ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಮಹಿಳೆಯ ಸೀಟಿನ ಮೇಲೆ ಕುಡಿದ ಮತ್ತಿನಲ್ಲಿ ಮೂತ್ರ ವಿಸರ್ಜನೆ; ದೂರು ದಾಖಲಿಸಲು ಚಿಂತನೆ
ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಸುವಾಗ ಕುಡಿದ ಮತ್ತಿನಲ್ಲಿ ಮಹಿಳಾ ಸಹ ಪ್ರಯಾಣಿಕರ ಸೀಟಿನ ಮೇಲೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿಯೊಬ್ಬನ ವಿರುದ್ಧ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ದೂರು ದಾಖಲಿಸಲು ಚಿಂತನೆ ನಡೆಸಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ.

ಬೆಂಗಳೂರು: ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಸುವಾಗ ಕುಡಿದ ಮತ್ತಿನಲ್ಲಿ ಮಹಿಳಾ ಸಹ ಪ್ರಯಾಣಿಕರ ಸೀಟಿನ ಮೇಲೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿಯೊಬ್ಬನ ವಿರುದ್ಧ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ದೂರು ದಾಖಲಿಸಲು ಚಿಂತನೆ ನಡೆಸಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ.
ಫೆಬ್ರುವರಿ 21 ರಂದು ವಿಜಯಪುರದಿಂದ ಮಂಗಳೂರಿಗೆ ತೆರಳುತ್ತಿದ್ದ ನಾನ್ ಸ್ಲೀಪರ್ ಬಸ್‌ನಲ್ಲಿ ಈ ಘಟನೆ ನಡೆದಿತ್ತು. ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ 32 ವರ್ಷದ ವ್ಯಕ್ತಿಯೊಬ್ಬರು ಕೃತ್ಯ ಎಸಗಿದ್ದರು.
ಕೆಎಸ್‌ಆರ್‌ಟಿಸಿ ಗುರುವಾರ ನೀಡಿರುವ ಪ್ರಕಟಣೆಯಲ್ಲಿ, 'ಬಸ್‌ನಲ್ಲಿ ಮೂತ್ರ ವಿಸರ್ಜನೆ ಮಾಡಿದ ಪ್ರಯಾಣಿಕನ ಬಗ್ಗೆ ಮಾಹಿತಿ ಪಡೆಯಲು ಚಾಲಕ ಮತ್ತು ಕಂಡಕ್ಟರ್ ಪ್ರಯತ್ನಿಸಿದ್ದಾರೆ. ಆದರೆ, ಆರೋಪಿ ಕ್ಷಮೆಯಾಚಿಸಿದ್ದು, ತನ್ನ ವೈಯಕ್ತಿಕ ವಿವರಗಳನ್ನು ಬಹಿರಂಗಪಡಿಸಿಲ್ಲ. ಮಹಿಳಾ ಪ್ರಯಾಣಿಕರು ದೂರು ದಾಖಲಿಸಲು ನಿರಾಕರಿಸಿದ್ದರಿಂದ ಬಸ್ ನಿಗದಿತ ಪ್ರಯಾಣ ಮುಂದುವರಿಸಿದೆ' ಎಂದು ತಿಳಿಸಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಹುಬ್ಬಳ್ಳಿ ನಗರ ಸಮೀಪದ ಕಿರೇಸೂರಿನಲ್ಲಿ ರಾತ್ರಿ ಊಟಕ್ಕೆ ಬಸ್ ನಿಲ್ಲಿಸಿದಾಗ 20 ವರ್ಷದ ಮಹಿಳೆಯ ಸೀಟಿನ ಮೇಲೆ ವ್ಯಕ್ತಿ ಮೂತ್ರ ವಿಸರ್ಜನೆ ಮಾಡಿದ್ದಾರೆ. ಯುವತಿ ಆಹಾರ ಸೇವಿಸಲು ಇಳಿದು ಹಿಂದಿರುಗಿದಾಗ ಆರೋಪಿ ತನ್ನ ಸೀಟಿನಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದುದನ್ನು ಕಂಡು ಕೂಗಿದ್ದಾರೆ. ಘಟನೆ ನಡೆದಾಗ ಬಸ್ ಖಾಲಿಯಾಗಿತ್ತು, ಗದ್ದಲ ಕೇಳಿ ಜನರು ಧಾವಿಸಿದರು ಎಂದು ಮೂಲಗಳು ತಿಳಿಸಿವೆ.
ಘಟನೆ ಕುರಿತು ಕೆಎಸ್‌ಆರ್‌ಟಿಸಿ ಅಧಿಕೃತ ಸ್ಪಷ್ಟನೆ ನೀಡಿದ್ದು, ದೂರು ಸ್ವೀಕರಿಸಿದ ಬಳಿಕ ಮಂಗಳೂರು ಡಿಪೋ 2, ಬಸ್ ನಂ. ಕೆಎ 19 ಎಫ್ 3554 ಚಾಲಕ ಸಂತೋಷ ಮಠಪತಿ ಹಾಗೂ ವಿಜಯಪುರ-ಮಂಗಳೂರು ಬಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಂಡಕ್ಟರ್ ಉಮೇಶ್ ಕರಡಿ ಅವರ ಹೇಳಿಕೆಗಳನ್ನು ಪಡೆಯಲಾಗಿದೆ. ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್ಸಿನಲ್ಲಿ ಬೆರ್ತ್ ಸಂಖ್ಯೆ 3 ಮತ್ತು ಬರ್ತ್ ಸಂಖ್ಯೆ 29 ರಲ್ಲಿ ಕಾಯ್ದಿರಿಸದ ಪ್ರಯಾಣಿಕರಿದ್ದರು ಎಂದು ಕಂಡುಬಂದಿದೆ ಎಂದಿದೆ.
