ರಾಜ್ಯ

ಎಕ್ಸ್‌ ಕಾರ್ಪ್‌ ಖಾತೆ ನಿರ್ಬಂಧ ಪ್ರಕರಣ: ಆದೇಶಗಳನ್ನು ಮರು ಪರಿಶೀಲಿಸಲು ಸಾಧ್ಯವೇ; ಕೇಂದ್ರಕ್ಕೆ 'ಹೈ' ಸೂಚನೆ

ಎಕ್ಸ್‌ ಕಾರ್ಪ್‌ ಖಾತೆಗಳ ನಿರ್ಬಂಧಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ 2021 ಮತ್ತು 2022ರಲ್ಲಿ ಹೊರಡಿಸಿರುವ ನಿರ್ಬಂಧ ಆದೇಶಗಳನ್ನು ಮರು‌ ಪರಿಗಣಿಸಿ, ಸಕಾರಣ ಹೊಂದಿರುವ ಆದೇಶ ಮಾಡಲು ಒಪ್ಪಿಕೊಂಡರೆ ಅನಗತ್ಯ ಪ್ರಚಾರ ತಪ್ಪಿಸಬಹುದು ಎಂದು ಹೈಕೋರ್ಟ್‌ ಬುಧವಾರ ಮೌಖಿಕವಾಗಿ ಅಭಿಪ್ರಾಯಪಟ್ಟಿತು.

ಎಕ್ಸ್‌ ಕಾರ್ಪ್‌ ಖಾತೆ ನಿರ್ಬಂಧ ಪ್ರಕರಣ: ಆದೇಶಗಳನ್ನು ಮರು ಪರಿಶೀಲಿಸಲು ಸಾಧ್ಯವೇ; ಕೇಂದ್ರಕ್ಕೆ 'ಹೈ' ಸೂಚನೆ
ಸಂಗ್ರಹ ಚಿತ್ರ
Published On :

ಬೆಂಗಳೂರು: ಎಕ್ಸ್‌ ಕಾರ್ಪ್‌ ಖಾತೆಗಳ ನಿರ್ಬಂಧಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ 2021 ಮತ್ತು 2022ರಲ್ಲಿ ಹೊರಡಿಸಿರುವ ನಿರ್ಬಂಧ ಆದೇಶಗಳನ್ನು ಮರು‌ ಪರಿಗಣಿಸಿ, ಸಕಾರಣ ಹೊಂದಿರುವ ಆದೇಶ ಮಾಡಲು ಒಪ್ಪಿಕೊಂಡರೆ ಅನಗತ್ಯ ಪ್ರಚಾರ ತಪ್ಪಿಸಬಹುದು ಎಂದು ಹೈಕೋರ್ಟ್‌ ಬುಧವಾರ ಮೌಖಿಕವಾಗಿ ಅಭಿಪ್ರಾಯಪಟ್ಟಿತು.

ವೈಯಕ್ತಿಕ ಖಾತೆಗಳನ್ನು ನಿರ್ಬಂಧಿಸಿ ಕೇಂದ್ರ ಸರ್ಕಾರವು 2021ರ ಫೆಬ್ರವರಿ ಮತ್ತು 2022ರ ಅವಧಿಯಲ್ಲಿ ಮಾಡಿದ್ದ ಆದೇಶಗಳನ್ನು ಪ್ರಶ್ನಿಸಿದ್ದ ಅರ್ಜಿ ವಜಾ ಮಾಡಿರುವ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಎಕ್ಸ್‌ ಕಾರ್ಪ್‌ (ಟ್ವಿಟರ್‌) ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜಿ ನರೇಂದರ್‌ ಮತ್ತು ವಿಜಯಕುಮಾರ್‌ ಎ. ಪಾಟೀಲ್‌ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಎಕ್ಸ್‌ ಕಾರ್ಪ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಜನ್‌ ಪೂವಯ್ಯ ಅವರು “ಕೇಂದ್ರ ಸರ್ಕಾರದ ನಿರ್ಬಂಧ ಆದೇಶಗಳನ್ನು ಪಾಲಿಸಲಾಗಿದೆ. ಆದರೆ, ಮೇಲ್ನೋಟಕ್ಕೆ ಆ ಆದೇಶಗಳಿಗೆ ಯಾವುದೇ ಕಾರಣ ನೀಡಲಾಗಿಲ್ಲ. ಆದರೂ ನಾವು ಖಾತೆಗಳ ವಿಷಯ ನಿರ್ಬಂಧಿಸಿರುವುದನ್ನು ಮುಂದುವರಿಸಲಿದ್ದೇವೆ. ಇಡೀ ಪ್ರಕರಣವನ್ನು ಕೇಂದ್ರ ಸರ್ಕಾರಕ್ಕೆ ಮರಳಿ ಕಳುಹಿಸಬೇಕು. ಅವರು ಸಕಾರಣ ಹೊಂದಿದ ಆದೇಶ ಹೊರಡಿಸಲಿ” ಎಂದು ಪೀಠಕ್ಕೆ ವಿವರಿಸಿದರು.

