ಕಸ್ತೂರಿರಂಗನ್ ವರದಿ ವಿವಾದ: ಕೇರಳ ಮಾದರಿ ಅನುಸರಿಸಿ ಭೌತಿಕ ಸಮೀಕ್ಷೆ ನಡೆಸಿ; ಸರ್ಕಾರಕ್ಕೆ ಆರ್. ಅಶೋಕ್ ಒತ್ತಾಯ
ವರದಿಯಲ್ಲಿ ಕರ್ನಾಟಕದ 1,576 ಗ್ರಾಮಗಳ 20,668 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ. ಇದು ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಅತಿ ಹೆಚ್ಚಿನ ಪ್ರಮಾಣವಾಗಿದೆ.

ಬೆಂಗಳೂರು: ಕಸ್ತೂರಿರಂಗನ್ ವರದಿ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ಕೇರಳ ಮಾದರಿಯಲ್ಲಿ ಭೌತಿಕ ಸಮೀಕ್ಷೆ ನಡೆಸಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ ಸೋಮವಾರ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪರಿಸರ ಮತ್ತು ಅರಣ್ಯ ವಿಚಾರಗಳಲ್ಲಿ ಪರಿಣತಿ ಹೊಂದಿರುವ ಕಾನೂನು ತಜ್ಞರ ತಂಡವನ್ನು ರಚಿಸಿ, ಈ ವಿಚಾರವನ್ನು ಕಾನೂನುಬದ್ಧವಾಗಿ ಎದುರಿಸಬೇಕು ಎಂದೂ ಅವರು ಆಗ್ರಹಿಸಿದರು.
ಬರ ಪರಿಸ್ಥಿತಿ ಹಾಗೂ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶಗಳಿಗೆ (ಇಎಸ್‌ಎ) ಸಂಬಂಧಿಸಿದ ಕಸ್ತೂರಿರಂಗನ್ ವರದಿ ಕುರಿತು ಚರ್ಚಿಸಲು ವಿಧಾನಸೌಧದಲ್ಲಿ ಆರಂಭವಾದ ಮೂರು ದಿನಗಳ ವಿಶೇಷ ಅಧಿವೇಶನದ ಮೊದಲ ದಿನ ಆರ್.ಅಶೋಕ್ ಅವರು ಮಾತನಾಡಿದರು.
ವರದಿಯಲ್ಲಿ ಕರ್ನಾಟಕದ 1,576 ಗ್ರಾಮಗಳ 20,668 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ. ಇದು ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಅತಿ ಹೆಚ್ಚಿನ ಪ್ರಮಾಣವಾಗಿದೆ. ಮಹಾರಾಷ್ಟ್ರದಲ್ಲಿ 17,000 ಚದರ ಕಿ.ಮೀ, ಕೇರಳದಲ್ಲಿ 9,000 ಚದರ ಕಿ.ಮೀ, ತಮಿಳುನಾಡಿನಲ್ಲಿ 6,000 ಚದರ ಕಿ.ಮೀ ಹಾಗೂ ಗೋವಾದಲ್ಲಿ 1,400 ಚದರ ಕಿ.ಮೀ ಪ್ರದೇಶವನ್ನು ಗುರುತಿಸಲಾಗಿದೆ.
ಕಸ್ತೂರಿರಂಗನ್ ಸಮಿತಿ ಸಮೀಕ್ಷೆ ನಡೆಸುವಾಗ ಉಪಗ್ರಹ ಚಿತ್ರಗಳನ್ನು ಬಳಸಿದೆ. ಇದರಿಂದ ಕಾಫಿ ತೋಟಗಳು, ಕೃಷಿ ಭೂಮಿ, ಅಡಿಕೆ ತೋಟಗಳು ಹಾಗೂ ಇತರ ಹಸಿರು ಪ್ರದೇಶಗಳೂ ಅರಣ್ಯವೆಂದು ಗುರುತಿಸಲ್ಪಟ್ಟಿವೆ. ಇದರಿಂದ ಕರ್ನಾಟಕದ 10 ಜಿಲ್ಲೆಗಳ ಲಕ್ಷಾಂತರ ರೈತರಿಗೆ ಸಮಸ್ಯೆ ಉಂಟಾಗಿದೆ. ಇದು ತಾಂತ್ರಿಕ ವಿಚಾರವಾಗಿದೆಯ
ವರದಿ ಜಾರಿಯಾದರೆ ರಾಜ್ಯ ಸರ್ಕಾರಕ್ಕೆ ರಸ್ತೆ ನಿರ್ಮಾಣ, ಸೇತುವೆಗಳ ದುರಸ್ತಿ, ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆ ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸಗಳನ್ನೂ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. “ಈ ಪ್ರದೇಶದ ಜನರು ಮತ್ತು ರೈತರಿಗೆ ಇದು ದುಃಸ್ವಪ್ನವಾಗಲಿದೆ.
