ಅಕ್ಟೋಬರ್ 1ರಿಂದ ಶೇ.30ರಷ್ಟು ಆಸ್ತಿ ಮಾರ್ಗಸೂಚಿ ದರ ಹೆಚ್ಚಳ: ಕೃಷ್ಣ ಬೈರೇಗೌಡ
ಪ್ರತಿ ವರ್ಷ ಆಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಬೇಕು ಎಂಬ ನಿಯಮ ಇದೆ. ಅದಕ್ಕಾಗಿ ನಾವು ಅಕ್ಟೋಬರ್ 1ರಿಂದ ಆಸ್ತಿ ನೋಂದಣಿ ಮಾರ್ಗಸೂಚಿ ದರವನ್ನು ಹೆಚ್ಚಳ ಮಾಡುತ್ತಿದ್ದೇವೆ.

ಬೆಂಗಳೂರು: ಪ್ರತಿ ವರ್ಷ ಆಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಬೇಕು ಎಂಬ ನಿಯಮ ಇದೆ. ಅದಕ್ಕಾಗಿ ನಾವು ಅಕ್ಟೋಬರ್ 1ರಿಂದ ಆಸ್ತಿ ನೋಂದಣಿ ಮಾರ್ಗಸೂಚಿ ದರವನ್ನು ಹೆಚ್ಚಳ ಮಾಡುತ್ತಿದ್ದೇವೆ. ಶೇಕಡಾ 30ರಷ್ಟು ಹೆಚ್ಚಳ ಆಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ, ಎಲ್ಲ ಕಡೆ ಮಾರ್ಗಸೂಚಿ ದರ ಏರಿಕೆ ಆಗಲ್ಲ. ಕೆಲವು ಕಡೆ ಮಾರುಕಟ್ಟೆ ದರಕ್ಕಿಂತ ಮಾರ್ಗಸೂಚಿ ದರ ಹೆಚ್ಚಳ ಇದ್ದರೆ ಅಲ್ಲಿ ಹೆಚ್ಚು ಆಗುವುದಿಲ್ಲ. ಆದರೆ, ಮಾರುಕಟ್ಟೆ ದರಕ್ಕಿಂತ ಬಹಳ ಕಡಿಮೆ ಮಾರ್ಗಸೂಚಿ ದರ ಇದ್ದರೆ ಖಂಡಿತ ಹೆಚ್ಚಳ ಆಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಹೆದ್ದಾರಿಗಳು, ವಿಮಾನ ನಿಲ್ದಾಣ, ಐಟಿ ಬಿಟಿ ಬಂದಿರುವ ಕಡೆ ಮಾರ್ಗಸೂಚಿ ದರ ಕಡಿಮೆ ಇದೆ. ಇಂತಹ ಕಡೆ ಮಾರ್ಗಸೂಚಿ ದರ ಹೆಚ್ಚಳ ಆಗಲಿದೆ. ಸರಾಸರಿ ಶೇಕಡಾ 30ರಷ್ಟು ಮಾರ್ಗಸೂಚಿ ದರ ಏರಿಕೆ ಆಗಲಿದೆ. ಈ ಬಗ್ಗೆ ಆಕ್ಷೇಪ ಇದ್ದರೆ ಸಲ್ಲಿಸಲು ಅವಕಾಶ ಇದೆ. ಆಕ್ಷೇಪ ಗಮನಿಸಿ ಅಧಿಸೂಚನೆಯನ್ನು ನಂತರ ಪ್ರಕಟ ಮಾಡಲಾಗುವುದು. ಮಾರ್ಗಸೂಚಿ ದರ ಏರಿಕೆಯಾದರೆ ವರ್ಷಕ್ಕೆ 2 ಸಾವಿರ ಕೋಟಿ ರೂಪಾಯಿ ಆದಾಯ ಬರಲಿದೆ ಎಂದು ಹೇಳಿದರು.
ಮಾರ್ಗಸೂಚಿ ದರ ಏರಿಕೆಯಿಂದ ಒಂದಷ್ಟು ವ್ಯತ್ಯಾಸ ಆಗಬಹುದು. ಆದರೆ, ಅದು ಎರಡು ತಿಂಗಳ ಬಳಿಕ ಸರಿ ಆಗಲಿದೆ. ಆಸ್ತಿ ಮಾರಾಟದ ವೇಳೆ ಕಪ್ಪು ಹಣ ಬಳಕೆ ಆಗುತ್ತಿದೆ. ಅದಕ್ಕೆ ಅವಕಾಶ ಕೊಡಬಾರದಲ್ಲವೇ? ಹೊಸದು ಮಾಡಿದಾಗ ಪರ – ವಿರೋಧ ಇರಲಿದೆ. ಆದರೆ, ಮಾರ್ಗಸೂಚಿ ದರ ಪ್ರತಿವರ್ಷ ಏರಿಕೆ ಮಾಡಬೇಕು ಅಂತ ಕಾಯಿದೆಯಲ್ಲಿಯೇ ಇದೆ. 5 ವರ್ಷದಿಂದ ಮಾರ್ಗಸೂಚಿ ದರ ಏರಿಕೆ ಆಗಿರಲಿಲ್ಲ. ಅದಕ್ಕೆ ನಾವು ಈಗ ಮಾಡುತ್ತಾ ಇದ್ದೇವೆ ಎಂದು ಕೃಷ್ಣ ಬೈರೇಗೌಡ ಸ್ಪಷ್ಟನೆ ನೀಡಿದರು.