ಇದಕ್ಕೆ ಪೀಠವು “ನಮ್ಮ ಮನಸ್ಸಿನಲ್ಲೂ ಅದೇ ಇದೆ. ಇದನ್ನು ನಾವು ಕಾರ್ಯದರ್ಶಿಗೆ ಕಳುಹಿಸುತ್ತೇವೆ. ಅದು ಆಂತರಿಕ ನಿರ್ಧಾರವಾದರೆ ಆಗ ಅದು ಅನಗತ್ಯ ಪ್ರಚಾರಕ್ಕೀಡಾಗುವುದಿಲ್ಲ … ನಿಯಮದ ಪ್ರಕಾರ ಕಾರ್ಯದರ್ಶಿಯು ನಿರ್ಧಾರ ಕೈಗೊಳ್ಳಬಹುದಾಗಿದೆ. ಹೀಗಾಗಿ, ಎಎಸ್‌ಜಿ ಅವರ ಜೊತೆ ಮಾತನಾಡಿ, ಅದು ಒಪ್ಪಿಗೆಯಾದರೆ ನಾವು ಅದನ್ನು ವಾಪಸ್‌ ಕಳುಹಿಸುತ್ತೇವೆ. ಎಎಸ್‌ಜಿ ಅವರು ಸಂಬಂಧಿತ ಅಧಿಕಾರಿ ಮತ್ತು ಇಲಾಖೆಗೆ ಸಲಹೆ ನೀಡಬಹುದು” ಎಂದರು.

ಖಾತೆ ನಿರ್ಬಂಧವನ್ನು ಕಾಲಮಿತಿಯಲ್ಲಿ ಪಾಲಿಸಲು ವಿಫಲವಾದ ಎಕ್ಸ್‌ ಕಾರ್ಪ್‌ಗೆ ದಂಡ ವಿಧಿಸಬಹುದೇ ಎಂಬುದರ ಕುರಿತೂ ಕೇಂದ್ರ ಸರ್ಕಾರದ ಸೂಕ್ತ ಅಧಿಕಾರಿ ನಿರ್ಧರಿಸಬಹುದು ಎಂದು ನ್ಯಾಯಾಲಯ ಹೇಳಿದೆ.

“ಮೇಲ್ನೋಟಕ್ಕೆ ನೋಡಿದರೆ (ಎಕ್ಸ್‌ ಕಾರ್ಪ್‌) ಅವರ ಪರವಾಗಿ ಪ್ರಕರಣವಿದೆ. ನ್ಯಾಯಾಲಯವು ₹50 ಲಕ್ಷ ದಂಡ ವಿಧಿಸಿದೆ. ನಾವು ದಂಡವನ್ನು ಸಮರ್ಥಿಸಬೇಕಿದೆ. ಪ್ರಕರಣವನ್ನು ಕಾರ್ಯದರ್ಶಿಗೆ ಮರಳಿಸುವುದು ಉತ್ತಮ. ಅವರು ಅರ್ಜಿಯನ್ನು ಒಪ್ಪಬಹುದು ಅಥವಾ ತಿರಸ್ಕರಿಸಬಹುದು. ಅವರಿಗೆ ಆ ಅಧಿಕಾರವಿದ್ದು, ಅದನ್ನು ಅವರು ಪರಿಶೀಲಿಸಲಿ. ಸಮರ್ಥನೀಯ ಅಥವಾ ಅಸಮರ್ಥನೀಯ ಎಂದು ಅವರು ಹೇಳಲಿ” ಎಂದು ಪೀಠ ಹೇಳಿದೆ.

ಎಕ್ಸ್‌ ಕಾರ್ಪ್‌ ಮೇಲ್ಮನವಿಯನ್ನು ತಿದ್ದುಪಡಿ ಮಾಡಲು ಕೋರಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಾಲಯವು ಪುರಸ್ಕರಿಸಿದ್ದು, ವಿಚಾರಣೆಯನ್ನು ಸೆಪ್ಟೆಂಬರ್‌ 27ಕ್ಕೆ ಮುಂದೂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.