CSR ನಿಧಿಯಡಿ 2000 ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಮುಂದು!
ಗ್ರಾಮೀಣ ಜನತೆ ತಮ್ಮ ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ಊರು ತೊರೆದು ಬೆಂಗಳೂರಿಗೆ ವಲಸೆ ಬರುವುದನ್ನು ತಡೆಯಲು ಗ್ರಾಮೀಣ ಶಾಲೆಗಳನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಸಿಎಸ್‌ಆರ್ ನಿಧಿಯನ್ನು ಶಾಲೆಗಳಿಗೆ ಬಳಸಲು ತೀರ್ಮಾನಿಸಿದ್ದೇವೆ.

ಬೆಂಗಳೂರು: ರಾಜ್ಯದಲ್ಲಿ 2000 ಶಾಲೆಗಳನ್ನು ಸಿಎಸ್‌ಆರ್ ನಿಧಿಯಡಿ ಅಭಿವೃದ್ದಿಪಡಿಸಲು ಗುರುತಿಸಲಾಗಿದ್ದು, ಉದ್ಯಮಿಗಳು ಇವುಗಳಲ್ಲಿ ಯಾವುದೇ ಶಾಲೆಗಳಲ್ಲಿ ಆಯ್ಕೆ ಮಾಡಿಕೊಂಡು ಅಭಿವೃದ್ಧಿಪಡಿಸಬಹುದು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸೋಮವಾರ ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯೋಜಿಸಿದ್ದ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಸಮಾವೇಶ -2024ರಲ್ಲಿ ಮಾತನಾಡಿದ ಅವರು, ಗ್ರಾಮೀಣ ಜನತೆ ತಮ್ಮ ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ಊರು ತೊರೆದು ಬೆಂಗಳೂರಿಗೆ ವಲಸೆ ಬರುವುದನ್ನು ತಡೆಯಲು ಗ್ರಾಮೀಣ ಶಾಲೆಗಳನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಸಿಎಸ್‌ಆರ್ ನಿಧಿಯನ್ನು ಶಾಲೆಗಳಿಗೆ ಬಳಸಲು ತೀರ್ಮಾನಿಸಿದ್ದೇವೆ. ಅದರಂತೆ ರಾಜ್ಯದಲ್ಲಿನ ಉದ್ಯಮಿಗಳು ರಾಜ್ಯದಲ್ಲೇ ತಮ್ಮ ಸಿಎಸ್‌ಆರ್ ನಿಧಿಯನ್ನು ಬಳಸುವಂತೆ ಜಿಲ್ಲಾಧಿಕಾರಿಗಳು ನಿಗಾ ಇಡಬೇಕು. ಜಿಲ್ಲೆ, ತಾಲೂಕು ಕೇಂದ್ರ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಹೊರಗಿನ ಶಾಲೆಗಳಲ್ಲಿ ಮಾತ್ರ ಸಿಎಸ್‌ಆರ್ ನಿಧಿ ಬಳಕೆ ಮಾಡಬೇಕು ಎಂದು ಹೇಳಿದರು,
ರಾಜ್ಯದಲ್ಲಿ 43 ದೊಡ್ಡ ಕಂಪನಿಗಳು 4 ಲಕ್ಷ ಕೋಟಿಗೂ ಹೆಚ್ಚಿನ ಲಾಭದಲ್ಲಿವೆ. ಲಾಭದಲ್ಲಿ 8063 ಕೋಟಿ ಸಿಎಸ್‌ಆರ್ ಫಂಡ್ ನೀಡುತ್ತಿವೆ, ಅದರಲ್ಲಿ ಒಂದು ಪೈಸೆಯನ್ನೂ ನಮಗೆ ನೀಡದೇ ನೇರವಾಗಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಬಳಸಬಹುದಾಗಿದೆ ಎಂದು ತಿಳಿಸಿದರು.
ಗ್ರಾಮೀಣ ಭಾಗದಲ್ಲಿಯೂ ನಗರದಲ್ಲಿ ಸಿಗುವ ಗುಣಮಟ್ಟದ ಶಿಕ್ಷಣ ಸಿಗಬೇಕು. ನಾನೇ ಇದಕ್ಕೆ ಉತ್ತಮ ಉದಾಹರಣೆ. ನಾನು ಶಿಕ್ಷಣ ಸಂಸ್ಥೆ ನಡೆಸುತ್ತಿದ್ದೇನೆ. ನಮ್ಮ ಆಸ್ತಿಯಲ್ಲೇ ಹತ್ತು ಎಕರೆ ಜಾಗ ಸರ್ಕಾರಿ ಶಾಲೆಗೆ ನೀಡಿದ್ದೇವೆ. ಬೇರೆಯವರಿಗೆ ಕೇಳುವ ಮೊದಲು ನಾವೇ ಆರಂಭಿಸಬೇಕು ಎಂದು ನಾನು ಜಾಗ ನೀಡಿದ್ದೇನೆ ಎಂದು ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಸಹಕಾರ ಕೋರುವ ನಿಲುವನ್ನು ಅರ್ಥಪೂರ್ಣವಾಗಿ ಅವರು ಸಮರ್ಥಿಸಿಕೊಂಡರು.
ಆರ್ಥಿಕ ಸಾಮರ್ಥ್ಯದ ಆಧಾರದ ಮೇಲೆ ಕಾರ್ಪೊರೇಟ್ ಸಂಸ್ಥೆಗಳು ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಕಟ್ಟಣ ನಿರ್ಮಾಣ, ಲ್ಯಾಬ್, ಗ್ರಂಥಾಲಯ, ಅಗತ್ಯ ಮೂಲಸೌಕರ್ಯ ಸೇರಿದಂತೆ ಇತರೆ ಸೌಲಭ್ಯಗಳೊಂದಿಗೆ ಶಾಲೆಗಳ ಸಜ್ಜುಗೊಳಿಸುವುದು, ವಿಸ್ತರಿಸುವ ಕೆಲಸವನ್ನು ಮಾಡಬಹುದು. ಇವೆಲ್ಲವನ್ನೂ ಒಂದೇ ಬಾರಿಗೆ ಮಾಡಬೇಕಿಲ್ಲ. ಅಧಿಕಾರಿಗಳೊಂದಿಗೆ ಕೈಜೋಡಿಸಿ ಕೆಲಸ ಮಾಡಬಹುದು. ಎಲ್ಲಾ ಕಂಪನಿಗಳು ಕೈಜೋಡಿಸಿ ಸಿಎಸ್‌ಆರ್ ದೇಣಿಗೆ ನೀಡಿದರೆ ಒಟ್ಟು ಸಿಎಸ್‌ಆರ್ ಒಟ್ಟು ಸಂಗ್ರಹ 10,000 ಕೋಟಿ ದಾಟಲಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



