ರಾಜ್ಯ

ಯಾರಾದರೂ ರಸ್ತೆ ದುರಸ್ತಿ ಮಾಡಿಸ್ರಪ್ಪಾ: ಕಂದಾಯ ಸಚಿವರ ಅಸಹಾಯಕ ಟ್ಟೀಟ್; ದರಿದ್ರ ನಾಲಾಯಕ್ ಸರ್ಕಾರ- ಅಶೋಕ್ ಕಿಡಿ

ಕೃಷ್ಣ ಭೈರೇಗೌಡರು ಅತ್ಯಂತ ಅಸಹಾಯಕರಾಗಿ ಬಿಬಿಎಂಪಿ ಮತ್ತು ಬಿಎಂಆರ್ ಸಿಎಲ್ ಅಧಿಕಾರಿಗಳಿಗೆ ರಸ್ತೆ ಗುಂಡಿ ಮುಚ್ಚುವಂತೆ ಸಾಮಾಜಿಕ ಜಾಲತಾಣದಲ್ಲಿ ಬೇಡಿಕೊಳ್ಳುತ್ತಿರುವುದನ್ನು ನೋಡಿದರೆ ಈ ರಾಜ್ಯದ ಕಾಂಗ್ರೆಸ್ ಸರ್ಕಾರ ಎಂತಹ ದರಿದ್ರ ನಾಲಾಯಕ್ ಸರ್ಕಾರ ಎಂಬುದು ಸ್ಪಷ್ಟವಾಗುತ್ತದೆ.

ಯಾರಾದರೂ ರಸ್ತೆ ದುರಸ್ತಿ ಮಾಡಿಸ್ರಪ್ಪಾ: ಕಂದಾಯ ಸಚಿವರ ಅಸಹಾಯಕ ಟ್ಟೀಟ್; ದರಿದ್ರ ನಾಲಾಯಕ್ ಸರ್ಕಾರ- ಅಶೋಕ್ ಕಿಡಿ
ಕೃಷ್ಣ ಬೈರೇಗೌಡ ಮತ್ತು ಆರ್ ಅಶೋಕ್
Published On :

ಬೆಂಗಳೂರು: ವೀರಣ್ಣಪಾಳ್ಯದಿಂದ ಹೆಬ್ಬಾಳ ಕಡೆಗಿನ ರಿಂಗ್ ರೋಡಿನ ಸರ್ವಿಸ್ ರಸ್ತೆಯ ವಿಡಿಯೋವನ್ನು ಸಾರ್ವಜನಿಕರು ನನಗೆ ಕಳಿಸಿದ್ದಾರೆ. ಬಿಬಿಎಂಪಿ ಆಯುಕ್ತರು ಅಥವಾ ಬಿಎಂಆರ್​​ ಸಿಎಲ್ ಎಂಡಿ ಯಾರಾದರೂ ಆಗಲಿ ದಯವಿಟ್ಟು ಗುಂಡಿಯನ್ನು ಮುಚ್ಚಿ ರಸ್ತೆ ದುರಸ್ಥಿ ಮಾಡಿ ಸಾರ್ವಜನಿಕರ ಸಮಸ್ಯೆಯನ್ನು ಪರಿಹರಿಸಿ ಎಂದು ಕೃಷ್ಣಭೈರೇಗೌಡ ಟ್ವೀಟ್​​​ನಲ್ಲಿ ಉಲ್ಲೇಖಿಸಿದ್ದಾರೆ.

