ಸಾಲದ ದುಡ್ಡೆಲ್ಲಾ ಎಲ್ಲಿ ಹೋಗುತ್ತಿದೆ? ಹೆಚ್ಚಾದ ಬಜೆಟ್ ಗಾತ್ರವೆಲ್ಲಾ ಎಲ್ಲಿ ಹೋಯ್ತು? ಸಿದ್ದರಾಮಯ್ಯಗೆ ಆರ್. ಅಶೋಕ್ ಪ್ರಶ್ನೆ
ಮಾನ್ಯ ಸಿಎಂ ಸಿದ್ದರಾಮಯ್ಯ ನಾನು ತಮ್ಮಂತೆ ಸ್ವಯಂ ಘೋಷಿತ ಆರ್ಥಿಕ ತಜ್ಞನಲ್ಲ. ಆದರೆ ತಮ್ಮಂತೆ ನನಗೊಬ್ಬನಿಗೇ ಎಲ್ಲವೂ ಗೊತ್ತು ಎಂಬ ಅಹಂಕಾರವೂ ಇಲ್ಲ.

ಬೆಂಗಳೂರು: ಮಾನ್ಯ ಸಿಎಂ ಸಿದ್ದರಾಮಯ್ಯ ನಾನು ತಮ್ಮಂತೆ ಸ್ವಯಂ ಘೋಷಿತ ಆರ್ಥಿಕ ತಜ್ಞನಲ್ಲ. ಆದರೆ ತಮ್ಮಂತೆ ನನಗೊಬ್ಬನಿಗೇ ಎಲ್ಲವೂ ಗೊತ್ತು ಎಂಬ ಅಹಂಕಾರವೂ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್ ,ಅಶೋಕ್ ಕಿಡಿಕಾರಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅಶೋಕ್, ಕೇಂದ್ರ ಸರ್ಕಾರ ಮಾಡಿರುವ ಸಾಲಕ್ಕೂ, ತಾವು ಮಾಡಿರುವ ಸಾಲಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ನಿಮಗೆ ಅರ್ಥವಾಗುವುದಿದ್ದರೆ ಓದಿಕೊಳ್ಳಿ. ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹೆಚ್ಚಿನ ಗಮನ ಹರಿಸಿದ್ದು, 2024ರ ಮಧ್ಯಂತರ ಬಜೆಟ್ನಲ್ಲಿ ಬಂಡವಾಳ ವೆಚ್ಚವನ್ನು ಸತತ ನಾಲ್ಕನೇ ವರ್ಷವೂ ಶೇ.11.1ರಷ್ಟು ಹೆಚ್ಚಿಸಿದೆ. ಇದರಿಂದ ಬಂಡವಾಳ ವೆಚ್ಚ 11.11 ಲಕ್ಷ ಕೋಟಿ ರೂ.ಗೆ ಏರಿಕೆಯಾಗಲಿದೆ. ಇದು ದೇಶದ ಜಿಡಿಪಿಯ ಶೇ. 3.4ರಷ್ಟು ಆಗಿದೆ.
