ಅನಧಿಕೃತ ಬಡಾವಣೆಗಳ ಹಾವಳಿ ತಡೆಗಟ್ಟಲು ರೇರಾ ನಿಯಮಕ್ಕೆ ತಿದ್ದುಪಡಿ ತರಲಾಗುವುದು: ಸಚಿವ ಜಮೀರ್
ರಾಜ್ಯದಲ್ಲಿನ ಅನಧಿಕೃತ ಬಡಾವಣೆಗಳ ಹಾವಳಿ ತಡೆಗಟ್ಟಲು ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ(ರೇರಾ) ನಿಯಮಕ್ಕೆ ತಿದ್ದುಪಡಿ ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಮಂಗಳವಾರ ಹೇಳಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿನ ಅನಧಿಕೃತ ಬಡಾವಣೆಗಳ ಹಾವಳಿ ತಡೆಗಟ್ಟಲು ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ(ರೇರಾ) ನಿಯಮಕ್ಕೆ ತಿದ್ದುಪಡಿ ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಮಂಗಳವಾರ ಹೇಳಿದ್ದಾರೆ.
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಮಂಗಳವಾರ ರೇರಾ (ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ)ದ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಯೋಜನಾ ವ್ಯಾಪ್ತಿಯಲ್ಲಿ ಹೊಸದಾಗಿ ಬಡಾವಣೆ ರಚನೆ ಮಾಡುವವರು ರೇರಾ ಅನುಮತಿ ಪಡೆಯದೆ ನಿವೇಶನ ಮಾರಾಟ ಮಾಡುತ್ತಿದ್ದಾರೆ. ಕೆಲವೆಡೆ ವಿವಾದ ಇರುವ ಜಮೀನುಗಳಲ್ಲಿ ಬಡಾವಣೆ ರಚನೆ ಮಾಡಿರುವುದರಿಂದ ನಿವೇಶನ ಖರೀದಿಸಿದವರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಹೀಗಾಗಿ ಇದನ್ನು ತಪ್ಪಿಸಲು ರೇರಾ ಅನುಮತಿ ಇಲ್ಲದಿರುವ ಬಡಾವಣೆಗಳ ನಿವೇಶನ ನೋಂದಣಿ ಮಾಡುವಂತಿಲ್ಲ ಎಂಬ ಕಾನೂನು ತರಲಾಗುವುದು ಎಂದು ಹೇಳಿದರು.
ಯೋಜನಾ ವ್ಯಾಪ್ತಿಯಲ್ಲಿ ಬಡಾವಣೆ ರಚನೆಗೆ ರೇರಾದಲ್ಲಿ ನೋಂದಣಿ ಕಡ್ಡಾಯ ಎಂದು ನಿಯಮ ಇದ್ದರೂ ಅನಧಿಕೃತವಾಗಿ ಕೆಲವರು ಬಡಾವಣೆ ರಚಿಸಿ ನಿವೇಶನ ಮಾರಾಟ ಮಾಡುತ್ತಿದ್ದಾರೆ. ಸಮಸ್ಯೆ ಉಂಟಾದರೆ ನಿವೇಶನ ಖರೀದಿಸಿದವರು ರೇರಾ ಬಳಿ ಬರುತ್ತಿದ್ದಾರೆ. ಆದರೆ ಆ ಹಂತದಲ್ಲಿ ರೇರಾ ಏನೂ ಮಾಡಲು ಬರುವುದಿಲ್ಲ. ಹೀಗಾಗಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ನಿಯಮಾವಳಿ ರೂಪಿಸಲಾಗುವುದು, ಈ ಬಗ್ಗೆ ಕಂದಾಯ ಇಲಾಖೆ ಜತೆ ಚರ್ಚಿಸಿ ಅಗತ್ಯ ಬಿದ್ದರೆ ಸಂಪುಟದಲ್ಲಿ ಚರ್ಚಿಸಿ ತಿದ್ದುಪಡಿ ತರಲಾಗುವುದು ಎಂದು ತಿಳಿಸಿದರು.
ವಸತಿ ಸಮುಚ್ಛಯಗಳ ನಿರ್ಮಾಣ ಮಾಡುವ ಬಿಲ್ಡರ್, ಡೆವಲಪರ್, ಪ್ರಮೋಟರ್ ಗಳು ಒಪ್ಪಂದದಂತೆ ನಿಗದಿತ ವೇಳೆಯಲ್ಲಿ ಫ್ಲ್ಯಾಟ್ ಕೊಡದೆ ಅನಗತ್ಯ ಕಿರುಕುಳ ನೀಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕೆಲವೆಡೆ ಒಪ್ಪಂದದ ಮೊತ್ತಕ್ಕಿಂತ ಹೆಚ್ಚುವರಿ ಮೊತ್ತಕ್ಕೆ ಒತ್ತಾಯ ಮಾಡುತ್ತಿರುವ ಆರೋಪಗಳು ಕೇಳಿ ಬರುತ್ತಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಗ್ರಾಹಕರಿಗೆ ವಂಚನೆ ಮಾಡುವ ಪ್ರಕರಣಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ರೇರಾ ವ್ಯಾಪ್ತಿಯಲ್ಲಿ ದೂರು ಪ್ರಕರಣಗಳು ಹೆಚ್ಚಾಗುತ್ತಿದ್ದು, ನಿರ್ವಹಣೆ ಕಷ್ಟವಾಗುತ್ತಿದೆ. ಜೊತೆಗೆ ಅನಧಿಕೃತ ಬಡಾವಣೆಗಳ ಹಾವಳಿ ನಿಯಂತ್ರಣವೂ ಸವಾಲಾಗಿದೆ. ಹೀಗಾಗಿ ವಿಭಾಗೀಯ ಮಟ್ಟದಲ್ಲಿ ರೇರಾ ಕಚೇರಿ ಸ್ಥಾಪಿಸಲಾಗುವುದು ಎಂದು ಹೇಳಿದರು.
ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರಾಧಿಕಾರದ ಅನುಮತಿ ಪಡೆಯದೆ ನಿರ್ಮಾಣ ಮಾಡುವ ಅನಧಿಕೃತ ಬಡಾವಣೆ, ಅಪಾರ್ಟ್ ಮೆಂಟ್ ಗಳ ಬಗ್ಗೆಯೂ ಕ್ರಮ ಕೈಗೊಳ್ಳಬೇಕು. ರೇರಾ ಅನುಮತಿ ಇಲ್ಲದೆ ಒಸಿ ನೀಡುವಂತಿಲ್ಲ, ಈ ಕುರಿತು ನಿಯಮ ಜಾರಿಗೆ ತರಲು ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