ಅರಣ್ಯ ಇಲಾಖೆ ಬಫರ್ ವಲಯವನ್ನು ರಚಿಸಿದರೆ ಸಮಸ್ಯೆಗಳು ಇನ್ನಷ್ಟು ಹೆಚ್ಚಾಗಲಿವೆ. ಕಸ್ತೂರಿರಂಗನ್ ವರದಿಯ ಪ್ರಕಾರ ಪ್ರತಿಯೊಂದು ಯೋಜನೆಗೂ ವಿವಿಧ ಇಲಾಖೆಗಳ ಅನುಮತಿ ಪಡೆಯಬೇಕಾಗುತ್ತದೆ. ಇದು ಈ ಭಾಗದ ಜನರಿಗೆ ದೊಡ್ಡ ಅನಾಹುತವಾಗಲಿದೆ ಎಂದು ಹೇಳಿದರು.
ಕೇರಳ ಸರ್ಕಾರ ಪ್ರತಿಯೊಂದು ಗ್ರಾಮಕ್ಕೂ ತೆರಳಿ ಸ್ಥಳೀಯ ಮಟ್ಟದಲ್ಲಿ ಸಮೀಕ್ಷೆ ನಡೆಸಿದೆ. ಪ್ರತಿಯೊಂದು ತೋಟ, ಕೃಷಿ ಭೂಮಿ, ಮನೆ ಹಾಗೂ ಇತರ ಕಟ್ಟಡಗಳನ್ನು ಗುರುತಿಸಿ ಅಧಿಸೂಚನೆ ಹೊರಡಿಸಿತ್ತು. ಆ ವರದಿಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಹಾಗೂ ಕೇಂದ್ರ ಸರ್ಕಾರಕ್ಕೂ ಸಲ್ಲಿಸಲಾಗಿತ್ತು. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಅದನ್ನು ಅಂಗೀಕರಿಸಿದ ಬಳಿಕ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯನ್ನು ಕಡಿಮೆ ಮಾಡಲಾಯಿತು. ಕರ್ನಾಟಕ ಸರ್ಕಾರವೂ ಇದೇ ರೀತಿಯಲ್ಲಿ ಸಮೀಕ್ಷೆ ನಡೆಸಿದರೆ, ನಮ್ಮ ರಾಜ್ಯದ ಜನರ ತೋಟಗಳು ಮತ್ತು ಮನೆಗಳನ್ನು ರಕ್ಷಿಸಬಹುದು ಎಂದು ಹೇಳಿದರು.
ಇಜೇ ವೇಳೆ ಮೂರು ದಿನಗಳ ಬದಲು ವಿಶೇಷ ಅಧಿವೇಶನವನ್ನು ಒಂದು ವಾರ ನಡೆಸಬೇಕು ಎಂದು ಅಶೋಕ ಒತ್ತಾಯಿಸಿದರು.
ಕಾಂಗ್ರೆಸ್ ಸರ್ಕಾರ ಕಸ್ತೂರಿರಂಗನ್ ವರದಿಯನ್ನು ವಿರೋಧಿಸುವುದಕ್ಕೂ ಮುನ್ನವೇ ಬಿಜೆಪಿ ಸರ್ಕಾರಗಳಾದ ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಗಳು ವರದಿಯನ್ನು ವಿರೋಧಿಸಿದ್ದವು ಎಂದು ಹೇಳಿದರು.
ನಿಮ್ಮಲ್ಲಿ ಹಲವರು ಪ್ರಧಾನಿ ಮೋದಿ ಅವರನ್ನು ದೂಷಿಸುತ್ತಿದ್ದೀರಿ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶದಂತೆ ಕಸ್ತೂರಿರಂಗನ್ ವರದಿ ಜಾರಿಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದನ್ನು ರಾಜಕೀಯಗೊಳಿಸುವ ಅಗತ್ಯವಿಲ್ಲ. ಈ ವಿಚಾರದಲ್ಲಿ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲು ರಾಜ್ಯ ಸರ್ಕಾರ ರಚಿಸುವ ನಿಯೋಗದಲ್ಲಿ ಭಾಗವಹಿಸಲು ಬಿಜೆಪಿ ಸಿದ್ಧವಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




