ಮುಂದಿನ ಸಿಬಿಐ ನಿರ್ದೇಶಕರಾಗಿ ಡಿಜಿಪಿ ಪ್ರವೀಣ್ ಸೂದ್ ನೇಮಕ
ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ (ಡಿಜಿ ಮತ್ತು ಐಜಿಪಿ) ಪ್ರವೀಣ್ ಸೂದ್ ಅವರು ಮುಂದಿನ ಕೇಂದ್ರೀಯ ತನಿಖಾ ದಳದ (ಸಿಬಿಐ) ನಿರ್ದೇಶಕರಾಗಲಿದ್ದಾರೆ.

ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ (ಡಿಜಿ ಮತ್ತು ಐಜಿಪಿ) ಪ್ರವೀಣ್ ಸೂದ್ ಅವರು ಮುಂದಿನ ಕೇಂದ್ರೀಯ ತನಿಖಾ ದಳದ (ಸಿಬಿಐ) ನಿರ್ದೇಶಕರಾಗಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ (ಕಾಂಗ್ರೆಸ್) ಅಧೀರ್ ರಂಜನ್ ಚೌಧರಿ ಅವರನ್ನೊಳಗೊಂಡ ತ್ರಿಸದಸ್ಯ ನೇಮಕಾತಿ ಸಮಿತಿಯು ಶನಿವಾರ ಅವರ ಹೆಸರನ್ನು ಅಂತಿಮಗೊಳಿಸಿದೆ.
ಸಮಿತಿ ಶಿಫಾರಸಿನ ಆಧಾರದ ಮೇಲೆ ಕ್ಯಾಬಿನೆಟ್ ನೇಮಕಾತಿ ಸಮಿತಿ (ಎಸಿಸಿ) ಸೂದ್ ಅವರ ನೇಮಕವನ್ನು ಅನುಮೋದಿಸಿದೆ ಎಂದು ವರದಿಯಾಗಿದೆ. ಆದರೂ ಆದೇಶಕ್ಕಾಗಿ ಕಾಯಲಾಗುತ್ತಿದೆ. ಸಿಬಿಐ ನಿರ್ದೇಶಕರ ಅಧಿಕಾರಾವಧಿಯನ್ನು ಎರಡು ವರ್ಷಗಳಿಗೆ ನಿಗದಿಪಡಿಸಲಾಗಿದೆ.
ಈ ಸಂಬಂಧ ಪ್ರತಿಕ್ರಿಯಿಸಲು ಸೂದ್ ನಿರಾಕರಿಸಿದ್ದಾರೆ. ಸೂದ್ ಜೊತೆಗೆ ಸುಧೀರ್ ಸಕ್ಸೇನಾ (ಡಿಜಿಪಿ ಮಧ್ಯಪ್ರದೇಶ) ಮತ್ತು ತಾಜ್ ಹಾಸನ್ (ಅಗ್ನಿಶಾಮಕ ಸೇವೆಗಳು, ನಾಗರಿಕ ರಕ್ಷಣಾ ಮತ್ತು ಗೃಹರಕ್ಷಕ ದಳದ ಮುಖ್ಯಸ್ಥರು ನವದೆಹಲಿ) ಅವರ ಹೆಸರುಗಳು ಮುಂದಿನ ಸಿಬಿಐ ನಿರ್ದೇಶಕರ ಪಟ್ಟಿಯಲ್ಲಿವೆ.
ಸಿಬಿಐನ ಹಾಲಿ ನಿರ್ದೇಶಕ ಸುಬೋಧ್ ಕುಮಾರ್ ಜೈಸ್ವಾಲ್ ಅವರ ಎರಡು ವರ್ಷಗಳ ಅಧಿಕಾರಾವಧಿಯು ಮೇ 25 ರಂದು ಕೊನೆಗೊಳ್ಳಲಿದ್ದು, ಅವರ ಜಾಗಕ್ಕೆ ಸೂದ್ ಅವರನ್ನು ನೇಮಕ ಮಾಡಲಾಗಿದೆ. 1985ರ ಐಪಿಎಸ್ ಬ್ಯಾಚ್ ನ ಸೂದ್
ಸಿಬಿಐ ನಿರ್ದೇಶಕರಾಗಿ ನೇಮಕಗೊಂಡ ಕರ್ನಾಟಕ ಕೇಡರ್‌ನ ಮೂರನೇ ಐಪಿಎಸ್ ಅಧಿಕಾರಿಯಾಗಿದ್ದಾರೆ. ಹಿಮಾಚಲ ಪ್ರದೇಶಕ್ಕೆ ಸೇರಿದ ಸೂದ್ 2020 ಫೆಬ್ರವರಿ 1 ರಂದು ಕರ್ನಾಟಕದ ಡಿಜಿ ಮತ್ತು ಐಜಿಪಿಯಾಗಿ ನೇಮಕಗೊಂಡಿದ್ದರು.
ದೆಹಲಿ ಐಐಟಿಯ ಹಳೆಯ ವಿದ್ಯಾರ್ಥಿಯಾಗಿರುವ ಅವರು, ಹೊಸ ಯುಗದ ಅಪರಾಧಗಳು, ಕಾನೂನು ಮತ್ತು ಸುವ್ಯವಸ್ಥೆಯ ಸವಾಲುಗಳನ್ನು ನಿಭಾಯಿಸಲು ಮತ್ತು ಸಾಮಾನ್ಯ ಜನರಿಗೆ ಸುಲಭವಾಗಿ ಪೊಲೀಸ್ ಸೇವೆಗಳನ್ನು ಒದಗಿಸುವಲ್ಲಿ ಹಳೆಯ ಪೊಲೀಸ್ ತರಬೇತಿ ಕೇಂದ್ರಗಳಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದಾರೆ. ಬೆಂಗಳೂರಿನ ಕುಖ್ಯಾತ ಸಂಚಾರ ದಟ್ಟಣೆ ತಗ್ಗಿಸಲು ತಂತ್ರಜ್ಞಾನ ಬಳಸಿಕೊಳ್ಳುವಲ್ಲಿ ಅವರ ಕೊಡುಗೆ ಎಲ್ಲರಿಗೂ ತಿಳಿದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


