ಬೆಂಗಳೂರು ಜಲಕ್ಷಾಮ: ಸಂಸ್ಕರಿಸಿದ ನೀರು ಬಳಕೆಗೆ ಮಾರ್ಗಸೂಚಿ ರೂಪಿಸಿದ ಸರ್ಕಾರ!
ಬೆಂಗಳೂರು ಸೇರಿದಂತೆ ರಾಜ್ಯದ ಇತರ ಭಾಗಗಳಲ್ಲಿನ ನೀರಿನ ಬಿಕ್ಕಟ್ಟು ತಲೋರಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಂಸ್ಕರಿಸಿದ ನೀರಿನ ಬಳಕೆಗೆ ಮಾರ್ಗಸೂಚಿಗಳನ್ನು ರೂಪಿಸಿದೆ.

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಇತರ ಭಾಗಗಳಲ್ಲಿನ ನೀರಿನ ಬಿಕ್ಕಟ್ಟು ತಲೋರಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಂಸ್ಕರಿಸಿದ ನೀರಿನ ಬಳಕೆಗೆ ಮಾರ್ಗಸೂಚಿಗಳನ್ನು ರೂಪಿಸಿದೆ.
ವಸತಿ ಸಮುಚ್ಚಯಗಳು ಕನಿಷ್ಠ ಶೇ.50 ಸಂಸ್ಕರಿಸಿದ ನೀರನ್ನು ಬಳಕೆ ಮಾಡಬೇಕು. ಉಳಿದ ನೀರನ್ನು ವಾಣಿಜ್ಯ ಉದ್ದೇಶಗಳಿಗೆ ಬಳಕೆ ಮಾಡಬಹುದು ಎಂದು ಹೇಳಿದೆ. ಈ ಸಂಬಂಧ ಏಪ್ರಿಲ್ 3 ರಂದು ಗೆಜೆಟ್ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.
ಸಂಸ್ಕರಿಸಿದ ನೀರನ್ನು ನಿರ್ಮಾಣ, ಕೈಗಾರಿಕೆ, ತೋಟಗಾರಿಕೆ ಮತ್ತಿತರ ಉದ್ದೇಶಗಳಿಗೆ ಬಳಸಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಕುಡಿಯುವ, ಔಷಧೀಯ ಅಥವಾ ಆಹಾರ ಸಂಸ್ಕರಣಾ ಉದ್ದೇಶಗಳಿಗಾಗಿ ಸಂಸ್ಕರಿಸಿದ ನೀರನ್ನು ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ವಿಧಾನವು ಜಲಸಂಪನ್ಮೂಲಗಳನ್ನು ಸಂರಕ್ಷಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದೆ.
ಸಂಸ್ಕರಿಸಿದ ನೀರು ಬಳಕೆ ಕುರಿತು ಸಾಕಷ್ಟು ಅಧಿಕಾರಿಗಳು ಹೇಳಿಕೆಗಳನ್ನು ನೀಡುತ್ತಿದ್ದರು, ಆದರೆ, ನೀರಿನ ಬಳಕೆ ವಿಧಾನದ ಬಗ್ಗೆ ಮಾತ್ರ ಈ ವರೆಗೂ ಯಾವುದೇ ಸ್ಪಷ್ಟ ಮಾಹಿತಿಗಳಿರಲಿಲ್ಲ. ಇದೀಗ ಸರ್ಕಾರ ಮಾರ್ಗಸೂಚಿ ಹೊರಡಿಸಿರುವುದು ಸಹಾಯಕವಾಗಿದೆ.
ಫೆಬ್ರವರಿಯಲ್ಲಿ ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಸ್ಕರಿಸಿದ ನೀರು ಬಳಕೆ ಕುರಿತು ಮಾತನಾಡಿದ್ದರು. ಈ ಕುರಿತು ಶೀಘ್ರದಲ್ಲೇ ಮಾರ್ಗಸೂಚಿ ರೂಪಿಸುವುದಾಗಿ ತಿಳಿಸಿದ್ದರು. ಇದೀಗ ಸರ್ಕಾರ ಮಾರ್ಗಸೂಚಿಯನ್ನು ರೂಪಿಸಿದೆ. ಸರ್ಕಾರದ ಈ ಕ್ರಮನ್ನು ಮಳೆನೀರು ಕೊಯ್ಲು ತಜ್ಞ ಎಸ್ ವಿಶ್ವನಾಥ್ ಅವರು ಸ್ವಾಗತಿಸಿದ್ದಾರೆ.
ನಗರದ ಹಲವು ಅಪಾರ್ಟ್ ಮೆಂಟ್ ಗಳು ಹೆಚ್ಚುವರಿ ಸಂಸ್ಕರಿಸಿದ ನೀರನ್ನು ಹೊಂದಿವೆ. ಆದರೆ, ಬಳಕೆ ಬಗ್ಗೆ ಅವರಿಗೆ ಮಾಹಿತಿಯಿಲ್ಲ. ಹೀಗಾಗಿ ಆ ನೀರನ್ನು ಚರಂಡಿಗಳಿಗೆ ಹರಿ ಬಿಡುತ್ತಿದ್ದಾರೆಂದು ಹೇಳಿದ್ದಾರೆ.
ಇದೊಂದು ಉತ್ತಮ ನಡೆ, ಆದರೆ ಎಚ್ಚರಿಕೆಯಿಂದ ನಿಗಾ ವಹಿಸಬೇಕು. “ಅಗತ್ಯವಿದ್ದರೆ ಕಾನೂನನ್ನು ಬದಲಾಯಿಸುವಲ್ಲಿ ಸರ್ಕಾರವು ಕ್ರಿಯಾತ್ಮಕವಾಗಿರಬೇಕು. ಹಳೆಯ ಕಾನೂನನ್ನು ಬದಲಾಯಿಸಲು ಬಹಳ ಸಮಯ ಬೇಕಾಗಿತ್ತು. ಹೆಚ್ಚುವರಿ ಸಂಸ್ಕರಿಸಿದ ನೀರನ್ನು ಸಂಪೂರ್ಣವಾಗಿ ಬಳಸಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಸಂಸ್ಕರಿಸಿದ ನೀರನ್ನು ಶೇ.50ರವರೆಗೆ ಮಾರಾಟ ಮಾಡಲು ಇದೀಗ ಅನುಮತಿ ಇರುವುದರಿಂದ ಈ ನೀರಿಗೆ ಮಾರುಕಟ್ಟೆ ಸೃಷ್ಟಿಸಬಹುದು ಎಂದು ತಿಳಿಸಿದ್ದಾರೆ.
ರಿಯಲ್ ಎಸ್ಟೇಟ್ ಸಂಬಂಧಿತ ಅಂಶಗಳಲ್ಲಿ ಪರಿಣತಿ ಹೊಂದಿರುವ ಬೆಂಗಳೂರು ಮೂಲದ ವಕೀಲ ಪ್ರಶಾಂತ್ ಮಿರ್ಲೆ ಎಂಬುವವರು ಮಾತನಾಡಿ, ಮಾಲಿನ್ಯ ನಿಯಂತ್ರಣ ಮಂಡಳಿಯ ಮಾನದಂಡಗಳಿಗೆ ಅನುಗುಣವಾಗಿ ಸಂಸ್ಕರಿಸಿದ ನೀರಿನ ಸಮರ್ಥ ಬಳಕೆ ಮಾಡಬಹುದು. ಇದರಿಂದ ನಗರದ ನೀರಿನ ಕೊರತೆಯನ್ನು ನಿಭಾಯಿಸಬಹುದು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



