ಬಿಎಸ್ ಯಡಿಯೂರಪ್ಪ ನಿವಾಸದ ಮೇಲೆ ಕಲ್ಲು ತೂರಾಟ: ಕಾಂಗ್ರೆಸ್ ಮುಖಂಡ ಸೇರಿದಂತೆ ಮೂವರ ಬಂಧನ
ಪರಿಶಿಷ್ಟ ಜಾತಿಗೆ ಒಳಮೀಸಲಾತಿಯನ್ನು ವಿರೋಧಿಸಿ ಬಂಜಾರ ಸಮುದಾಯದವರು ಸೋಮವಾರ ನಡೆಸಿದ ಪ್ರತಿಭಟನೆ ವೇಳೆ, ಶಿಕಾರಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಂಗಳವಾರ ನಾಲ್ಕು ಎಫ್‌ಐಆರ್‌ಗಳನ್ನು ದಾಖಲಿಸಿ ಮೂವರನ್ನು ಬಂಧಿಸಿದ್ದಾರೆ.

ಶಿವಮೊಗ್ಗ: ಪರಿಶಿಷ್ಟ ಜಾತಿಗೆ ಒಳಮೀಸಲಾತಿಯನ್ನು ವಿರೋಧಿಸಿ ಬಂಜಾರ ಸಮುದಾಯದವರು ಸೋಮವಾರ ನಡೆಸಿದ ಪ್ರತಿಭಟನೆ ವೇಳೆ, ಶಿಕಾರಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಂಗಳವಾರ ನಾಲ್ಕು ಎಫ್‌ಐಆರ್‌ಗಳನ್ನು ದಾಖಲಿಸಿ ಮೂವರನ್ನು ಬಂಧಿಸಿದ್ದಾರೆ.
ಬಂಧಿತರಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡ ರಾಘವೇಂದ್ರ ನಾಯ್ಕ ಕೂಡ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ ರಾಜ್ಯ ಸರ್ಕಾರ ಒಳಮೀಸಲಾತಿ ನಿರ್ಧಾರ ಹಿಂಪಡೆಯಬೇಕು ಎಂದು ಆಗ್ರಹಿಸಿ ಬಂಜಾರ ಸಮುದಾಯದವರು ಮಂಗಳವಾರ ಕುಂಚೇನಹಳ್ಳಿ ಬಳಿ ಶಿವಮೊಗ್ಗ-ಶಿಕಾರಿಪುರ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ತೆಂಗಿನ ಕಾಯಿ ಸುಟ್ಟಿದ್ದರಿಂದ ಕೆಲಕಾಲ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತು.
ಸೋಮವಾರ ಪ್ರತಿಭಟನೆ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರ ಮನೆಯ ಸುತ್ತ ಬಿಗಿ ಭದ್ರತೆ ಒದಗಿಸಲಾಗಿದೆ. ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಸೋಮವಾರದ ಘಟನೆ ದುರದೃಷ್ಟಕರ ಎಂದು ಬಣ್ಣಿಸಿದ್ದು, ಕೆಲವರ ತಪ್ಪು ತಿಳುವಳಿಕೆ ಮತ್ತು ಪ್ರಚೋದನೆಯಿಂದ ಇದು ಸಂಭವಿಸಿದೆ. ಯಡಿಯೂರಪ್ಪ ಅವರಿಗೆ ಬಂಜಾರರ ಬಗ್ಗೆ ವಿಶೇಷ ಪ್ರೀತಿ ಇದೆ. ಅವರ ಹಲವು ಬೇಡಿಕೆಗಳನ್ನು ಈಡೇರಿಸಿದ್ದಾರೆ ಎಂದರು.
ಸಂತ ಸೇವಾಲಾಲರ ಜನ್ಮಸ್ಥಳವಾದ ಸೂರಗೊಂಡನಕೊಪ್ಪದ ಅಭಿವೃದ್ಧಿಯಲ್ಲಿ ಯಡಿಯೂರಪ್ಪ ಅವರ ಪಾತ್ರ ದೊಡ್ಡದು. ಆದರೆ, ಸೋಮವಾರ ಕೆಲ ಪ್ರತಿಭಟನಾಕಾರರು ಯಡಿಯೂರಪ್ಪ ಅವರ ಮನೆಗೆ ಕಲ್ಲು ತೂರಿದರು. ಯಡಿಯೂರಪ್ಪ ಪ್ರತಿಭಟನಾಕಾರರ ವಿರುದ್ಧ ಕ್ರಮ ಕೈಗೊಳ್ಳದಂತೆ ಮನವಿ ಮಾಡಿದ್ದು, ಸಮಾಜದ ಮುಖಂಡರ ಜತೆ ಮಾತನಾಡುವುದಾಗಿ ಹೇಳಿದರು. ಆದರೆ, ಪ್ರತಿಭಟನೆ ವೇಳೆ ಪೊಲೀಸರ ಮೇಲೆ ನಡೆದ ಹಲ್ಲೆಯಿಂದ ನನಗೆ ನೋವಾಗಿದೆ. ಜನರು ಕಾನೂನನ್ನು ಕೈಗೆ ತೆಗೆದುಕೊಂಡರು' ಎಂದು ಜ್ಞಾನೇಂದ್ರ ಸುದ್ದಿಗಾರರಿಗೆ ತಿಳಿಸಿದರು.
ಈ ಹಿಂದೆ ನಾಲ್ಕೈದು ಪ್ರಕರಣಗಳಿರುವ ಕೆಲವರು ಈ ಘರ್ಷಣೆಯಲ್ಲಿ ಭಾಗಿಯಾಗಿ ಪ್ರತಿಭಟನಾಕಾರರನ್ನು ಪ್ರಚೋದಿಸಿದ್ದಾರೆ ಎಂದು ಆರೋಪಿಸಿದರು.
ಸೋಮವಾರದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಮಿಥುನ್ ಕುಮಾರ್ ಜಿಕೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


