ರಾಜ್ಯ

'ಪಾಕಿಸ್ತಾನ್‌ ಜಿಂದಾಬಾದ್‌' ಪೋಸ್ಟ್‌: ಆರೋಪಿಯ ವಿರುದ್ಧದ ಪ್ರಕರಣ ರದ್ದುಪಡಿಸಿ, ಹೊಸದಾಗಿ ತನಿಖೆಗೆ ಆದೇಶಿಸಿದ ಹೈಕೋರ್ಟ್‌

ಫೇಸ್‌ಬುಕ್‌'ನಲ್ಲಿ “ಹರ್ ದಿಲ್ ಕಾ ಆವಾಜ್ ಪಾಕಿಸ್ತಾನ ಜಿಂದಾಬಾದ್” ಎಂದು ಹೇಳುವ ಸಂದೇಶವನ್ನು ಪೋಸ್ಟ್ ಮಾಡಿದ್ದ ರಾಯಚೂರಿನ ವ್ಯಕ್ತಿಯ ವಿರುದ್ಧದ ಪ್ರಕರಣವನ್ನು ಹೈಕೋರ್ಟ್‌ನ ಕಲಬುರಗಿ ಪೀಠವು ರದ್ದುಗೊಳಿಸಿದೆ.

'ಪಾಕಿಸ್ತಾನ್‌ ಜಿಂದಾಬಾದ್‌' ಪೋಸ್ಟ್‌: ಆರೋಪಿಯ ವಿರುದ್ಧದ ಪ್ರಕರಣ ರದ್ದುಪಡಿಸಿ, ಹೊಸದಾಗಿ ತನಿಖೆಗೆ ಆದೇಶಿಸಿದ ಹೈಕೋರ್ಟ್‌
ಸಂಗ್ರಹ ಚಿತ್ರ
Published On :

ಬೆಂಗಳೂರು: ಫೇಸ್‌ಬುಕ್‌'ನಲ್ಲಿ “ಹರ್ ದಿಲ್ ಕಾ ಆವಾಜ್ ಪಾಕಿಸ್ತಾನ ಜಿಂದಾಬಾದ್” ಎಂದು ಹೇಳುವ ಸಂದೇಶವನ್ನು ಪೋಸ್ಟ್ ಮಾಡಿದ್ದ ರಾಯಚೂರಿನ ವ್ಯಕ್ತಿಯ ವಿರುದ್ಧದ ಪ್ರಕರಣವನ್ನು ಹೈಕೋರ್ಟ್‌ ರದ್ದುಗೊಳಿಸಿದೆ.

ಮಾನ್ವಿಯ ಕೆ ಎಂ ಭಾಷಾ ತನ್ನ ವಿರುದ್ಧದ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ.

ಭಾರತೀಯ ದಂಡ ಸಂಹಿತೆ ಸೆಕ್ಷನ್ 505ರಡಿ ಸಂಜ್ಞೇಯ ತೆಗೆದುಕೊಂಡು ವಿಚಾರಣೆ ಮುಂದುವರಿಸಿದ್ದ ಮತ್ತು ಆರೋಪಪಟ್ಟಿ ಸಲ್ಲಿಸಿದ್ದ ಪ್ರಕ್ರಿಯೆಯನ್ನು ನ್ಯಾಯಾಲಯವು ರದ್ದುಗೊಳಿಸಿದೆ.

“ಐಪಿಸಿ ಸೆಕ್ಷನ್ 505ರಡಿ ದಾಖಲಾಗಿದ್ದ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ಸಂಜ್ಞೇಯ ತೆಗೆದುಕೊಳ್ಳುವ ಮೊದಲು ಅಪರಾಧ ದಂಡ ಸಂಹಿತೆ ಸೆಕ್ಷನ್ 196(1)(ಎ) ಅಡಿಯಲ್ಲಿ ಪೂರ್ವಾನುಮತಿ ಪಡೆಯಬೇಕಿತ್ತು. ಆದರೆ, ಅದನ್ನು ಮಾಡಲಾಗಿಲ್ಲ. ಹೀಗಾಗಿ, ಪ್ರಕರಣ ರದ್ದುಗೊಳಿಸಲಾಗುತ್ತಿದೆ” ಎಂದು ನ್ಯಾಯಾಲಯ ಹೇಳಿದೆ.

