ರಾಜ್ಯ

ಎಸಿಬಿ ರದ್ದುಪಡಿಸಿದ 'ಜನ ಸಾಮಾನ್ಯರ ನ್ಯಾಯಾಧೀಶ' ವೀರಪ್ಪಗೆ ಬೀಳ್ಕೊಡುಗೆ

ಜನ ಸಾಮಾನ್ಯರ ನ್ಯಾಯಮೂರ್ತಿ ಎಂದೇ ಖ್ಯಾತ ಪಡೆದಿದ್ದ ನ್ಯಾಯಮೂರ್ತಿ ಬಿ.ವೀರಪ್ಪ ಅವರು ನಿವೃತ್ತಿಯಾಗಿದ್ದು, ಅವರಿಗೆ ಕರ್ನಾಟಕ ಹೈಕೋರ್ಟ್‌ನ ವಕೀಲರ ಸಂಘ ಬುಧವಾರ ಪ್ರೀತಿಯಿಂದ ಬೀಳ್ಕೊಟ್ಟಿದೆ.

ಎಸಿಬಿ ರದ್ದುಪಡಿಸಿದ 'ಜನ ಸಾಮಾನ್ಯರ ನ್ಯಾಯಾಧೀಶ' ವೀರಪ್ಪಗೆ ಬೀಳ್ಕೊಡುಗೆ
ನ್ಯಾಯಾಧೀಶ' ವೀರಪ್ಪಗೆ ಬೀಳ್ಕೊಡುಗೆ
Published On :

ಬೆಂಗಳೂರು: ಜನ ಸಾಮಾನ್ಯರ ನ್ಯಾಯಮೂರ್ತಿ ಎಂದೇ ಖ್ಯಾತ ಪಡೆದಿದ್ದ ನ್ಯಾಯಮೂರ್ತಿ ಬಿ.ವೀರಪ್ಪ ಅವರು ನಿವೃತ್ತಿಯಾಗಿದ್ದು, ಅವರಿಗೆ ಕರ್ನಾಟಕ ಹೈಕೋರ್ಟ್‌ನ ವಕೀಲರ ಸಂಘ ಬುಧವಾರ ಪ್ರೀತಿಯಿಂದ ಬೀಳ್ಕೊಟ್ಟಿದೆ.

ಬೆಂಗಳೂರು ವಕೀಲ ಸಂಘ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ನ್ಯಾಯಮೂರ್ತಿ ಬಿ. ವೀರಪ್ಪ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು.

ವೀರಪ್ಪ ಅವರು, ರಾಜ್ಯದಲ್ಲಿ ಈ ಹಿಂದೆ ಕಾಂಗ್ರೆಸ್ ಸರ್ಕಾರ ಸ್ಥಾಪಿಸಿದ್ದ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ವನ್ನು ರದ್ದುಪಡಿಸಿ, ಭ್ರಷ್ಟಾಚಾರ ತಡೆ ಕಾಯ್ದೆಯ ಅಧಿಕಾರವನ್ನು ಮತ್ತೆ ಲೋಕಾಯುಕ್ತಕ್ಕೆ ನೀಡಿದ್ದ ಹೈಕೋರ್ಟ್ ಪೀಠದ ನೇತೃತ್ವ ವಹಿಸಿದ್ದರು.

ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಅವರು, ನ್ಯಾಯಾಂಗಕ್ಕೆ ನ್ಯಾಯಮೂರ್ತಿ ವೀರಪ್ಪ ಅವರ ಕೊಡುಗೆಯನ್ನು ಯಾವಾಗಲೂ ಪ್ರೀತಿಯಿಂದ ಸ್ಮರಿಸಲಾಗುವುದು ಎಂದು ಹೇಳಿದರು.

ಕೋಲಾರದ ಶ್ರೀನಿವಾಸಪುರ ತಾಲ್ಲೂಕಿನ ನಾಗದೇನಹಳ್ಳಿ ಗ್ರಾಮದ ನ್ಯಾಯಮೂರ್ತಿ ವೀರಪ್ಪ ಅವರು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ(ಕೆಎಸ್‌ಎಲ್‌ಎಸ್‌ಎ) ಅಧ್ಯಕ್ಷರಾಗಿ ಅತಿ ಹೆಚ್ಚು ವ್ಯಾಜ್ಯಗಳನ್ನು ಇತ್ಯರ್ಥಪಡಿಸುವ ಮೂಲಕ ದೇಶದಲ್ಲೇ ಹೊಸ ದಾಖಲೆ ನಿರ್ಮಿಸಿದ್ದಾರೆ.

ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಆದಾಯ ತಂದ ಸಂಚಾರಿ ನಿಯಮ ಉಲ್ಲಂಘನೆ ದಂಡದ ಮೇಲೆ ಶೇ.50ರಷ್ಟು ರಿಯಾಯಿತಿ ಘೋಷಿಸಿದ ರಾಜ್ಯ ಸರ್ಕಾರ ಕ್ರಮದಲ್ಲಿ ನ್ಯಾಯಮೂರ್ತಿ ವೀರಪ್ಪ ಅವರ ಪಾತ್ರ ಪ್ರಮುಖವಾಗಿತ್ತು. ಅವರು ತಮ್ಮ ಎಂಟು ವರ್ಷ ಮತ್ತು ಐದು ತಿಂಗಳ ಅಧಿಕಾರಾವಧಿಯಲ್ಲಿ ಅನೇಕ ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ.

ಈ ವೇಳೆ ಮಾತನಾಡಿದ ನ್ಯಾಯಮೂರ್ತಿ ವೀರಪ್ಪ ಅವರು, ನಾನು ವಕೀಲನಾಗಿ, ಸರ್ಕಾರಿ ವಕೀಲನಾಗಿ ಮತ್ತು ನ್ಯಾಯಾಧೀಶನಾಗಿ ಮೂರು ದಶಕಗಳ ಕಾಲ ನ್ಯಾಯಾಂಗದಲ್ಲಿ ಸೇವೆ ಸಲ್ಲಿಸಿದ್ದೇನೆ. ಈ ಸೇವೆಯು ನನಗೆ ಅಪಾರ ಸಂತೋಷ ಮತ್ತು ತೃಪ್ತಿಯನ್ನು ನೀಡಿದೆ. ನಾವು ನ್ಯಾಯಾಧೀಶರು ಮತ್ತು ವಕೀಲರು ಭ್ರಷ್ಟಾಚಾರವನ್ನು ತೊಡೆದುಹಾಕಲು ಮತ್ತು ಸಾರ್ವಜನಿಕರಿಂದ ನ್ಯಾಯಾಂಗದ ಮೇಲಿನ ವಿಶ್ವಾಸವನ್ನು ರಕ್ಷಿಸಲು ಪ್ರತಿಜ್ಞೆ ಮಾಡಬೇಕು ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.