ಅನ್ನಭಾಗ್ಯ ಯೋಜನೆ ಜುಲೈನಿಂದಲೇ ಪ್ರಾರಂಭ; 5 ಕೆಜಿ ಅಕ್ಕಿ ಬದಲು 170 ರೂ. ಹಣ ನೀಡಲು ಸಂಪುಟ ನಿರ್ಧಾರ
ಕಾಂಗ್ರೆಸ್ ಸರ್ಕಾರದ ಪಂಚ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಗೆ ಭಾರತೀಯ ಆಹಾರ ನಿಗಮ ಅಕ್ಕಿ ಕೊಡಲು ನಿರಾಕರಿಸಿದ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ಅಕ್ಕಿ ಬದಲಿಗೆ ಹಣ ನೀಡಲು ಸಂಪುಟ ಸಭೆ ನಿರ್ಧರಿಸಿದೆ.

ಬೆಂಗಳೂರು: ಕರ್ನಾಟಕ ಸರ್ಕಾರವು ತನ್ನ ಚುನಾವಣಾ ಗ್ಯಾರಂಟಿಯನ್ನು ಪೂರೈಸಲು ಅಗತ್ಯವಾದ ದೊಡ್ಡ ಪ್ರಮಾಣದ ಅಕ್ಕಿಯನ್ನು ಸಂಗ್ರಹಿಸಲು ತೊಂದರೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಫಲಾನುಭವಿಗಳಿಗೆ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಿಗೆ ಪ್ರತಿ ಕೆಜಿಗೆ 34 ರೂ.ನಂತೆ ಹಣ ಪಾವತಿಸಲು ನಿರ್ಧರಿಸಿದೆ.
ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಕೇಂದ್ರವು ಉಚಿತವಾಗಿ ನೀಡುವ ಐದು ಕೆಜಿ ಅಕ್ಕಿ ಜೊತೆಗೆ ತಿಂಗಳಿಗೆ ಹೆಚ್ಚುವರಿಯಾಗಿ ಐದು ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಅಕ್ಕಿ ಸಂಗ್ರಹಿಸಲು ಸಾಧ್ಯವಾಗದ ಕಾರಣ ಜುಲೈನಿಂದಲೇ ಹಣ ಪಾವತಿ ಮಾಡುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.
FCI (ಭಾರತೀಯ ಆಹಾರ ನಿಗಮ) ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಗಳ ಪ್ರಮಾಣಿತ ದರವನ್ನು ನಿಗದಿಪಡಿಸಿರುವುದರಿಂದ ಪ್ರತಿಯೊಬ್ಬ ಫಲಾನುಭವಿಗೆ 34 ರುಪಾಯಿ ನೀಡಲು ಸಂಪುಟ ಸಭೆ ತೀರ್ಮಾನಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ ಎಚ್ ಮುನಿಯಪ್ಪ, ನಾವು ಅಕ್ಕಿ ಖರೀದಿಸಲು ಎಲ್ಲಾ ಪ್ರಯತ್ನ ಮಾಡಿದೆವು. ಆದರೆ ನಮಗೆ ಅಗತ್ಯವಿರುವಷ್ಟು ಅಕ್ಕಿಯನ್ನು ಪೂರೈಸಲು ಯಾವುದೇ ಸಂಸ್ಥೆ ಮುಂದೆ ಬಂದಿಲ್ಲ. ಹೀಗಾಗಿ ಅಕ್ಕಿ ಖರೀದಿ ತಡವಾಗುತ್ತಿದೆ. ಹೀಗಾಗಿ ಅಕ್ಕಿ ಬದಲಿಗೆ ಹಣ ನೀಡಲು ಸಂಪುಟ ತೀರ್ಮಾನಿಸಿದೆ. ಒಂದು ಕಾರ್ಡ್‌ನಲ್ಲಿ ಒಬ್ಬ ವ್ಯಕ್ತಿ ಇದ್ದರೆ, ಆ ವ್ಯಕ್ತಿಗೆ ಅನ್ನ ಭಾಗ್ಯ ಯೋಜನೆಯಡಿ ಐದು ಕೆಜಿ ಹೆಚ್ಚುವರಿ ಅಕ್ಕಿಗೆ ತಿಂಗಳಿಗೆ 170 ರೂ. ಸಿಗುತ್ತದೆ ಎಂದು ಸಚಿವರು ವಿವರಿಸಿದರು.
ಪಡಿತರ ಚೀಟಿಯಲ್ಲಿ ಇಬ್ಬರಿದ್ದರೆ ಅವರು 340 ರೂ.ಗೆ ಅರ್ಹರಾಗಿರುತ್ತಾರೆ. ಐವರು ಸದಸ್ಯರಿದ್ದರೆ ಅವರಿಗೆ ತಿಂಗಳಿಗೆ 850 ರೂಪಾಯಿಯನ್ನು ನೀಡಲಾಗುತ್ತದೆ. ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾ ಮಾಡಲು ಸರ್ಕಾರ ವ್ಯವಸ್ಥೆ ಮಾಡಿದೆ. ಇದು ಜುಲೈ 1ರಿಂದಲೇ ಜಾರಿಗೆ ಬರಲಿದೆ ಎಂದು ಕೆಎಚ್ ಮುನಿಯಪ್ಪ ತಿಳಿಸಿದ್ದಾರೆ.
ಅಕ್ಕಿ ಸಿಕ್ಕ ನಂತರ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿಯನ್ನೇ ನೀಡುತ್ತೇವೆ ಎಂದು ಮುನಿಯಪ್ಪ ತಿಳಿಸಿದ್ದಾರೆ. ಉಚಿತ ಅಕ್ಕಿ ನೀಡುವ ಯೋಜನೆ ಜಾರಿಗಾಗಿ ಅಕ್ಕಿ ಖರೀದಿಸಲು ಕರ್ನಾಟಕ ಸರ್ಕಾರ ಕೇಂದ್ರ ಆಹಾರ ನಿಗಮದ ಮೊರೆ ಹೋಗಿತ್ತು. ಆದರೆ, ಅಲ್ಲಿಂದ ಹೆಚ್ಚುವರಿ ಅಕ್ಕಿ ಪೂರೈಕೆಗೆ ಒಪ್ಪಿಗೆ ಸಿಕ್ಕಿರಲಿಲ್ಲ. ನಂತರ ಸಚಿವ ಮುನಿಯಪ್ಪ ಅವರು ಕೇಂದ್ರ ಸಚಿವ ಪೀಯೂಷ್ ಗೋಯಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆದರೂ ಹೆಚ್ಚುವರಿ ಅಕ್ಕಿ ಕೊಡಲು ಕೇಂದ್ರ ಸರ್ಕಾರ ನಿರಾಕರಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


