ಕೇಸ್ ಗಳನ್ನು ಹಿಂಪಡೆದು ಒತ್ತುವರಿ ತೆರವಿಗೆ ಸಹಕರಿಸಿ: ಖಾಸಗಿ ಡೆವಲಪರ್ಸ್ ಗಳಿಗೆ ಡಿಕೆಶಿ ಮನವಿ
ರಾಜಾಕಾಲುವೆ ಒತ್ತುವರಿ ತೆರವಿಗೆ ಕೋರ್ಟ್ ನಿಂದ ಸ್ಟೇ ತಂದವರೆಲ್ಲರೂ ಕೇಸ್ ಗಳನ್ನು ಹಿಂಪಡೆದು ಒತ್ತುವರಿ ತೆರವು ಕಾರ್ಯಾಚರಣೆಗೆ ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಖಾಸಗಿ ಡೆವಲಪರ್ಸ್ ಗಳಿಗೆ ಗುರುವಾರ ಮನವಿ ಮಾಡಿದ್ದಾರೆ.

ಬೆಂಗಳೂರು: ರಾಜಾಕಾಲುವೆ ಒತ್ತುವರಿ ತೆರವಿಗೆ ಕೋರ್ಟ್ ನಿಂದ ಸ್ಟೇ ತಂದವರೆಲ್ಲರೂ ಕೇಸ್ ಗಳನ್ನು ಹಿಂಪಡೆದು ಒತ್ತುವರಿ ತೆರವು ಕಾರ್ಯಾಚರಣೆಗೆ ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಖಾಸಗಿ ಡೆವಲಪರ್ಸ್ ಗಳಿಗೆ ಗುರುವಾರ ಮನವಿ ಮಾಡಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಹೊಂದಿರುವ ಡಿಕೆ ಶಿವಕುಮಾರ್ ಅವರು ಇಂದು ಮೊದಲ ಬಾರಿಗೆ ನಗರ ಪ್ರದಕ್ಷಿಣೆ ನಡೆಸಿದರು. ಈ ವೇಳೆ ರಾಜಾಕಾಲುವೆಗಳನ್ನು ತಕ್ಷಣ ತೆರವು ಮಾಡುವಂತೆ ಅಧಿಕಾರಿಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ದಿವ್ಯಶ್ರೀ ಅಪಾರ್ಟ್ ಮೆಂಟೇ ಇರಲಿ, ಶಿವಕುಮಾರ್ ಅಪಾರ್ಟ್ ಮೆಂಟೇ ಇರಲಿ. ಯಾರೇ ರಾಜಾಕಾಲುವೆ ಒತ್ತುವರಿ ಮಾಡಿದರೂ ಅದನ್ನು ತೆರವುಗೊಳಿಸಬೇಕು. ಕೋರ್ಟ್ ನಿಂದ ಸ್ಟೇ ತಂದವರು ತಾವಾಗಿಯೇ ತೆರವು ಮಾಡಿದರೆ ಒಳಿತು. ಇಲ್ಲದಿದ್ದರೆ ನಾವು ಸಹ ಕಾನೂನು ಮೂಲಕವೇ ತೆರವು ಕಾರ್ಯಾಚರಣೆ ನಡೆಸುತ್ತೇವೆ ಎಂದರು.
ಜನರು ನ್ಯಾಯಾಲಯಕ್ಕೆ ಹೋಗಿ ವಿಳಂಬ ಮಾಡಿದರೆ ನಾವು ಯಾವುದೇ ನೋಟಿಸ್‌ಗಳನ್ನು ನೀಡುವುದಿಲ್ಲ. ಎಲ್ಲಾ ಖಾಸಗಿ ಜಮೀನು ಮಾಲೀಕರು ಒತ್ತುವರಿ ತೆರವುಗೊಳಿಸಲು, ಅಧಿಕಾರಿಗಳೊಂದಿಗೆ ಸಹಕರಿಸಬೇಕು ಮತ್ತು ಪ್ರಕರಣಗಳನ್ನು ಹಿಂತೆಗೆದುಕೊಳ್ಳಲು ನಾನು ಮನವಿ ಮಾಡುತ್ತೇನೆ. ಇಲ್ಲದಿದ್ದರೆ ಸರ್ಕಾರವು ಕಾನೂನಿನ ಮೂಲಕ ಸಂಬಂಧಿಸಿದ ಸೆಕ್ಷನ್‌ಗಳನ್ನು ಬಳಸಿ ರಾಜಕಾಲುವೆಗಳ ಒತ್ತುವರಿ ತೆರವಿಗೆ ಕ್ರಮಕೈಗೊಳ್ಳಲಾಗುವುದು ಎಂದು ಡಿಸಿಎಂ ಎಚ್ಚರಿಸಿದ್ದಾರೆ.
