಸರ್ಕಾರ ಆದೇಶಿಸಿದೆ. ಇದರ ಜೊತೆಗೆ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಮ್ಯೂಸಿಯಂ ನಿರ್ಮಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ಬೆಂಗಳೂರು ಬಳಿ ಸ್ಪೋರ್ಟ್ಸ್ ಸಿಟಿ
ಭಾರತದ ಕ್ರೀಡಾಪಟುಗಳಿಗೆ ಯಾವುದೇ ರೀತಿಯ ಕೊರತೆಯಾಗಿಲ್ಲ. ಆದರೂ ಎಲ್ಲರ ನಿರೀಕ್ಷೆಯಂತೆ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಚಾಂಪಿಯನ್ಶಿಪ್, ಮೆಡಲ್ ತರಲಾಗುತ್ತಿಲ್ಲ. ಆಫ್ರಿಕಾ ದೇಶಗಳು ಸೇರಿದಂತೆ ಸಣ್ಣ ದೇಶಗಳಲ್ಲಿ ಕ್ರೀಡೆಗೆ ಯಾವ ಸವಲತ್ತುಗಳು ಇಲ್ಲ. ಒಲಂಪಿಕ್‌ನಲ್ಲಿ ಮೆಡಲ್ ತರುತ್ತಿದ್ದಾರೆ. ನಮ್ಮ ಯುವಕರು ಬೇರೆಯವರಿಗಿಂತ ಕಡಿಮೆಯೇನಿಲ್ಲ. ಆದರೆ, ದೃಢ ಸಂಕಲ್ಪ ಮತ್ತು ಛಲದ ಕೊರತೆಯಿಂದ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಇಂದಿನ ಅಥ್ಲೀಟ್ಸ್ಗೆ ಸಿಗುತ್ತಿರುವ ಸವಲತ್ತು ಈ ಹಿಂದೆ ಬೇರೆ ಯಾವ ಸರ್ಕಾರಗಳು ನೀಡಿಲ್ಲ. ರಾಜ್ಯದಲ್ಲಿ ಕಂಠೀವರ ಕ್ರೀಡಾಂಗಣದಲ್ಲಿ ಮಾತ್ರ ಒಂದೇ ಒಂದು ಸಿಂಡರ್ ಟ್ರ್ಯಾಕ್ ಇತ್ತು. ಈಗ ಸಿಂಥೆಟಿಕ್ ಟ್ರ್ಯಾಕ್ ಮಾಡಲಾಗಿದೆ. ರಾಜ್ಯದ 18 ಜಿಲ್ಲೆಗಳಲ್ಲಿ ಸಿಂಥೆಟಿಕ್ ಟ್ರ್ಯಾಕ್ ಹೊಂದಿರುವ ಕ್ರೀಡಾಂಗಣಗಳಿವೆ. ಕ್ರೀಡಾಪಟುಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಕಾರ ಪಡೆದು ಸಾಧನೆ ಮಾಡಿಯೇ ತೀರುತ್ತೇವೆ ಎಂಬ ಸಂಕಲ್ಪದೊಂದಿಗೆ ಆಡಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ರಾಜ್ಯದ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ FIBA ಏಷ್ಯಾ ಮತ್ತು ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷರೂ ಆಗಿರುವ ಎಂಎಲ್‌ಸಿ ಕೆ ಗೋವಿಂದರಾಜು ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


