ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ವಾಹನ ಸವಾರರ ಮೇಲೆ ದಂಡಾಸ್ತ್ರ: 2 ದಿನದಲ್ಲಿ 490 ಪ್ರಕರಣ ದಾಖಲು
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಅಪಘಾತಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿರುವ ಪೊಲೀಸರು ಶರವೇಗದಲ್ಲಿ ಸಂಚರಿಸುವ ವಾಹನಗಳ ಮೇಲೆ ದಂಡಾಸ್ತ್ರ ಪ್ರಯೋಗ ಮಾಡುತ್ತಿದ್ದು, ಕೇವಲ ಎರಡು ದಿನಗಳಲ್ಲಿ 490 ಪ್ರಕರಣಗಳನ್ನು ದಾಖಲಿಸಿದ್ದಾರೆ.

ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಅಪಘಾತಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿರುವ ಪೊಲೀಸರು ಶರವೇಗದಲ್ಲಿ ಸಂಚರಿಸುವ ವಾಹನಗಳ ಮೇಲೆ ದಂಡಾಸ್ತ್ರ ಪ್ರಯೋಗ ಮಾಡುತ್ತಿದ್ದು, ಕೇವಲ ಎರಡು ದಿನಗಳಲ್ಲಿ 490 ಪ್ರಕರಣಗಳನ್ನು ದಾಖಲಿಸಿದ್ದಾರೆ.
ಎಕ್ಸ್ ಪ್ರೆಸ್ ವೇನಲ್ಲಿ ವಿಶೇಷ ಕಾರ್ಯಾಚರಣೆಗೆ ಇಳಿದಿರುವ ಪೊಲೀಸರು ಮೊದಲ ದಿನವಾದ ಗುರುವಾರ 44 ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಎರಡನೇ ದಿನವಾದ ಶುಕ್ರವಾರ 446 ಪ್ರಕರಣಗಳನ್ನು ದಾಖಲು ಮಾಡಿ ದಂಡ ವಸೂಲಿ ಮಾಡಿದ್ದಾರೆ.
ಇದರಲ್ಲಿ ಓವರ್ ಸ್ಪೀಡ್ 174 , ಲೇನ್ ಡಿಸಿಪ್ಲೀನ್ ಉಲ್ಲಂಘನೆ ಮಾಡಿದ್ದಕ್ಕಾಗಿ 137, ಸೀಟ್ ಬೆಲ್ಟ್ ಧರಿಸದ ಕಾರಣಕ್ಕೆ 81, ಹೆಲ್ಮೆಟ್ ಧರಿಸದ ಬೈಕ್ ಧರಿಸದ ಕಾರಣ 47 ಪ್ರಕರಣ ಹಾಗೂ ಇತರೆ 51 ಪ್ರಕರಣ ಸೇರಿದಂತೆ ಒಟ್ಟಾರೆ 490 ಪ್ರಕರಣಗಳು ಸೇರಿವೆ.
ರಾಮನಗರ ಪೊಲೀಸರು ರೇಡಾರ್ ಗನ್‌ಗಳೊಂದಿಗೆ ಹೆದ್ದಾರಿಯಲ್ಲಿ ವಾಹನಗಳ ವೇಗ ತಪಾಸಣೆಯಲ್ಲಿ ತೊಡಗಿದ್ದು, ಅತಿವೇಗ ಮತ್ತು ಅಜಾಗರೂಕತೆಯಿಂದ ಅಡ್ಡಾದಿಡ್ಡಿಯಾಗಿ ವಾಹನ ಚಾಲನೆ ಮಾಡುವವರು, ಸೀಟ್ ಬೆಲ್ಟ್ ಧರಿಸದಿರುವುದು ಸೇರಿದಂತೆ ಸುರಕ್ಷತಾ ಕ್ರಮಗಳ ಬಗ್ಗೆ ನಿಗಾ ವಹಿಸಿದ್ದಾರೆ. ಅನುಮತಿಸುವ ಮಿತಿಗಿಂತ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ.
ಕಳೆದ ಮಾರ್ಚ್‌ನಲ್ಲಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಲೋಕಾರ್ಪಣೆಗೊಂಡ ನಂತರ 243 ಅಪಘಾತ ಪ್ರಕರಣಗಳು ಸಂಭವಿಸಿವೆ. ವರದಿಗಳ ಪ್ರಕಾರ, ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ 58 ಮಂದಿ, ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ 64 ಮಂದಿ ಸೇರಿ ಒಟ್ಟು 122 ಜನರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿತ್ತು.
ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಳವಾದ ಹಿನ್ನೆಲೆಯಲ್ಲಿ ಸಂಚಾರ ಹಾಗೂ ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅಪಘಾತ ಸ್ಥಳಗಳನ್ನು ಪರಿಶೀಲನೆ ನಡೆಸಿದ್ದರು. ಆನಂತರ ಮೇಜರ್ ಸರ್ಜರಿ ಕೈಗೊಳ್ಳಲಾಗಿದ್ದು, ಎಕ್ಸ್ ಪ್ರೆಸ್ ವೇನಲ್ಲಿ ವಾಹನಗಳ ವೇಗ ನಿಯಂತ್ರಣಕ್ಕೆ ರೇಡಾರ್ ಗನ್ ಬಳಕೆ ಮಾಡುವುದಾಗಿ ಹೇಳಿದ್ದರು.
ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಗಣಂಗೂರು ಟೋಲ್ ನಲ್ಲಿ ಶುಲ್ಕ ಸಂಗ್ರಹ ಆರಂಭ: ಸ್ಥಳೀಯರು, ಕನ್ನಡ ಪರ ಸಂಘಟನೆಗಳ ವಿರೋಧ
ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ 100 ಕಿ.ಮೀ.ಗರಿಷ್ಠ ವೇಗ ಮಿತಿಯನ್ನು ನಿಗದಿಪಡಿಸಲಾಗಿತ್ತು. ಆದರೆ, ವಾಹನ ಚಾಲಕರು 120ರಿಂದ 160 ಕಿಮೀ ವೇಗದವರೆಗೆ ಚಾಲನೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಮನಗರ ವ್ಯಾಪ್ತಿಯ ಹೆದ್ದಾರಿಯಲ್ಲಿ ಪೊಲೀಸರು ಸ್ಪೀಡ್ ರೇಡಾರ್ ಗನ್ ಮೂಲಕ ಕಾರ್ಯಾಚರಣೆಗೆ ಇಳಿದಿದ್ದಾರೆ.
ಈ ರೇಡಾರ್ ಗನ್‌ನಲ್ಲಿ ನಿಗದಿತ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಸಂಚರಿಸುವ ವಾಹನಗಳ ವಿವರವನ್ನು ಚಿತ್ರ ಸಮೇತ ಕ್ಯಾಮರಾದಲ್ಲಿ ಸೆರೆಯಾಗಲಿದೆ. ಇದರ ಆಧಾರದ ಮೇಲೆ ಪೊಲೀಸರು ಈಗಾಗಲೇ ಹೆದ್ದಾರಿಯಲ್ಲಿ ಅಳವಡಿಸಿರುವ ಬ್ಯಾರಿಕೇಡ್ ಗಳ ಸಹಾಯದಿಂದ ಅಂತಹ ವಾಹನವನ್ನು ತಡೆದು ದಂಡ ವಿಧಿಸುವ ಕೆಲಸ ಮಾಡಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