ಅದೇ ನಿಮ್ಮ ಕಾರ್ಯವೈಖರಿ ನೋಡಿ. 2023-24 ರಲ್ಲಿ ತಾವು ಮಂಡಿಸಿದ ಬಜೆಟ್ ಗಾತ್ರ 3.27 ಲಕ್ಷ ಕೋಟಿ. ಅದರಲ್ಲಿ ಬಂಡವಾಳ ವೆಚ್ಚಕ್ಕೆ ತಾವು ಮೀಸಲಿಟ್ಟಿದ್ದು 54,000 ಕೋಟಿ. ಅದೇ 2024-2025ರ ಆರ್ಥಿಕ ಸಾಲಿಗೆ ತಾವು ಮಂಡಿಸಿರುವ ಕರ್ನಾಟಕದ ಬಜೆಟ್ ಗಾತ್ರ 3,71,383 ಕೋಟಿ. ಅಂದರೆ 2023-24 ರಲ್ಲಿ ತಾವು ಮಂಡಿಸಿದ 3.27 ಲಕ್ಷ ಕೋಟಿಗಿಂತ ದೊಡ್ಡದು. ಜೊತೆಗೆ ಕಳೆದ ವರ್ಷಕ್ಕಿಂತ ಸುಮಾರು 25 ಸಾವಿರ ಕೋಟಿ ರೂ. ಹೆಚ್ಚಿನ ಸಾಲ ಕೂಡ ಮಾಡಿದ್ದೀರಿ. ಆದರೆ ಬಂಡವಾಳ ವೆಚ್ಚಕ್ಕೆ ತಾವು ಮೀಸಲಿಟ್ಟಿದ್ದು ಕೇವಲ 55,000 ಕೋಟಿ, ಅಂದರೆ ಕಳೆದ ವರ್ಷಕ್ಕಿಂತ ಹೆಚ್ಚಾದ ಮೊತ್ತ ಎಷ್ಟು? ಕೇವಲ 1,000 ಕೋಟಿ. ಅಂದರೆ ಬಂಡವಾಳ ವೆಚ್ಚ ಹೆಚ್ಚಳವಾಗಿದ್ದು ಕೇವಲ 1.85%. ಎಂದು ಬರೆದುಕೊಂಡಿದ್ದಾರೆ.
ಬಜೆಟ್ ಗಾತ್ರ ಹೆಚ್ಚಾದರೂ, ಸಾಲ ಹೆಚ್ಚಾದರೂ, ಬಂಡವಾಳ ವೆಚ್ಚ ಮಾತ್ರ ಯಾಕೆ ಅದೇ ಪ್ರಮಾಣದಲ್ಲಿ ಹೆಚ್ಚಾಗುತ್ತಿಲ್ಲ ಸಿಎಂ ಸಿದ್ದರಾಮಯ್ಯನವರೇ? ಸಾಲದ ದುಡ್ಡೆಲ್ಲಾ ಎಲ್ಲಿ ಹೋಗುತ್ತಿದೆ? ಹೆಚ್ಚಾದ ಬಜೆಟ್ ಗಾತ್ರವೆಲ್ಲಾ ಎಲ್ಲಿ ಹೋಯ್ತು? ನಿಮ್ಮ ಬಳಿ ಇದಕ್ಕೆಲ್ಲಾ ಉತ್ತರ ಇದೆಯೇ? ಎಂದು ಪ್ರಶ್ನಿಸಿದ್ದಾರೆ.
ಇದಕ್ಕೂ ಮುನ್ನ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ' ಅಶೋಕ ಅವರೇ, ನಿಮಗೆ ಈ ಆರ್ಥಿಕ ವ್ಯವಹಾರಗಳು ಅರ್ಥವಾಗುವುದಿದ್ದರೆ ಸ್ವಲ್ಪ ಕೇಳಿಸಿಕೊಳ್ಳಿ. ನಮ್ಮ ರಾಜ್ಯ ಸರ್ಕಾರದ ಸಾಲ ‘ಹಣಕಾಸು ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣಾ ಕಾಯ್ದೆ (ಎಫ್‌ಆರ್‌ಬಿ)ಯ ವ್ಯಾಪ್ತಿಯಲ್ಲಿಯೇ ಇದೆ. ನಮ್ಮ ಸಾಲ ಒಟ್ಟು ಸಾಲ ಒಂದು ಲಕ್ಷ ಕೋಟಿಯನ್ನು ಮೀರಿದ್ದರೂ ಅದು ನಮ್ಮ ಜಿಎಸ್‌ಡಿಪಿಯ ಶೇ 25ರ ಮಿತಿಯೊಳಗೆಯೇ ಇದೆ. ನಮ್ಮ ಹಣಕಾಸು ಕೊರತೆ ಕೂಡಾ ಜಿಎಸ್‌ಡಿಪಿಯ ಶೇಕಡಾ ಮೂರನ್ನು ಮೀರಿಲ್ಲ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



