NIA Raid: ಕರ್ನಾಟಕ ಸೇರಿ 4 ರಾಜ್ಯಗಳ 19 ಕಡೆಗಳಲ್ಲಿ ಎನ್ ಐಎ ದಾಳಿ; ಐಸಿಸ್ ಸಂಪರ್ಕ ಜಾಲ ಬೇಧ
ದೇಶಾದ್ಯಂತ ಇತ್ತೀಚೆಗೆ ರಾಷ್ಟ್ರೀಯ ತನಿಖಾ ದಳ(NIA) ದಾಳಿ ಹೆಚ್ಚಾಗಿದೆ. ಕೆಲ ದಿನಗಳ ಹಿಂದಷ್ಟೇ ಬೆಂಗಳೂರು ಸೇರಿದಂತೆ ಮಹಾರಾಷ್ಟ್ರದ 44 ಕಡೆಗಳಲ್ಲಿ ದಾಳಿ ನಡೆಸಿದ್ದ ಎನ್ಐಎ ಇಂದು ವಾರದ ಆರಂಭದಲ್ಲಿಯೇ ತನ್ನ ಬೇಟೆ ಮುಂದುವರಿಸಿದೆ.

ನವದೆಹಲಿ/ಬೆಂಗಳೂರು: ದೇಶಾದ್ಯಂತ ಇತ್ತೀಚೆಗೆ ರಾಷ್ಟ್ರೀಯ ತನಿಖಾ ದಳ(NIA) ದಾಳಿ ಹೆಚ್ಚಾಗಿದೆ. ಕೆಲ ದಿನಗಳ ಹಿಂದಷ್ಟೇ ಬೆಂಗಳೂರು ಸೇರಿದಂತೆ ಮಹಾರಾಷ್ಟ್ರದ 44 ಕಡೆಗಳಲ್ಲಿ ದಾಳಿ ನಡೆಸಿದ್ದ ಎನ್ಐಎ ಇಂದು ವಾರದ ಆರಂಭದಲ್ಲಿಯೇ ತನ್ನ ಬೇಟೆ ಮುಂದುವರಿಸಿದೆ.
ಇಂದು ಕೂಡ ಕರ್ನಾಟಕದ 11 ಭಾಗಗಳು ಸೇರಿದಂತೆ 4 ರಾಜ್ಯಗಳ 19 ಕಡೆಗಳಲ್ಲಿ ಎನ್ ಐಎ ದಾಳಿ ನಡೆಸಿದೆ. ಇಸ್ಲಾಮಿಕ್ ಸ್ಟೇಟ್ ಆಫ್ ಸಿರಿಯಾ ಮತ್ತು ಇರಾಕ್ (ISIS) ಜಾಲದೊಂದಿಗೆ ಸಂಪರ್ಕ ಹೊಂದಿರುವ ಮಾಹಿತಿ ಆಧಾರದ ಮೇಲೆ ಮೂಲಭೂತವಾದಿ ಜಿಹಾದಿ ಸಂಪರ್ಕಜಾಲವನ್ನು ಬೇಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕದಲ್ಲಿ ಕೇಂದ್ರ ಉಗ್ರಗಾಮಿ ನಿಗ್ರಹ ಪಡೆ ಬೆಂಗಳೂರು, ಬಳ್ಳಾರಿಯ ಕೆಲವು ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ನಡೆಸಿದೆ. ಜಾರ್ಖಂಡ್ ನ ನಾಲ್ಕು ಕಡೆಗಳಲ್ಲಿ, ಮಹಾರಾಷ್ಟ್ರದ ಮೂರು ಕಡೆ ಮತ್ತು ದೆಹಲಿಯಲ್ಲಿ ಒಂದು ಕಡೆ ದಾಳಿ ಮಾಡಲಾಗಿದ್ದು ಈ ವೇಳೆ ಲೆಕ್ಕಕ್ಕೆ ಸಿಗದ ನಗದು, ಡಿಜಿಟಲ್ ಸಾಧನಗಳು, ಸೂಕ್ಷ್ಮ ವಸ್ತುಗಳು ಸೇರಿದಂತೆ ಹಲವು ದಾಖಲೆಗಳನ್ನು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿಯಲ್ಲಿ ಏನೇನು ಸಿಕ್ಕಿದೆ ಎಂಬ ಬಗ್ಗೆ ಅಧಿಕೃತ ಮಾಹಿತಿ ಸಿಗಬೇಕಿದೆ.
