ಮಂಗಳೂರಿನಲ್ಲಿ ಸುರಿದ ಮಳೆಗೆ ಹಲವು ಪ್ರದೇಶಗಳು ಜಲಾವೃತ: ಮನೆ ಗೋಡೆ ಕುಸಿದು ಮಹಿಳೆ ಸಾವು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದ್ದು, ಹಲವು ಪ್ರದೇಶಗಳು ಜಲಾವೃತವಾಗಿವೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದ್ದು, ಹಲವು ಪ್ರದೇಶಗಳು ಜಲಾವೃತವಾಗಿವೆ.
ಬಂಟ್ವಾಳ ತಾಲೂಕಿನ ಪಾಣೆಮಂಗಳೂರು, ಮೂಡುಬಿದಿರೆಯ ಹೊಸಂಗಡಿ, ಬೆಳ್ತಂಗಡಿ ತಾಲೂಕಿನ ವೇಣೂರು ಮತ್ತು ಮರೋಡಿ, ಮಂಗಳೂರು ಸಮೀಪದ ಉಳಾಯಿಬೆಟ್ಟು ಮತ್ತು ಮೂಡುಶೆಡ್ಡೆ ಸೇರಿದಂತೆ ಹಲವು ಕಡೆ ಮಳೆಗಾಲದ ಬಿಸಿ ತಟ್ಟಿದ್ದು, ನೂರಾರು ಮನೆಗಳು ಜಲಾವೃತಗೊಂಡಿದ್ದು, ಸಾವಿರಾರೂ ಜನರನ್ನು ಸ್ಥಳಾಂತರಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ ದಕ್ಷಿಣ ಕನ್ನಡದಲ್ಲಿ 107.3 ಮಿ.ಮೀ ಮಳೆಯಾಗಿದೆ. ಮೂಡುಬಿದಿರೆ ಮತ್ತು ಬೆಳ್ತಂಗಡಿಯಲ್ಲಿ ಕ್ರಮವಾಗಿ 198.4 ಮತ್ತು 150.1 ಮಿ.ಮೀ ಮಳೆಯಾಗಿದೆ. ಗುರುವಾರ ಉಳಾಯಿಬೆಟ್ಟು ಮತ್ತು ಇತರ ಜಲಾವೃತ ಪ್ರದೇಶಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಫಲ್ಗುಣಿಯ ಜಲಾನಯನ ಪ್ರದೇಶವಾದ ಬೆಳ್ತಂಗಡಿ ಮತ್ತು ಮೂಡುಬಿದಿರೆಯಲ್ಲಿ ಸುರಿದ ಮಳೆಯಿಂದಾಗಿ ನದಿಯು ಅನೇಕ ಪ್ರದೇಶಗಳಿಗೆ ಪ್ರವಾಹಕ್ಕೆ ಕಾರಣವಾಗಿದೆ. ಕನಿಷ್ಠ 10 ಸ್ಥಳಗಳಲ್ಲಿ 150 ಮಿ.ಮೀ ಗಿಂತ ಹೆಚ್ಚು ಮಳೆಯಾಗಿದೆ. ಮಂಗಳೂರು ಸಮೀಪದ ಶಿರ್ಟಾಡಿಯಲ್ಲಿ ಅತಿ ಹೆಚ್ಚು 269 ಮಿ.ಮೀ ಮಳೆಯಾಗಿದೆ ಎಂದರು.
ಗುರುಪುರ ನದಿ ಉಕ್ಕಿ ಹರಿಯುತ್ತಿರುವುದರಿಂದ ಮಂಗಳೂರು ಸಮೀಪದ ಅದ್ಯಪಾಡಿ ಗ್ರಾಮದ ಸುಮಾರು 25 ಮನೆಗಳು ಜಲಾವೃತಗೊಂಡಿವೆ. ಶಾಸಕ ಭರತ್ ಶೆಟ್ಟಿ ಮತ್ತು ಸಹಾಯಕ ಆಯುಕ್ತ ಹರ್ಷವರ್ಧನ್ ಅವರು ಎನ್ಡಿಆರ್ಎಫ್ ಸಿಬ್ಬಂದಿಯೊಂದಿಗೆ ಬೋಟ್ನಲ್ಲಿ ಸ್ಥಳಕ್ಕೆ ಭೇಟಿ ನೀಡಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡಿದರು. ಆರಂಭದಲ್ಲಿ ಹೆಚ್ಚಿನ ಸಂತ್ರಸ್ತ ಜನರು ತಮ್ಮ ಜಾನುವಾರುಗಳನ್ನು ಬಿಟ್ಟು ಚಲಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಸ್ಥಳಾಂತರಿಸುವುದನ್ನು ವಿರೋಧಿಸಿದರು. ಆದರೆ ನಂತರ ನದಿಯಲ್ಲಿ ಹೆಚ್ಚುತ್ತಿರುವ ನೀರಿನ ಮಟ್ಟ ಕುರಿತು ತಿಳಿಸಿ ಮನವರಿಕೆ ಮಾಡಲಾಗಿದೆ.
ಮೂಡುಬಿದಿರೆ ತಾಲೂಕಿನ ನೆಲ್ಲಿಕಾರ್ ಗ್ರಾಮದಲ್ಲಿ ಬುಧವಾರ ರಾತ್ರಿ ಮನೆ ಕುಸಿದು ಮಹಿಳೆ ಸಾವನ್ನಪ್ಪಿದ್ದಾರೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಡಿಡಿಎಂಸಿ) ಮೂಲಗಳ ಪ್ರಕಾರ, ಮೃತ ಗೋಪಿ (56) ಮತ್ತು ಇತರ ಐವರು ಮಲಗಿದ್ದಾಗ ಮನೆ ಕುಸಿದಿದೆ. ಈ ಗಂಭೀರವಾಗಿ ಗಾಯಗೊಂಡಿದ್ದ ಗೋಪಿ ಅವರನ್ನು ಕಾರ್ಕಳದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕುಟುಂಬದ ಇತರ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಜಿಲ್ಲಾ ಸಚಿವ ದಿನೇಶ್ ಗುಂಡೂರಾವ್ ನಾಳೆ ದಕ್ಷಿಣ ಕನ್ನಡಕ್ಕೆ ಭೇಟಿ ನೀಡಿ ಮಳೆ ಪೀಡಿತ ಪ್ರದೇಶಗಳ ಪರಿಶೀಲನೆ ನಡೆಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



