ರೌಡಿ ಶೀಟರ್ ಫೈಟರ್ ರವಿ ಎದುರು ಕೈ ಮುಗಿದು ನಿಂತ ಪ್ರಧಾನಿ ಮೋದಿ ಫೋಟೊ: ವರದಿ ಕೇಳಿದ ಬಿಜೆಪಿ ಹೈಕಮಾಂಡ್
ಕರ್ನಾಟಕದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಭಾರಿ ಮುಖಭಂಗವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮತ್ತು ರೌಡಿಶೀಟರ್ ಫೈಟರ್ ರವಿ ಎದುರು ನಿಂತು ಪರಸ್ಪರ ಕೈ ಜೋಡಿಸಿ ಶುಭಾಶಯ ಕೋರುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಬೆಂಗಳೂರು: ಕರ್ನಾಟಕದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಭಾರಿ ಮುಖಭಂಗವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮತ್ತು ರೌಡಿಶೀಟರ್ ಫೈಟರ್ ರವಿ ಎದುರು ನಿಂತು ಪರಸ್ಪರ ಕೈ ಜೋಡಿಸಿ ಶುಭಾಶಯ ಕೋರುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ವಿರೋಧ ಪಕ್ಷಗಳು ಇದನ್ನೇ ದೊಡ್ಡ ವಿಷಯವನ್ನಾಗಿಸಿಕೊಂಡು, ಬಿಜೆಪಿ ಮಾತ್ರವಲ್ಲ ಪ್ರಧಾನಿ ಮೇಲೂ ವಾಗ್ದಾಳಿ ನಡೆಸುತ್ತಿವೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಉದ್ಘಾಟನೆ ವೇಳೆ ಪ್ರಧಾನಿ ಅವರನ್ನು ಸ್ವಾಗತಿಸಲು ರೌಡಿ ಶೀಟರ್‌ಗೆ ಅವಕಾಶ ನೀಡಿದ್ದಕ್ಕಾಗಿ ಕರ್ನಾಟಕ ಕಾಂಗ್ರೆಸ್ ಘಟಕವು ಆಡಳಿತಾರೂಢ ಬಿಜೆಪಿ ವಿರುದ್ಧ ಮಂಗಳವಾರ ವಾಗ್ದಾಳಿ ಮುಂದುವರಿಸಿದೆ.
ಬಿಜೆಪಿಯ ಮೂಲಗಳ ಪ್ರಕಾರ, ಪಕ್ಷದ ವರಿಷ್ಠರು ಈ ಬೆಳವಣಿಗೆಯಿಂದ ಅಸಮಾಧಾನಗೊಂಡಿದ್ದಾರೆ ಮತ್ತು ಈ ವಿಷಯದ ಬಗ್ಗೆ ವರದಿ ಕೇಳಿದ್ದಾರೆ. ವಿವಾದಿತ ವ್ಯಕ್ತಿಯೊಬ್ಬರಿಗೆ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಅವಕಾಶ ಮಾಡಿಕೊಟ್ಟು, ಪ್ರಧಾನಿಗೆ ಮುಜುಗರ ಉಂಟುಮಾಡಿರುವುದಕ್ಕೆ ಹೈಕಮಾಂಡ್ ಅಸಮಾಧಾನ ವ್ಯಕ್ತಪಡಿಸಿದೆ ಎನ್ನಲಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹರಿಹಾಯ್ದಿರುವ ಕಾಂಗ್ರೆಸ್, ‘ವಿಶ್ವದ ಎಲ್ಲವನ್ನೂ ತಿಳಿದಿರುವ ಸರ್ವ ಜ್ಞಾನಿ’ಗೆ ಪೈಟರ್ ರವಿ ಬಗ್ಗೆ ಮಾಹಿತಿ ಇಲ್ಲ ಎಂದರೆ ಹೇಗೆ?. ಯಾರೆಲ್ಲಾ ತಮಗೆ ಸ್ವಾಗತ ಕೋರುತ್ತಾರೆ ಎಂಬ ಪಟ್ಟಿಯನ್ನು ಪ್ರಧಾನಿ ಮೋದಿ ಮೊದಲೇ ಪಡೆಯುತ್ತಾರೆ. ಅಲ್ಲವೇ? ಎಂದು ಬಿಜೆಪಿಯನ್ನು ಲೇವಡಿ ಮಾಡಿದೆ.
ಮಂಡ್ಯಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಂಡ್ಯದಲ್ಲಿ ಸ್ವಾಗತಿಸುವ ವೇಳೆ ರೌಡಿ ಶೀಟರ್ ಫೈಟರ್ ರವಿಗೆ ಅವಕಾಶ ನೀಡಲಾಗಿತ್ತು. ಅವರ ಸ್ವಾಗತದ ವೇಳೆ ಪ್ರಧಾನಿಯವರು ಆತನ ಎದುರಿಗೆ ಕೈ ಜೋಡಿಸಿ ನಿಂತಿದ್ದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೇಳಿಕೆ ಬಿಜೆಪಿ ರೌಡಿ ಮೋರ್ಚಾಕ್ಕೆ ಮಾಡಿದ ಅವಮಾನ ಎಂದು ಕಾಂಗ್ರೆಸ್ ಆರೋಪಿಸಿದೆ.
ಇದನ್ನೂ ಓದಿ: ಫೈಟರ್ ರವಿಯೊಂದಿಗೆ ಪ್ರಧಾನಿ: 'ಭದ್ರತಾ ಲೋಪ.. ಮೋದಿಗೆ ಆತ ಯಾರೆಂದು ತಿಳಿದಿಲ್ಲ' ಎಂದ ಸಚಿವೆ ಶೋಭಾ ಕರಂದ್ಲಾಜೆ
ಆಡಳಿತಾರೂಢ ಬಿಜೆಪಿಯು ರೌಡಿಗಳನ್ನು ಪಕ್ಷಕ್ಕೆ ಸೇರಲು ಅವಕಾಶ ಮಾಡಿಕೊಟ್ಟಿದೆ ಎಂದು ಆರೋಪಿಸಲಾಗಿತ್ತು. ಮತ್ತೋರ್ವ ರೌಡಿ ಶೀಟರ್ ಸ್ಯಾಂಟ್ರೋ ರವಿ ಜತೆ ಬಿಜೆಪಿ ನಾಯಕರು ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ವಿಷಯವು ವಿವಾದಾಸ್ಪದವಾಗುತ್ತಿದ್ದಂತೆ, ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಯಿತು. ಸದ್ಯದ ಬೆಳವಣಿಗೆ ಆಡಳಿತಾರೂಢ ಬಿಜೆಪಿಗೂ ಮುಜುಗರ ಉಂಟು ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


