ರಾಜ್ಯ

ಸಸಿಗಳ ನೆಡುತ್ತಿದ್ದರೂ ಅರಣ್ಯ ಮಾತ್ರ ವಿಸ್ತರಣೆಯಾಗುತ್ತಿಲ್ಲ: ಸಿಎಂ ಸಿದ್ದರಾಮಯ್ಯ

ರಾಜ್ಯದ ಭೂ ಪ್ರದೇಶದಲ್ಲಿ ಶೇ. 20 ರಷ್ಟು ಮಾತ್ರ ಅರಣ್ಯ ಪ್ರದೇಶವಿದ್ದು, ಕನಿಷ್ಠ ಶೇ. 33 ಕ್ಕೆ ಅರಣ್ಯ ಪ್ರದೇಶದ ವಿಸ್ತರಣೆಯಾಗಬೇಕಿದೆ. ಆಗಮಾತ್ರ ಹವಾಮಾನ ವೈಪರೀತ್ಯಗಳನ್ನು ತಡೆಯಲು ಸಾಧ್ಯ. ಈ ವರ್ಷ ಮಳೆಯಿಲ್ಲದೇ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದರು.

ಸಸಿಗಳ ನೆಡುತ್ತಿದ್ದರೂ ಅರಣ್ಯ ಮಾತ್ರ ವಿಸ್ತರಣೆಯಾಗುತ್ತಿಲ್ಲ: ಸಿಎಂ ಸಿದ್ದರಾಮಯ್ಯ
ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಪದಕ ಪ್ರದಾನ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ.
Published On :

ಬೆಂಗಳೂರು: ರಾಜ್ಯದ ಭೂ ಪ್ರದೇಶದಲ್ಲಿ ಶೇ. 20 ರಷ್ಟು ಮಾತ್ರ ಅರಣ್ಯ ಪ್ರದೇಶವಿದ್ದು, ಕನಿಷ್ಠ ಶೇ. 33 ಕ್ಕೆ ಅರಣ್ಯ ಪ್ರದೇಶದ ವಿಸ್ತರಣೆಯಾಗಬೇಕಿದೆ. ಆಗಮಾತ್ರ ಹವಾಮಾನ ವೈಪರೀತ್ಯಗಳನ್ನು ತಡೆಯಲು ಸಾಧ್ಯ. ಈ ವರ್ಷ ಮಳೆಯಿಲ್ಲದೇ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದರು.

ಕರ್ನಾಟಕ ಅರಣ್ಯ ಇಲಾಖೆಯ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಲಾಗಿದ್ದ ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಸಿದ್ದರಾಮಯ್ಯ ಅವರು ಮಾತನಾಡಿದರು.

ಪ್ರತಿ ವರ್ಷ ಕೋಟಿಗಟ್ಟಲೆ ಸಸಿಗಳನ್ನು ನೆಡಲಾಗುತ್ತಿದ್ದು, ಈ ವರ್ಷ ಐದು ಕೋಟಿ ಸಸಿ ನೆಡುವ ಗುರಿಯನ್ನು ಹೊಂದಲಾಗಿದೆ. ಆದರೂ ಇನ್ನೂ ಅರಣ್ಯ ಮಾತ್ರ ವಿಸ್ತರಣೆಯಾಗಿಲ್ಲ. ಅರಣ್ಯ ಪ್ರದೇಶ ಹೆಚ್ಚಿಸುವ ನಿಟ್ಟಿನಲ್ಲಿ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಸಂಸ್ಥೆಗಳು ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.

