ಧಾರ್ಮಿಕ ಮೆರವಣಿಗೆ ವೇಳೆ ಕಾರು ಚಲಾಯಿಸಿದಕ್ಕೆ ಕೆಂಡಾಮಂಡಲ: ಆನಂದ್ ಸ್ವೀಟ್ಸ್ ಸಂಸ್ಥಾಪಕ, ಚಾಲಕನ ಮೇಲೆ ಹಲ್ಲೆ!
ಧಾರ್ಮಿಕ ಮೆರವಣಿಗೆ ವೇಳೆ ಕಾರು ಚಲಾಯಿಸಿದ ಹಿನ್ನೆಲೆಯಲ್ಲಿ ಆನಂದ್ ಸ್ವೀಟ್ಸ್ ಸಂಸ್ಥಾಪಕ ಆನಂದ್ ದಯಾಳ್ ದಾದು (72) ಹಾಗೂ ಅವರ ಕಾರು ಚಾಲಕನ ಮೇಲೆ ಹಲ್ಲೆ ನಡೆದಿರುವ ಘಟನೆ ಶಾಂತಿನಗರದ ಲಕ್ಷ್ಮಿ ರಸ್ತೆಯಲ್ಲಿ ಬುಧವಾರ ನಡೆದಿದೆ.

ಬೆಂಗಳೂರು: ಧಾರ್ಮಿಕ ಮೆರವಣಿಗೆ ವೇಳೆ ಕಾರು ಚಲಾಯಿಸಿದ ಹಿನ್ನೆಲೆಯಲ್ಲಿ ಆನಂದ್ ಸ್ವೀಟ್ಸ್ ಸಂಸ್ಥಾಪಕ ಆನಂದ್ ದಯಾಳ್ ದಾದು (72) ಹಾಗೂ ಅವರ ಕಾರು ಚಾಲಕನ ಮೇಲೆ ಹಲ್ಲೆ ನಡೆದಿರುವ ಘಟನೆ ಶಾಂತಿನಗರದ ಲಕ್ಷ್ಮಿ ರಸ್ತೆಯಲ್ಲಿ ಬುಧವಾರ ನಡೆದಿದೆ.
ಲಕ್ಷ್ಮೀ ರಸ್ತೆಯ 7ನೇ ಕ್ರಾಸ್‌ನಲ್ಲಿ ಆನಂದ್ ದಯಾಳ್ ದಾದು ಅವರು ತಮ್ಮ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಧಾರ್ಮಿಕ ಮೆರವಣಿಗೆ ಸಾಗುತ್ತಿತ್ತು. ಧಾರ್ಮಿಕ ಮೆರವಣಿಗೆ ನಡೆಯುತ್ತಿದ್ದರೂ ಚಾಲಕ ಶ್ಯಾಮ್ ಸುಂದರ್ ಪಿಳ್ಳೈ (36) ಅವರು, ಕಾರು ನಿಲ್ಲಿಸದೆ, ರಸ್ತೆ ಬದಿಯಿಂದಲೇ ನಿಧಾನಗತಿಯಲ್ಲಿ ಕಾರು ಚಲಾಯಿಸುತ್ತಿದ್ದ.
ಈ ನಡವಳಿಕೆ ಧಾರ್ಮಿಕ ಮೆರವಣಿಗೆಯಲ್ಲಿ ಸಾಗುತ್ತಿದ್ದ ಕೆಲವರಲ್ಲಿ ಕೋಪವನ್ನುಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಕಾರು ಚಾಲಕನ ಬಳಿಗೆ ಬಂದು, ನಿಂದಿಸಿ, ಹಲ್ಲೆ ನಡೆಸಿದ್ದಾರೆ. ಈ ವೇಳೆ ಆನಂದ್ ದಯಾಳ್ ದಾದು ಅವರು ಮಧ್ಯೆ ಪ್ರವೇಶಿಸಿದ್ದು, ಅವರ ಮೇಲೂ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ಪರಿಣಾಮ ಆನಂದ್ ಅವರಿಗೆ ರಕ್ತಸ್ರಾವವಾಗಿದೆ. ಈ ವಿಚಾರ ತಿಳಿದ ಆನಂದ್ ಅವರ ಕುಟುಂಬಸ್ಥರು ಕೂಡಲೇ ಸ್ಥಳಕ್ಕೆ ತೆರಳಿ, ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆ ಸಂಬಂಧ ಆನಂದ್ ಅವರ ಪುತ್ರ ಅಂಕೀತ್ ದಾದು ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತಂದೆ ಅರಮನೆ ಮೈದಾನದಿಂದ ಹಿಂತಿರುಗುತ್ತಿದ್ದರು. ಈ ವೇಳೆ ಶಾಂತಿನಗರದ ಲಕ್ಷ್ಮಿ ರಸ್ತೆಯ 7ನೇ ಕ್ರಾಸ್‌ನಲ್ಲಿ ಅವರ ಮೇಲೆ ಆಯುಧಗಳಿಂದ ಹಲ್ಲೆ ನಡೆಸಲಾಗಿದೆ ಎಂದು ಹೇಳಿದ್ದಾರೆ.
ಈ ನಡುವೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಮೂವರು ಆರೋಪಿಗಳ ಪೈಕಿ ಇಬ್ಬರನ್ನು ಬಂಧನಕ್ಕೊಳಪಡಿಸಿದ್ದಾರೆ. ಬಂಧಿತರನ್ನು ಶಾಂತಿನಗರ ನಿವಾಸಿಗಳಾದ ಹರೀಶ್ ಕುಮಾರ್ ಹಾಗೂ ಸಂದೀಪ್ ಎಂದು ಗುರ್ತಿಸಲಾಗಿದೆ.
ಘಟನೆ ವೇಳೆ ಆರೋಪಿಗಳು ಪಾನಮತ್ತರಾಗಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಅವರ ರಕ್ತ ಹಾಗೂ ಮೂತ್ರದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಆನಂದ್ ಅವರ ಮೇಲೆ ಆಯುಧಗಳಿಂದ ಹಲ್ಲೆ ನಡೆದಿಲ್ಲ. ಮುಷ್ಟಿಯಿಂದ ಹೊಡೆದು ಹಲ್ಲೆ ನಡೆಸಿದ್ದಾರೆ. ಮತ್ತೊರ್ವ ಆರೋಪಿಗಾಗಿ ಹುಡುಕಾಟ ಮುಂದುವರೆದಿದೆ. ರಸ್ತೆ ಕಿರಿದಾಗಿದ್ದರಿಂದ ಮೆರವಣಿಗೆ ವೇಳೆಯೂ ಕಾರು ಚಲಾಯಿಸಿದ್ದಕ್ಕೆ ಆರೋಪಿಗಳು ಸಿಡಿಮಿಡಿಗೊಂಡಿದ್ದಾರೆ. ಆರಂಭದಲ್ಲಿಯೇ ಚಾಲಕನಿಗೆ ಕಾರು ನಿಲ್ಲಿಸುವಂತೆ ಹೇಳಿದ್ದಾರೆ. ಆದರೂ ಕಾಲು ನಿಲ್ಲಿಸದೆ ಚಲಾಯಿಸಿದ್ದಕ್ಕೆ ಹಲ್ಲೆ ನಡೆಸಿರಬಹುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ನಡುವೆ ಆರೋಪಿಗಳ ವಿರುದ್ಧ ಪೊಲೀಸರು ಭಾರತೀಯ ದಂಡ ಸಂಹಿತೆಯ ಹಲವು ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


