ರಾಜ್ಯ

ಬೆಂಗಳೂರು-ಧಾರವಾಡ KIADB ಕಚೇರಿ ಮೇಲೆ ಇಡಿ ದಾಳಿ: ಭೂ ಸ್ವಾಧೀನ ನೆಪದಲ್ಲಿ ಕೋಟಿ ಕೋಟಿ ಲೂಟಿ ಪತ್ತೆ!

ಒಂದೇ ಭೂಮಿಗೆ ಎರಡೆರಡು ಬಾರಿ ಪರಿಹಾರ ನೀಡುವ ನೆಪದಲ್ಲಿ ಹಣಕಾಸಿನ ಅಕ್ರಮ, ರೈತರ ಹೆಸರಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ಓಪನ್‌ ಮಾಡಿ ಕಾಸು ಲಪಟಾಯಿಸಿರುವುದು ಕಂಡುಬಂದಿತ್ತು.

ಬೆಂಗಳೂರು-ಧಾರವಾಡ KIADB ಕಚೇರಿ ಮೇಲೆ ಇಡಿ ದಾಳಿ: ಭೂ ಸ್ವಾಧೀನ ನೆಪದಲ್ಲಿ ಕೋಟಿ ಕೋಟಿ ಲೂಟಿ ಪತ್ತೆ!
ಸಂಗ್ರಹ ಚಿತ್ರ
Published On :

ಬೆಂಗಳೂರು: ಬೆಂಗಳೂರು ಮತ್ತು ಧಾರವಾಡದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಕಚೇರಿಗಳ ಮೇಲೆ ಶುಕ್ರವಾರ ನಡೆಸಿದ್ದ ಜಾರಿ ನಿರ್ದೇಶನಾಲಯ ಅಧಿಕಾರಿಗಳ ದಾಳಿ, ಶನಿವಾರವೂ ಮುಂದುವರೆದಿತ್ತು.

ಭೂ ಸ್ವಾಧೀನ ಹೆಸರಲ್ಲಿ ಕೆಐಇಡಿಬಿ ಅಧಿಕಾರಿಗಳು ನೂರಾರು ಕೋಟಿ ಲೂಟಿ ಮಾಡಿದ ಆರೋಪ ಕೇಳಿಬಂದಿತ್ತು. ಒಂದೇ ಭೂಮಿಗೆ ಎರಡೆರಡು ಬಾರಿ ಪರಿಹಾರ ನೀಡುವ ನೆಪದಲ್ಲಿ ಹಣಕಾಸಿನ ಅಕ್ರಮ, ರೈತರ ಹೆಸರಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ಓಪನ್‌ ಮಾಡಿ ಕಾಸು ಲಪಟಾಯಿಸಿರುವುದು ಕಂಡುಬಂದಿತ್ತು.

IDBI ಬ್ಯಾಂಕ್‌ನ ಒಂದೇ ಶಾಖೆಯಲ್ಲಿ 24 ನಕಲಿ ಖಾತೆಗಳನ್ನು ತೆರೆದು ಹಣ ಕಳುಹಿಸಲಾಗಿತ್ತು. ಹುಬ್ಬಳ್ಳಿ ವಿಮಾನ ನಿಲ್ದಾಣದ ಭೂ ಸ್ವಾಧೀನದ ಹೆಸರಲ್ಲಿ, ಧಾರವಾಡ ಕೆಲಗೇರಿ ಹಾಗು ಮುಮ್ಮಿಗಟ್ಟಿ ಗ್ರಾಮಗಳಲ್ಲಿ ಭೂ ಸ್ವಾಧೀನ ಹೆಸರಲ್ಲಿಯೂ ಲೂಟಿ ಮಾಡಿರುವುದು ಕಂಡು ಬಂದಿತ್ತು.

ಆರೋಪ ಹಿನ್ನೆಲೆಯಲ್ಲಿ ಆರ್ ಆರ್ ನಗರದಲ್ಲಿರುವ ಟೆಂಪಲ್ ಬೆಲ್ ಅಪಾರ್ಟ್ಮೆಂಟ್ ನಲ್ಲಿ ವಾಸವಿರುವ ವಾಣಿ ನಿವಾಸ ಹಾಗೂ ಕಚೇರಿ ಮೇಲೆ ಇಡಿ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದರು. ಬಳಿಕ ಬೆಂಗಳೂರಿನ ಖನಿಜ ಭವನದಲ್ಲಿರುವ ಕೆಐಎಡಿಬಿ ಪ್ರಧಾನ ಕಚೇರಿ ಮೇಲೂ ದಾಳಿ ನಡೆಸಿತು. ಇದರ ಬೆನ್ನಲ್ಲೇ ಶನಿವಾರ ಕೆಐಎಡಿಬಿಯ ಧಾರವಾಡ ಕಚೇರಿಯ ಮೇಲೂ ದಾಳಿ ನಡೆಸಿದ ಅಧಿಕಾರಿಗಳು ದಾಖಲೆ ಹಾಗೂ ಕಡತಗಳನ್ನು ಪರಿಶೀಲನೆ ನಡೆಸಿದರು.

ಮೂಲಗಳ ಪ್ರಕಾರ, ಧಾರವಾಡದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರೊಬ್ಬರು ನೀಡಿದ ದೂರಿನ ಮೇರೆಗೆ ಈ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.

ಆರೋಪಕ್ಕೆ ಸಂಬಂಧಿಸಿದಂತೆ 2022 ಮತ್ತು 2023 ರಲ್ಲಿಯೇ ಧಾರವಾಡದಲ್ಲಿ ನಾಲ್ಕು ಎಫ್‌ಐಆರ್‌ಗಳು ದಾಖಲಾಗಿದ್ದು, ನಾಲ್ಕರ ಪೈಕಿ ಒಂದು ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದ್ದು, ಉಳಿದ ಪ್ರಕರಣಗಳನ್ನು ಸ್ಥಳೀಯ ಪೊಲೀಸರ ತನಿಖೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.