ಕರ್ನಾಟಕವು ಆನೆಗಳ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ ಮತ್ತು ಹುಲಿಗಳ ಸಂಖ್ಯೆಯಲ್ಲಿ 2 ನೇ ಸ್ಥಾನದಲ್ಲಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ. ಆದರೆ ಮನುಷ್ಯ-ಪ್ರಾಣಿ ಸಂಘರ್ಷಗಳು ಕೂಡ ಹೆಚ್ಚುತ್ತಿವೆ. ಅರಣ್ಯ ಪ್ರದೇಶಗಳಿಂದ ಪ್ರಾಣಿಗಳು ಬಾರದಂತೆ ಬ್ಯಾರಿಕೇಡ್ ನಿರ್ಮಿಸಲು ಹೆಚ್ಚಿನ ಅನುದಾನ ನೀಡುವ ಬಗ್ಗೆ ಪರಿಶೀಲಿಸಲಾಗುವುದು. ಕಾಡು ಪ್ರಾಣಿಗಳಿಗೆ ಮೇವು, ಕುಡಿಯುವ ನೀರನ್ನು ಅರಣ್ಯ ಪ್ರದೇಶದೊಳಗೆ ಲಭ್ಯವಾಗಿಸುವುದು ಅರಣ್ಯ ಇಲಾಖೆಯ ಜವಾಬ್ದಾರಿಯಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಹೆಚ್ಚಿನ ಸಸಿಗಳನ್ನು ನೆಡುವ ಮೂಲಕ ಕಾಡು ಬೆಳೆಸುವ ಕೆಲಸವಾಗಬೇಕು. ಅರಣ್ಯ ಪ್ರದೇಶದ ವಿಸ್ತೀರ್ಣಗೊಂಡರೆ ರಾಜ್ಯಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ. ಕಾಡುಗಳಲ್ಲಿ ಹುಲಿ, ಆನೆಗಳ ಸಂಖ್ಯೆಯಲ್ಲಿ ಹೆಚ್ಚಳ ಕಾಣುತ್ತಿರುವುದು ಸಂತೋಷದ ವಿಷಯ. ಆದರೆ ಕಾಡುಪ್ರಾಣಿಗಳು ಜನರಿರುವ ಪ್ರದೇಶಕ್ಕೆ ಬರುತ್ತಿದ್ದು, ಅರಣ್ಯ ಇಲಾಖೆಯವರು ಹಾಗೂ ಜನರು ತೊಂದರೆ ಅನುಭವಿಸುತ್ತಿದ್ದಾರೆ.

ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ. ಉತ್ತಮವಾಗಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳನ್ನು ಪ್ರೋತ್ಸಾಹಿಸುವುದು ಸರ್ಕಾರದ ಜವಾಬ್ದಾರಿ. ಅರಣ್ಯದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ರಾಜ್ಯದ ಭೂ ಪ್ರದೇಶದಲ್ಲಿ ಶೇ. 20 ರಷ್ಟು ಮಾತ್ರ ಅರಣ್ಯ ಪ್ರದೇಶವಿದ್ದು, ಕನಿಷ್ಠ ಶೇ. 33 ಕ್ಕೆ ಅರಣ್ಯ ಪ್ರದೇಶದ ವಿಸ್ತರಣೆಯಾಗಬೇಕಿದೆ. ಆಗಮಾತ್ರ ಹವಾಮಾನ ವೈಪರೀತ್ಯಗಳನ್ನು ತಡೆಯಲು ಸಾಧ್ಯ. ಈ ವರ್ಷ ಮಳೆಯಿಲ್ಲದೇ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿದೆ.

