ನೀರಿನ ದರ ಪರಿಷ್ಕರಣೆ ಕುರಿತು ಶೀಘ್ರದಲ್ಲೇ ನಿರ್ಧಾರ: ಡಿಕೆ ಶಿವಕುಮಾರ್
ಬೆಂಗಳೂರು ನಗರದಲ್ಲಿ ನೀರು ಬಳಕೆ ಶುಲ್ಕ ಏರಿಕೆ ಕುರಿತು ಶೀಘ್ರದಲ್ಲೇ ನಿರ್ಧರಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಮಂಗಳವಾರ ಹೇಳಿದ್ದಾರೆ.

ಬೆಂಗಳೂರು: ಬೆಂಗಳೂರು ನಗರದಲ್ಲಿ ನೀರು ಬಳಕೆ ಶುಲ್ಕ ಏರಿಕೆ ಕುರಿತು ಶೀಘ್ರದಲ್ಲೇ ನಿರ್ಧರಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಮಂಗಳವಾರ ಹೇಳಿದ್ದಾರೆ.
ಬೆಂಗಳೂರು ಜಲಮಂಡಳಿ ಅಧಿಕಾರಿಗಳೊಂದಿಗೆ ಮಂಗಳವಾರ ಜಲಮಂಡಳಿ ಕೇಂದ್ರ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಬೆಂಗಳೂರು ಜಲಮಂಡಳಿಯ ಸ್ಥಿತಿ ಚಿಂತಾಜನಕವಾಗಿದೆ. 2014ರಿಂದ ಈವರೆಗೆ ನೀರು ಬಳಕೆ ಶುಲ್ಕ ಹೆಚ್ಚಳ ಮಾಡಿಲ್ಲ. ಹೀಗಾಗಿ ಜಲಮಂಡಳಿ ಆದಾಯ ತೀರಾ ಕಡಿಮೆಯಿದ್ದು, ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.
ಜಲಮಂಡಳಿ ಬಳಿ ಸಿಬ್ಬಂದಿ, ಅಧಿಕಾರಿಗಳಿಗೆ ವೇತನ ನೀಡಲೂ ಹಣವಿಲ್ಲದಂತಾಗಿದೆ. ಜಲಮಂಡಳಿ ಕಾರ್ಯದ ಬಗ್ಗೆ ಸೂಚನೆ ನೀಡಲು ಬಂದಿದ್ದ ನನಗೆ ಅವರ ಗೋಳು ಕೇಳುವಂತಾಯಿತು. ಬೆಸ್ಕಾಂನಿಂದ ರಿಯಾಯಿತಿ ದರದಲ್ಲಿ ಜಲಮಂಡಳಿಗೆ ವಿದ್ಯುತ್ ಪೂರೈಸಲಾಗುತ್ತಿದೆ. ಆದರೆ, ಜಲಮಂಡಳಿಗೆ ವಾರ್ಷಿಕ 104 ಕೋಟಿ ಆದಾಯ ಬಂದರೆ 95 ಕೋಟಿ ವಿದ್ಯುತ್ ಬಿಲ್ ಪಾವತಿಗೇ ವ್ಯಯಿಸಬೇಕಾದ ಪರಿಸ್ಥಿತಿಯಿದೆ.
ಇದನ್ನೂ ಓದಿ: ನಗರದಲ್ಲಿ ಶೀಘ್ರದಲ್ಲೇ ನೀರಿನ ದರ ಏರಿಕೆ?
ಇದರಿಂದಾಗಿ ಬೃಹತ್ ಯೋಜನೆಗಳೆಲ್ಲವನ್ನೂ ಸಾಲ ಪಡೆದೇ ಅನುಷ್ಠಾನಗೊಳಿಸಲಾಗುತ್ತಿದೆ. ಕಾವೇರಿ 5ನೇ ಹಂತದ ಯೋಜನೆ ಚಾಲ್ತಿಯಲ್ಲಿದ್ದು, ಅದಕ್ಕೆ ವೇಗ ನೀಡುವಂತೆ ಸೂಚಿಸಿದ್ದೇನೆ. ಅನಧಿಕೃತ ನೀರಿನ ಸಂಪರ್ಕವನ್ನು ಶೇ.48ರಿಂದ ಶೇ.28ಕ್ಕೆ ಇಳಿಕೆ ಮಾಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಕೆಲವರು ನೀರು ಪುರೈಕೆ ಕೊಳವೆಗೆ ನೇರವಾಗಿ ಡ್ರಿಲ್ ಮಾಡಿ ನೀರನ್ನು ಕದಿಯುತ್ತಿರುವ ಬಗ್ಗೆ ದೂರುಗಳಿವೆ. ಹೀಗೆ ಅನಧಿಕೃತ ಸಂಪರ್ಕ ಪಡೆದ ಮತ್ತು ಜಲಮಂಡಳಿಗೆ ನಷ್ಟವನ್ನುಂಟು ಮಾಡುತ್ತಿರುವವರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆಂದು ಹೇಳಿದರು.
ಸದ್ಯ ಇರುವ ಹಳೇ ಕೊಳವೆಗಳನ್ನು ತೆಗೆದು ನೀರು ಪೋಲಾಗುವುದನ್ನು ತಡೆಯಲು ಯೋಜನೆ ರೂಪಿಸಬೇಕು. ಕುಡಿಯುವ ನೀರಿನ ಕೊಳವೆಯೊಳಗೆ ಕೊಳಚೆ ನೀರು ಹರಿಯುತ್ತಿರುವುದರಿಂದ ಶುದ್ಧ ಕುಡಿಯುವ ನೀರು ಪೂರೈಕೆ ಕಷ್ಟವಾಗುತ್ತಿದೆ. ಹೀಗಾಗಿ ಕೆಲವು ಕಡೆಗಳಲ್ಲಿ ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆಗೊಳಪಡಿಸಿ, ನೀರಿನ ಗುಣಮಟ್ಟತಿಳಿಯುವಂತೆ ಹೇಳಿದ್ದೇನೆ. ಎಲ್ಲೆಲ್ಲಿ ಕಡಿಮೆ ಗುಣಮಟ್ಟದ ನೀರು ಪೂರೈಕೆಯಾಗುತ್ತಿದೆ ಎಂಬುದು ತಿಳಿದು, ಅಲ್ಲಿ ಶುದ್ಧ ನೀರು ಪೂರೈಕೆಗೆ ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ನಂತರ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