ಸಚಿವ ಕೃಷ್ಣ ಬೈರೇಗೌಡ ಮಾಡಿರುವ ಟ್ವೀಟ್ ಹಲವು ಸಂದೇಹಗಳಿಗೆ ಕಾರಣವಾಗಿದೆ, ಡಿಸಿಎಂ ಡಿ.ಕೆ ಶಿವಕುಮಾರ್ ಬ್ರ್ಯಾಂಡ್​​​ ಬೆಂಗಳೂರು ಎಂದು ಭಾಷಣ ಮಾಡುತ್ತಿದ್ದರೆ,ಇತ್ತ ಅವರದ್ದೇ ಸರ್ಕಾರದ ಸಚಿವರು ನೇರವಾಗಿ ಬೆಂಗಳೂರಿನ ರಸ್ತೆ ಸಮಸ್ಯೆ ಬಗ್ಗೆ ಹೇಳಿಕೊಳ್ಳಲಾಗದೆ ಈ ರೀತಿ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶಗಳನ್ನು ಪ್ರಕಟಿಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

ಕಂದಾಯ ಸಚಿವರು ಮತ್ತು ಬ್ಯಾಟರಾಯನಪುರ ಶಾಸಕರಾದ ಕೃಷ್ಣ ಭೈರೇಗೌಡರು ಅತ್ಯಂತ ಅಸಹಾಯಕರಾಗಿ ಬಿಬಿಎಂಪಿ ಮತ್ತು ಬಿಎಂಆರ್ ಸಿಎಲ್ ಅಧಿಕಾರಿಗಳಿಗೆ ರಸ್ತೆ ಗುಂಡಿ ಮುಚ್ಚುವಂತೆ ಸಾಮಾಜಿಕ ಜಾಲತಾಣದಲ್ಲಿ ಬೇಡಿಕೊಳ್ಳುತ್ತಿರುವುದನ್ನು ನೋಡಿದರೆ ಈ ರಾಜ್ಯದ ಕಾಂಗ್ರೆಸ್ ಸರ್ಕಾರ ಎಂತಹ ದರಿದ್ರ ನಾಲಾಯಕ್ ಸರ್ಕಾರ ಎಂಬುದು ಸ್ಪಷ್ಟವಾಗುತ್ತದೆ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕಿಡಿ ಕಾರಿದ್ದಾರೆ.

ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಸಚಿವ ಕೃಷ್ಣ ಬೈರೇಗೌಡ ಅವರೇ ಆದೇಶ ಮಾಡಿ ಕೆಲಸ ಮಾಡಿಸಬೇಕಾದ ಸ್ಥಾನದಲ್ಲಿರುವ ತಾವು ಬಿಬಿಎಂಪಿ ಅಧಿಕಾರಿಗಳಿಗೆ ಇಷ್ಟೊಂದು ಅಸಹಾಯಕರಾಗಿ ಅಂಗಲಾಚುತ್ತಿದ್ದೀರಲ್ಲ, ಬೆಂಗಳೂರು ಅಭಿವೃದ್ಧಿ ಸಚಿವರು ತಮ್ಮ ಕೆಲಸ ಮಾಡುತ್ತಿಲ್ಲ ಎಂದು ಪರೋಕ್ಷವಾಗಿ ಟಾಂಗ್ ಕೊಡುತ್ತಿದ್ದೀರೋ? ಅಥವಾ ಇದು ಡಿಸಿಎಂ ಡಿಕೆ ಶಿವಕುಮಾರ್ ಅವರ ವಿರುದ್ಧ ಬಹಿರಂಗ ಬಂಡಾಯದ ಮುನ್ಸೂಚನೆಯೋ? ಎಂದು ಪ್ರಶ್ನಿಸಿದ್ದಾರೆ. ಸಿಎಂ ಸಿದ್ದರಾಮಯ್ಯನವರೇ, ತಮ್ಮ ಸಂಪುಟದಲ್ಲಿ ಸಚಿವರ ಮಧ್ಯೆ ಪರಸ್ಪರ ಒಂದು ಸ್ವಲ್ಪವೂ ತಾಳಮೇಳವಿಲ್ಲವೇ? ಒಬ್ಬ ಸಚಿವರು ಮತ್ತೊಬ್ಬ ಸಚಿವರ ಕರೆ ಸ್ವೀಕರಿಸುವುದಿಲ್ಲವೇ? ನಿಮ್ಮ ಸರ್ಕಾರದಲ್ಲಿ ಏನಾಗುತ್ತಿದೆ? ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.