ಕಾವೇರಿ ನೀರು, ಬರಗಾಲ, ಆಹಾರ ಉತ್ಪತ್ತಿ ಕೊರತೆಗಳನ್ನು ತಲೆದೋರುತ್ತದೆ. ಈ ಪರಿಸ್ಥಿತಿ ರಾಜ್ಯದ ಜಿಡಿಪಿ, ತಲಾವಾರು ಆದಾಯದ ಮೇಲೆ ಪರಿಣಾಮ ಬೀರುತ್ತದೆ. ಈ ಬಾರಿ 40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಶೇ. 50 ರಷ್ಟು ಬೆಳೆ ಹಾನಿಯಾಗಿದೆ. ಪ್ರತಿ ನಾಲ್ಕೈದು ವರ್ಷಕ್ಕೊಮ್ಮೆ ಇಂತಹ ಬರಗಾಲ ಪರಿಸ್ಥಿತಿ ಎದುರಾಗುತ್ತಿದ್ದು, ಅರಣ್ಯ ಪ್ರದೇಶ ಹೆಚ್ಚಿದರೆ ಹವಾಮಾನ ವೈಪರೀತ್ಯಗಳನ್ನು ತಡೆಗಟ್ಟಲು ಸಾಧ್ಯವಿದೆ ಎಂದು ತಿಳಿಸಿದರು.

ಇದೇ ವೇಳೆ 2019-20 ಮತ್ತು 2020-21ನೇ ಸಾಲಿನ 50 ಅರಣ್ಯ ಸಿಬ್ಬಂದಿಗೆ (ನಿವೃತ್ತ ಮತ್ತು ಸೇವೆ ಸಲ್ಲಿಸುತ್ತಿರುವ) ಸಿಎಂ ಪದಕ ವಿತರಿಸಿದರು.

ಪದಕ ವಿತರಿಸಿದ ಬಳಿಕ ಮಾತನಾಡಿದ ಅವರು, ಪ್ರತಿ ವರ್ಷ ಪದಕಗಳನ್ನು ನೀಡಬೇಕು. ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುವವರು ಅತ್ಯಂತ ಕ್ಲಿಷ್ಟ ಪರಿಸ್ಥಿತಿ ಯಲ್ಲಿ ಕಾರ್ಯನಿರ್ವಹಿಸುತ್ತಾ ಅರಣ್ಯ ಸಂರಕ್ಷಣೆ ಮಾಡುತ್ತಾರೆ. ವನ್ಯಜೀವಿಗಳನ್ನು ರಕ್ಷಣೆ ಮಾಡುವುದಲ್ಲದೆ ಕಾಡು ಬೆಳೆಸುವ ಕೆಲಸವನ್ನೂ ಮಾಡುತ್ತಾರೆ. ಅಸಾಧಾರಣ ಸೇವೆ ಮಾಡಿದ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಪದಕ ನೀಡಿ ಉತ್ತೇಜಿಸುವ ಕೆಲಸವನ್ನು 2017 ರಿಂದ ಮಾಡಲಾಗುತ್ತಿದೆ. 2017, 2018, 2019 ರಲ್ಲಿ ನೀಡಲಾಗಿದೆ. ಎರಡು ವರ್ಷಗಳಿಂದ ಪದಕ ವಿತರಣಾ ಸಮಾರಂಭ ನಡೆದಿರಲಿಲ್ಲ.

2020 ಹಾಗೂ 21 ನೇ ಸಾಲಿನ ಪದಕ ವಿತರಣೆಯನ್ನು ಅರಣ್ಯ ಇಲಾಖೆ ವತಿಯಿಂದ 50 ಪದಕಗಳನ್ನು ವಿತರಣೆ ಮಾಡಿದೆ. 2- 3 ವರ್ಷಗಳ ಪದಕಗಳನ್ನು ಒಟ್ಟಿಗೆ ನೀಡುವ ಪರಿಪಾಠ ಇರಬಾರದು. ಪ್ರಶಸ್ತಿ ವಿಜೇತರ ಆಯ್ಕೆಯ ನಂತರ ಎರಡು ಮೂರು ವರ್ಷ ಕಾಯುವ ಅಗತ್ಯವಿಲ್ಲ. ಪ್ರತಿ ವರ್ಷವೂ ಮುಖ್ಯಮಂತ್ರಿಗಳ ಪದಕ ಪ್ರದಾನ ಮಾಡಬೇಕೆಂದು ಅರಣ್ಯ ಸಚಿವರಿಗೆ ಸಲಹೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.