ಸರ್ಕಾರಿ ಜಮೀನು ಹುಡುಕಲು ಆ್ಯಪ್ ಬಳಕೆ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಕೆಲವೇ ದಿನಗಳಲ್ಲಿ ಆ್ಯಪ್ ಬಿಡುಗಡೆ ಆಗಲಿದೆ. ಇದನ್ನು ವಿಲೇಜ್ ಅಕೌಂಟೆಂಟ್‌ಗೆ ಕೊಡುತ್ತೇವೆ. ಅವರು ಸ್ಥಳಕ್ಕೆ ಹೋಗಿ ಆ್ಯಪ್ ಆನ್ ಮಾಡಬೇಕು. ಒಂದು ವೇಳೆ ಆ ಭೂಮಿ ಸರ್ಕಾರಿ ಜಮೀನು ಆಗಿದ್ದರೆ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳುತ್ತಾರೆ.
ಪ್ರತಿ ಮೂರು ತಿಂಗಳಿಗೊಮ್ಮೆ ಬೀಟ್ ಸಿಸ್ಟಮ್ ಮಾಡುತ್ತೇವೆ. ಬೆಂಗಳೂರಿನಲ್ಲಿ ಸರ್ಕಾರಿ ಜಮೀನನ್ನು ಕಬ್ಜಾ ಮಾಡಿದ್ದಾರೆ. ಕೋರ್ಟ್‌ಗೆ ಕೆಲವರು ತಪ್ಪು ಮಾಹಿತಿ ನೀಡಿ ತೀರ್ಪು ಪಡೆದಿದ್ದಾರೆ. ಕೆಲವು ಕಡೆ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಕೆಲ ಕಡೆ ಅಧಿಕಾರಿಗಳು ಸಹ ಶಾಮೀಲು ಆಗಿದ್ದಾರೆ ಎಂದು ಕೃಷ್ಣಬೈರೇಗೌಡ ಹೇಳಿದರು.
ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯಂತಹ ಸ್ಥಳಗಳಲ್ಲಿ, ಮಾರ್ಗದರ್ಶಿ ಮೌಲ್ಯಕ್ಕಿಂತ ಮಾರುಕಟ್ಟೆ ಮೌಲ್ಯವು 500 ಪಟ್ಟು ಹೆಚ್ಚಾಗಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನಿನ ಮಾರ್ಗಸೂಚಿ ಮೌಲ್ಯ 5 ಲಕ್ಷದಿಂದ 10 ಲಕ್ಷ ರೂ.ವರೆಗೆ ಮತ್ತು ಮಾರುಕಟ್ಟೆ ಮೌಲ್ಯ 10 ಕೋಟಿ ರೂ.ಗಿಂತ ಹೆಚ್ಚಿದ್ದರೆ ಅಂತಹ ಕಡೆಗಳಲ್ಲಿ ಶೇ.50ರಷ್ಟು ಹೆಚ್ಚಿಸಲಾಗುವುದು ಎಂದರು.
ನಾವು ಹೊಸ ಮಾರ್ಗದರ್ಶಿ ಮೌಲ್ಯವನ್ನು ಅಕ್ಟೋಬರ್ 1 ರಂದು ಬೆಂಗಳೂರಿನಲ್ಲಿ ಜಾರಿಗೆ ತರಲಿದ್ದೇವೆ. ಇದನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುವುದು. ಇತರ ಜಿಲ್ಲೆಗಳಲ್ಲಿ ಹೊಸ ಮಾರ್ಗದರ್ಶಿ ಮೌಲ್ಯವನ್ನು ಜಾರಿಗೊಳಿಸುವ ಕುರಿತು ಸಂಪುಟ ಉಪಸಮಿತಿ ತೀರ್ಮಾನ ಕೈಗೊಳ್ಳಲಿದೆ ಎಂದು ಬೈರೇಗೌಡ ಹೇಳಿದರು.
ಆಸ್ತಿ ನೋಂದಣಿಗಾಗಿ ಕಾವೇರಿ-2 ಸಾಫ್ಟ್‌ವೇರ್ ಅನ್ನು ಉಲ್ಲೇಖಿಸಿದ ಅವರು, ದೋಷಗಳನ್ನು ಸರಿಪಡಿಸಲಾಗಿದೆ ಎಂದು ಹೇಳಿದರು. ನಿತ್ಯ ಸರಾಸರಿ 10,000ದಿಂದ 13,000 ಆಸ್ತಿ ನೋಂದಣಿಯಾಗುತ್ತಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಇದುವರೆಗೆ 800 ಕೋಟಿ ರೂ.ಗೂ ಹೆಚ್ಚು ಆದಾಯವನ್ನು ಸರಕಾರ ಗಳಿಸಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