ಇದನ್ನು ಓದಿ: ಮುಂಗಾರು ಆರಂಭದಲ್ಲೇ ಡಿಸಿಎಂ ಶಿವಕುಮಾರ್ ಬೆಂಗಳೂರು ರೌಂಡ್ಸ್: ರಾಜಕಾಲುವೆ, ಚರಂಡಿ, ಕೆರೆ ಪರಿಶೀಲನೆ, ಅಧಿಕಾರಿಗಳಿಗೆ ಆದೇಶ
ಮಳೆ ಬಂದಾಗ ಹಲವು ಪ್ರದೇಶಗಳಿಗೆ ನೀರು ನುಗ್ಗಿ ಜನ ಕಣ್ಣೀರಿಡುತ್ತಿದ್ದಾರೆ. ಇಷ್ಟಾದರೂ ರಾಜಾಕಾಲುವೆ ಒತ್ತುವರಿ ಮುಂದುವರೆದಿದೆ. ಎಲ್ಲಿಯೂ ಬುಲ್ಡೋಜರ್ ಕಾರ್ಯಾಚರಣೆ ನಿಲ್ಲಿಸಲು ನಾವು ಹೇಳಿಲ್ಲ. ಕಾರ್ಯಾಚರಣೆ ಮುಂದುವರೆಯಲಿದೆ. ಖಾಸಗಿ ಡವಲಪರ್ಸ್ ಗಳು ಕೇಸ್ ಗಳನ್ನು ಹಿಂಪಡೆದು ಒತ್ತುವರಿ ತೆರವಿಗೆ ಸಹಕರಿಸಬೇಕು. ಇಲ್ಲದಿದ್ದರೆ ನಾವು ಕಾನೂನು ಕ್ರಮದ ಮೂಲಕ ಕೆಲಸ ಮಾಡುತ್ತೇವೆ ಎಂದರು.
12 ಮೀ. ಉದ್ದದ ರಾಜಾಕಾಲುವೆ ಜಾಗದಲ್ಲಿ 7 ಮೀ.ಒತ್ತುವರಿ ಮಾಡಿಕೊಳ್ಳಲಾಗಿದೆ. ಅದು ಹೀಗೆ ಮುಂದುವರೆದರೆ ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಸಮಸ್ಯೆ ಎದುರಿಸಬೇಕಾಗುತ್ತದೆ. ತಕ್ಷಣ ಒತ್ತುವರಿ ಜಾಗವನ್ನು ತೆರವುಗೊಳಿಸಿ ರಾಜಾಕಾಲುವೆ ತ್ವರಿತವಾಗಿ ನಿರ್ಮಿಸಬೇಕೆಂದು ಬಿಬಿಎಂಪಿ ಆಯುಕ್ತರಿಗೆ ಡಿಸಿಎಂ ಸ್ಥಳದಲ್ಲೇ ಆದೇಶ ನೀಡಿದರು.
ಇದಕ್ಕೂ ಮುನ್ನ ಯಮಲೂರು ಮುಖ್ಯರಸ್ತೆಯಲ್ಲಿ ನಡೆಯುತ್ತಿರುವ ಒಳಚರಂಡಿ ವ್ಯವಸ್ಥೆಯನ್ನು ವೀಕ್ಷಿಸಿ ತ್ವರಿತ ಗತಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಳಿಕ ಬೆಳ್ಳಂದೂರು ಕೆರೆಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