ಬೆಂಗಳೂರು ನಗರದ ಶಿವಾಜಿನಗರ, ಪುಲಿಕೇಶಿನಗರ, ಸುಲ್ತಾನ್ ಪಾಳ್ಯ, ಆರ್.ಟಿ.ನಗರ, ಜೆ.ಸಿ.ನಗರದ ಚಿನ್ನಪ್ಪ ಗಾರ್ಡನ್ ಸೇರಿದಂತೆ ನಗರದ 20ಕ್ಕೂ ಹೆಚ್ಚು ಕಡೆಗಳಲ್ಲಿ ಹಾಗೂ ಬಳ್ಳಾರಿಯಲ್ಲಿ ಒಂಬತ್ತು ಕಡೆಗಳಲ್ಲಿ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅದರಂತೆ, ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಶಮಿವುಲ್ಲಾ ವಾಸವಿದ್ದ ಬಾಡಿಗೆ ಮನೆ ಮೇಲೆ ದಾಳಿ ನಡೆಸಿದಾಗ ಸ್ಫೋಟಕ ತಯಾರಿಕೆಗೆ ಬಳಸುವ 7 ಕೆಜಿ ಸೋಡಿಯಂ ನೈಟ್ರೇಟ್ ಪತ್ತೆಯಾಗಿದೆ.
ಹಲವರನ್ನು ವಶಕ್ಕೆ ಪಡೆದ ಎನ್ಐಎ: ದಾಳಿ ವೇಳೆ ಶಮಿವುಲ್ಲಾ, ಸೂಫಿಯಾನ್ ಆಗಿ ಮತಾಂತರಗೊಂಡಿದ್ದ ನಿಖಿಲ್, ನಿಷೇಧಿತ ಪಿಎಫ್ಐ ಬಳ್ಳಾರಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸುಲೇಮಾನ್, ಅಜಾಜ್ ಅಹ್ಮದ್, ತಬ್ರೇಜ್, ಮುಜಾಮಿಲ್ ಎಂಬುವರನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಭಾರತದಲ್ಲಿ ಇದುವರೆಗೆ ಐಸಿಸ್ ಜಾಲದಲ್ಲಿ ನಡೆದ ತನಿಖೆಯಿಂದ ಈ ಅಂಶ ಬೆಳಕಿಗೆ ಬಂದಿದ್ದು, ಕೆಲವು ವಿದೇಶಿಯರು ಮುಸ್ಲಿಂ ಯುವಕರನ್ನು ಜಿಹಾದಿಗಳನ್ನಾಗಿ ಪರಿವರ್ತಿಸಲು ನೋಡುತ್ತಿರುವುದು, ತಮ್ಮ ಪ್ರದೇಶಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಿ ಅಸ್ಥಿರತೆಯ ಭಾವವನ್ನು ಸೃಷ್ಟಿಸಲು ನೋಡುತ್ತಿರುವುದು ಬೆಳಕಿಗೆ ಬಂದಿದೆ.
ಕಳೆದ ವಾರ ಬೆಂಗಳೂರಿನ ವಿವಿಧೆಡೆ ಎನ್‌ಐಎ ದಾಳಿ ನಡೆಸಿತ್ತು. ಅಂದು ಬೆಂಗಳೂರಿನಲ್ಲಿ ಶಂಕಿತ ಉಗ್ರ ಅಲಿ ಅಬ್ಬಾಸ್ನನ್ನು ಬಂಧಿಸಲಾಗಿತ್ತು. ಲಷ್ಕರ್-ಎ-ತೊಯ್ಬಾದಿಂದ ಕೆಲವು ಕೈದಿಗಳ ಆಮೂಲಾಗ್ರೀಕರಣಕ್ಕೆ ಸಂಬಂಧಿಸಿದ ಪ್ರಕರಣ (ಎಲ್‌ಇಟಿ) ಭಯೋತ್ಪಾದಕ ಮತ್ತು ಜೀವಾವಧಿ ಅಪರಾಧಿ - ಟಿ ನಜೀರ್ ಪ್ರಕರಣದಲ್ಲಿ ಬಂಧಿಸಲಾಯಿತು. ನಜೀರ್ 2008ರ ಸರಣಿ ಸ್ಫೋಟಗಳಲ್ಲಿ ಭಾಗಿಯಾಗಿದ್ದು, ಪ್ರಸ್ತುತ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.
ಕಳೆದ ವಾರ ಮಹಾರಾಷ್ಟ್ರದ 40 ಸ್ಥಳಗಳಲ್ಲಿ ದಾಳಿ ನಡೆಸಿದ್ದ ಎನ್ ಐಎ 15 ಮಂದಿಯನ್ನು ಬಂಧಿಸಿತ್ತು. ಇವರಲ್ಲಿ ಒಬ್ಬ
ಬಂಧಿತ ಆರೋಪಿ ಐಸಿಸ್ ಘಟಕ ನಾಯಕ ಎಂದು ಹೇಳಲಾಗಿದೆ.ಈತ ಮೂಲಭೂತವಾದಿಗಳನ್ನಾಗಿ ಯುವಕರ ಮನಪರಿವರ್ತಿಸಿ ಭಯೋತ್ಪಾದಕ ಸಂಘಟನೆಗೆ ನೇಮಿಸುವವರಲ್ಲಿ ಪ್ರಮುಖ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