ಬಸ್ಸಿನ ಸಿಬ್ಬಂದಿ ಕಿರೇಸೂರು ಹೋಟೆಲ್‌ನಲ್ಲಿ ರಾತ್ರಿ 10.30ಕ್ಕೆ ನಿಗದಿತ ಉಪಹಾರ ಮತ್ತು ಪ್ರಕೃತಿ ಕರೆಗೆ ವಿರಾಮ ನೀಡಿದರು ಮತ್ತು 15-20 ನಿಮಿಷಗಳ ವಿರಾಮದ ಬಗ್ಗೆ ಪ್ರಯಾಣಿಕರಿಗೆ ತಿಳಿಸಿದರು. ಬಿಡುವಿನ ವೇಳೆಯಲ್ಲಿ ಬರ್ತ್ ಸಂಖ್ಯೆ 29 ರಲ್ಲಿ ಪ್ರಯಾಣಿಸುತ್ತಿದ್ದ ಕಾಯ್ದಿರಿಸದ ಪ್ರಯಾಣಿಕರೊಬ್ಬರು ಮದ್ಯದ ಅಮಲಿನಲ್ಲಿ ಬಸ್‌ನಿಂದ ಹೊರಬರುವ ಬದಲು ಬರ್ತ್ ಸಂಖ್ಯೆ 3 ರ ಬಳಿ ಹೋಗಿ ಸೀಟ್ ನಂಬರ್ 3 ರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವುದು ಕಂಡುಬಂದಿದೆ.
ವಿರಾಮದಿಂದ ಬಸ್ ಹತ್ತುವ ಮಹಿಳಾ ಪ್ರಯಾಣಿಕರು, ತಮ್ಮ ಸೀಟಿನಲ್ಲಿ ಆತ ಮೂತ್ರ ವಿಸರ್ಜಿಸುತ್ತಿರುವುದನ್ನು ನೋಡಿದ್ದಾರೆ. ಬಳಿಕ ಚಾಲಕ, ಕಂಡಕ್ಟರ್ ಮತ್ತು ಇತರ ಪ್ರಯಾಣಿಕರು ಮದ್ಯದ ಅಮಲಿನಲ್ಲಿದ್ದ ಪ್ರಯಾಣಿಕನನ್ನು ಬಸ್‌ನಿಂದ ಇಳಿಸಿ ಹೋಟೆಲ್ ಬಳಿ ಬಿಟ್ಟರು.
ಬರ್ತ್ ಸಂಖ್ಯೆ 3 ಅನ್ನು ಡ್ರೈವರ್ ಮತ್ತು ಕಂಡಕ್ಟರ್ ನೀರಿನಿಂದ ತೊಳೆದು ಬಟ್ಟೆಯಿಂದ ಒರೆಸಿದರು ಮತ್ತು ಮಹಿಳಾ ಪ್ರಯಾಣಿಕರಿಗೆ ಬರ್ತ್ ಸಂಖ್ಯೆ 9 ರಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಯಿತು ಎಂದಿರುವ ಕೆಎಸ್ಆರ್‌ಟಿಸಿ, ಬಸ್ಸಿನಲ್ಲಿದ್ದ ಪ್ರಯಾಣಿಕರೊಬ್ಬರು ಯುವತಿ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂಬ ಆರೋಪ ಸರಿಯಲ್ಲ ಎಂದು ಸ್ಪಷ್ಟಪಡಿಸಿದೆ.
ಘಟನೆ ನಂತರ ಬಸ್ ಸಿಬ್ಬಂದಿ ಮಹಿಳಾ ಪ್ರಯಾಣಿಕರಿಗೆ ಭದ್ರತೆ ಮತ್ತು ಸುರಕ್ಷತೆಯ ಭರವಸೆ ನೀಡಿದರು ಮತ್ತು ಸಹಾಯ ಮಾಡಿದರು ಎಂದು ಮೂಲಗಳು ತಿಳಿಸಿವೆ. ಘಟನೆಯ ನಂತರ ಮಹಿಳಾ ಪ್ರಯಾಣಿಕರು ಆಘಾತಕ್ಕೊಳಗಾಗಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಆರೋಪಿಯು, ಸ್ಥಿಮಿತವನ್ನು ಕಳೆದುಕೊಂಡು ಸಹ ಪ್ರಯಾಣಿಕರು ಹಾಗೂ ಬಸ್ಸಿನ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದ. ಆದರೆ, ಸಂತ್ರಸ್ತ ಮಹಿಳೆ ಈ ಬಗ್ಗೆ ಪೊಲೀಸ್ ದೂರು ನೀಡಲು ನಿರಾಕರಿಸಿದ್ದಾರೆ. ಸಂತ್ರಸ್ತ ಮಹಿಳೆ ವಿಜಯಪುರದಿಂದ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದ್ದರು ಎಂದು ಮೂಲಗಳು ತಿಳಿಸಿವೆ.
ಆರೋಪಿಯು ವಿಜಯಪುರದಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದು, ಆತ ಮೆಕ್ಯಾನಿಕಲ್ ಇಂಜಿನಿಯರ್ ಎಂದು ಮೂಲಗಳು ತಿಳಿಸಿವೆ.
ಮಹಿಳಾ ಪ್ರಯಾಣಿಕರಿಗೆ ಸಂದೇಶ ನೀಡಲು ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಲು ಅಧಿಕಾರಿಗಳು ಚಿಂತಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