ನಿಯಮಾವಳಿ ಪ್ರಕಾರ ಅಂತಹ ಪೂರ್ವಾನುಮತಿ ಪಡೆಯುವ ಮುನ್ನ ಸಿಆರ್‌ಪಿಸಿ ಸೆಕ್ಷನ್ 196(3) ಅಡಿಯಲ್ಲಿ ಸೂಚಿಸಲಾಗಿರುವ ಸಕ್ಷಮ ಪ್ರಾಧಿಕಾರದ ವ್ಯಕ್ತಿ ಸೆಕ್ಷನ್ 505ರಡಿ ಹೊರಿಸಿರುವ ಆರೋಪಗಳ ಬಗ್ಗೆ ಪ್ರಾಥಮಿಕ ತನಿಖೆಯನ್ನು ನಡೆಸಬೇಕಿತ್ತು. ಇದನ್ನೂ ಮಾಡಿಲ್ಲ ಎಂದಿರುವ ಪೀಠವು, ತನಿಖಾ ಸಂಸ್ಥೆ ಕಾನೂನು ಪ್ರಕಾರ ಆರೋಪದ ಬಗ್ಗೆ ಸಿಆರ್‌ಪಿಸಿ ಸೆಕ್ಷನ್ 196 ಅನ್ವಯ ಹೊಸದಾಗಿ ತನಿಖೆ ನಡೆಸಬಹುದು. ಅದಕ್ಕೆ ನ್ಯಾಯಾಲಯದ ಯಾವುದೇ ನಿರ್ಬಂಧವಿಲ್ಲ ಎಂದು ಆದೇಶಿಸಿದೆ.

ಹೊಸ ತನಿಖೆಯಲ್ಲಿ ಆರೋಪಗಳನ್ನು ಪುಷ್ಟೀಕರಿಸುವ ಸಾಕಷ್ಟು ದಾಖಲೆಗಳು ದೊರತೆರೆ, ತನಿಖಾ ಸಂಸ್ಥೆ ಕಾನೂನು ಪ್ರಕಾರ ಅಗತ್ಯ ಆರೋಪ ಪಟ್ಟಿ ಸಲ್ಲಿಸಲು ಮತ್ತು ಕಾನೂನು ಪ್ರಕ್ರಿಯೆ ಮುಂದುವರಿಸಲು ಎಲ್ಲ ರೀತಿಯ ಸ್ವಾತಂತ್ರ್ಯ ಹೊಂದಿದೆ ಎಂದೂ ಪೀಠ ತಿಳಿಸಿದೆ.

ಅರ್ಜಿದಾರರ ಕೆ ಎಂ ಭಾಷಾ ಅಕ್ಟೋಬರ್ 2020ರಲ್ಲಿ ತಮ್ಮ ಫೇಸ್‌ಬುಕ್ ಪುಟದಲ್ಲಿ ಪಾಕಿಸ್ತಾನದ ಯೋಧನೊಬ್ಬ ಮಹಿಳೆಯೊಂದಿಗೆ ಮಾತನಾಡುತ್ತಾ “ಹರ್ ದಿಲ್ ಕಾ ಆವಾಜ್ ಪಾಕಿಸ್ತಾನ ಜಿಂದಾಬಾದ್” ಎಂದು ಹೇಳುವ ದೃಶ್ಯಗಳನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಜೊತೆಗೆ ಅದನ್ನು ಇತರೆ ಗೆಳೆಯರೊಂದಿಗೆ ಹಂಚಿಕೆ ಮಾಡಿದ್ದರು.

ಆ ಕುರಿತು ಮಾಹಿತಿ ಸ್ವೀಕರಿಸಿದ ಮಾನ್ವಿ ಪೊಲೀಸ್ ಇನ್ಸ್‌ಪೆಕ್ಟರ್ ಅವರು ತಹಸೀಲ್ದಾರ್‌ ಕಚೇರಿಗೆ ಹೋಗಿ, ಅಲ್ಲಿದ್ದ ವ್ಯಕ್ತಿಯನ್ನು ವಿಚಾರಣೆ ನಡೆಸಿದ್ದರು. ಆತ ತನ್ನ ಹೆಸರು ಭಾಷಾ ಎಂದು ಹೇಳಿ ಫೇಸ್‌ಬುಕ್‌ನಲ್ಲಿ ಪಾಕಿಸ್ತಾನ ಜಿಂದಾಬಾದ್ ಪೋಸ್ಟ್ ಹಂಚಿಕೊಂಡಿರುವುದನ್ನು ಒಪ್ಪಿಕೊಂಡಿದ್ದರು.

ನಂತರ ಪೊಲೀಸರು, ಇಂತಹ ಪೋಸ್ಟ್‌ ಹಾಕುವ ಮೂಲಕ ದೇಶದ ಯೋಧರಿಗೆ ಅಗೌರವ ತೋರಲಾಗಿದೆ ಎಂದು ಪ್ರಕರಣ ದಾಖಲಿಸಿದ್ದರು. ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆಗೆ ಧಕ್ಕೆ ಆಗುತ್ತದೆ ಎಂದು ಹೇಳಲಾಗಿತ್ತು. ಪೊಲೀಸರು ತನಿಖೆ ನಂತರ ಆರೋಪ ಪಟ್ಟಿ ಸಲ್ಲಿಸಿದ್ದರು. ಇದನ್ನು ನ್ಯಾಯಾಲಯ ರದ್ದುಪಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.