ಅಂತರ್ಜಾತಿ ವಿವಾಹಕ್ಕೆ ವಿರೋಧ; ತಿಂಗಳ ಮಗುವಿನೊಂದಿಗೆ ವಾಕ್-ಶ್ರವಣ ದೋಷವಿರುವ ದಂಪತಿಗೆ ಬಹಿಷ್ಕಾರ!
ಅಂತರ್ಜಾತಿ ವಿವಾಹವಾದ ಹಿನ್ನೆಲೆಯಲ್ಲಿ ತಿಂಗಳ ಮಗುವಿನೊಂದಿಗೆ ವಿಕಲಚೇತನ ದಂಪತಿಗೆ ಸಾಮಾಜಿಕ ಬಹಿಷ್ಕಾರ ವಿಧಿಸಿರುವ ಎನ್. ದೇವರಹಳ್ಳಿ ಗ್ರಾಮಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಚಿತ್ರದುರ್ಗ ಜಿಲ್ಲಾಡಳಿತ ಚಿಂತನೆ ನಡೆಸಿದೆ ಎಂದು ಮೂಲಗಳು ಗುರುವಾರ ಇಲ್ಲಿ ತಿಳಿಸಿವೆ.

ಚಿತ್ರದುರ್ಗ: ಅಂತರ್ಜಾತಿ ವಿವಾಹವಾದ ಹಿನ್ನೆಲೆಯಲ್ಲಿ ತಿಂಗಳ ಮಗುವಿನೊಂದಿಗೆ ದಂಪತಿಗೆ ಸಾಮಾಜಿಕ ಬಹಿಷ್ಕಾರ ವಿಧಿಸಿರುವ ಎನ್. ದೇವರಹಳ್ಳಿ ಗ್ರಾಮಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಚಿತ್ರದುರ್ಗ ಜಿಲ್ಲಾಡಳಿತ ಚಿಂತನೆ ನಡೆಸಿದೆ ಎಂದು ಮೂಲಗಳು ಗುರುವಾರ ಇಲ್ಲಿ ತಿಳಿಸಿವೆ.
ಮೂಲಗಳ ಪ್ರಕಾರ, ಮಹಿಳೆ ಮತ್ತು ಆಕೆಯ ಮಗುವನ್ನು ಮಹಿಳಾ ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ಹುಟ್ಟುತ್ತಲೇ ವಾಕ್ ಮತ್ತು ಶ್ರವಣ ದೋಷವಿರುವ ಎನ್. ದೇವರಹಳ್ಳಿ ನಿವಾಸಿ ಸಾವಿತ್ರಮ್ಮ ಮತ್ತು ಆಂಧ್ರಪ್ರದೇಶದ ಮಣಿಕಂಠ ಎಂಬುವವರು ಪರಸ್ಪರ ಪ್ರೀತಿಸಿ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು.
ಹೆರಿಗೆಗೆಂದು ತಿಂಗಳ ಹಿಂದೆ ತನ್ನ ಮನೆಗೆ ಬಂದಿದ್ದ ಸಾವಿತ್ರಮ್ಮ ಮಗುವಿಗೆ ಜನ್ಮ ನೀಡಿದ್ದರು. ಆದರೆ, ಗ್ರಾಮದ ಮುಖಂಡರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಬೇರೆ ಜಾತಿಗೆ ಸೇರಿದ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕೆ ಗ್ರಾಮದಿಂದ ಬಹಿಷ್ಕಾರ ಹಾಕಿದ್ದಾರೆ.
ಮಣಿಕಂಠ ರೆಡ್ಡಿ ಸಮುದಾಯಕ್ಕೆ ಸೇರಿದವರಾಗಿದ್ದು, ಸಾವಿತ್ರಮ್ಮ ಜೋಗಿ ಸಮುದಾಯಕ್ಕೆ ಸೇರಿದವರು. ಇಬ್ಬರೂ ಬೆಂಗಳೂರಿನ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಪರಸ್ಪರ ಪ್ರೀತಿಸುತ್ತಿದ್ದರು. ಹೀಗಾಗಿ, 2021ರಲ್ಲಿ ವಿವಾಹವಾಗಿದ್ದರು.
ನವದಂಪತಿ ಗ್ರಾಮಕ್ಕೆ ಬಂದಾಗ ಸಾವಿತ್ರಮ್ಮನ ಸಮಾಜದ ಮುಖಂಡರು ಅಂತರ್ಜಾತಿ ವಿವಾಹಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಆಕೆಯ ಪೋಷಕರಿಗೆ 30 ಸಾವಿರ ದಂಡ ವಿಧಿಸಿ, ದಂಪತಿಯನ್ನು ಗ್ರಾಮದಿಂದ ಹೊರಗೆ ಕಳುಹಿಸಿದ್ದರು. ಆಗ ದಂಪತಿ ಬೆಂಗಳೂರಿಗೆ ಮರಳಿದ್ದರು.
ಬಳಿಕ ಹೆರಿಗೆಗೆಂದು ಬಂದಿದ್ದ ಸಾವಿತ್ರಮ್ಮನನ್ನು ಮನೆಯೊಳಗೆ ಸೇರಿಕೊಂಡಿದ್ದಕ್ಕೆ ಸಮುದಾಯದ ಮುಖಂಡರು ಸಾವಿತ್ರಮ್ಮ ಪೋಷಕರೊಂದಿಗೆ ಮತ್ತೆ ವಾಗ್ವಾದ ನಡೆಸಿದ್ದಾರೆ. ಸಾವಿತ್ರಮ್ಮ ಮತ್ತು ಪತಿಯನ್ನು ಅವರ ತಿಂಗಳ ಮಗುವಿನೊಂದಿಗೆ ಮನೆಯಿಂದ ಹೊರಗೆ ಕಳುಹಿಸದಿದ್ದರೆ, ಸಮುದಾಯದಿಂದ ಶಾಶ್ವತ ಬಹಿಷ್ಕಾರ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ.
ಈ ಬೆಳವಣಿಗೆಯ ಬಗ್ಗೆ ಚಳ್ಳಕೆರೆಯ ಕಿವುಡ ಮತ್ತು ಮೂಗ ಶಾಲೆಯ ಸಿಬ್ಬಂದಿಗೆ ದಂಪತಿ ಮಾಹಿತಿ ನೀಡಿದ್ದಾರೆ. ಬಳಿಕ ದಂಪತಿಯನ್ನು ಮಹಿಳಾ ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ದು, ಘಟನೆಯ ಬಗ್ಗೆ ತಹಶೀಲ್ದಾರ್‌ಗೆ ಮಾಹಿತಿ ನೀಡಲಾಗಿದೆ. ಈ ವಿಚಾರವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಗಮನಕ್ಕೂ ತರಲಾಗಿತ್ತು.
ತಹಶೀಲ್ದಾರ್ ರಹಾನ್ ಪಾಷಾ ಪುನರ್ವಸತಿ ಕೇಂದ್ರಕ್ಕೆ ಧಾವಿಸಿ, ದಂಪತಿಗೆ ಸರ್ಕಾರದಿಂದ ಎಲ್ಲ ರೀತಿಯ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಸಮಾಜದ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಘಟನೆ ಕುರಿತು ಪೊಲೀಸ್ ದೂರು ದಾಖಲಿಸಲು ಮತ್ತು ಗ್ರಾಮದಲ್ಲಿ ಜಾಗೃತಿ ಅಭಿಯಾನವನ್ನು ಕೈಗೊಳ್ಳಲು ಆಡಳಿತವು ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


