ಹೊಸ ವರ್ಷಾಚರಣೆ: ಅಹಿತಕರ ಘಟನೆ ನಡೆಯದಂತೆ ನಗರದಲ್ಲಿ ಬಿಗಿ ಭದ್ರತೆ ನಿಯೋಜನೆಗೆ ಸೂಚನೆ
ಹೊಸ ವರ್ಷಾಚರಣೆಗೆ ದಿನಗಣನೆ ಶುರುವಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು, ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸುವಂತೆ ಅಧಿಕಾರಿಗಳಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಸೂಚನೆ ನೀಡಿದ್ದಾರೆ.

ಬೆಂಗಳೂರು: ಹೊಸ ವರ್ಷಾಚರಣೆಗೆ ದಿನಗಣನೆ ಶುರುವಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು, ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸುವಂತೆ ಅಧಿಕಾರಿಗಳಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಸೂಚನೆ ನೀಡಿದ್ದಾರೆ.
ಶುಕ್ರವಾರ ವಿಧಾನಸೌಧದ ಮೂರನೇ ಮಹಡಿಯಲ್ಲಿನ ಸಮ್ಮೇಳನ ಸಭಾಂಗಣದಲ್ಲಿ ಪೊಲೀಸ್, ಆರೋಗ್ಯ, ಅಬಕಾರಿ, ಬಿಬಿಎಂಪಿ, ಬಿಎಂಆರ್ಸಿಎಲ್, ಬಿಎಂಟಿಸಿಯ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಬೆಂಗಳೂರಿನ ಜನದಟ್ಟಣೆ ಪ್ರದೇಶಗಳಾದ ಎಂ.ಜಿ.ರೋಡ್, ಬ್ರಿಗೇಡ್ ರೋಡ್, ಎಲೆಕ್ಟ್ರಾನಿಕ್ ಸಿಟಿ, ಇಂದಿರಾನಗರ ಹಾಗೂ ಶಾಪಿಂಗ್ ಮಾಲ್, ಸ್ಟಾರ್ ಹೋಟೆಲ್ ಗಳಲ್ಲಿ ಹೊಸ ವರ್ಷ ಆಚರಿಸಲು ಹೆಚ್ಚಿನ ಜನಸಂಖ್ಯೆ ಸೇರುವ ಸಾಧ್ಯತೆ ಇದೆ. ಹೀಗಾಗಿ ಎಲ್ಲಾ ರೀತಿಯ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಬೇಕು. ರಾಜ್ಯದ ಪ್ರಮುಖ ನಗರಗಳಲ್ಲಿಯೂ ಮುನ್ನೆಚ್ಚರಿಕೆ ವಹಿಸಬೇಕೆಂದು ಸೂಚನೆ ನೀಡಿದರು.
ಎನ್ಐಎ ಅಧಿಕಾರಿಗಳು ಕಳೆದೊಂದು ತಿಂಗಳಿನಿಂದ ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ದಾಳಿ ನಡೆಸಿ, ಕೆಲ ಶಂಕಿತರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಕ್ರಿಸ್ ಮಸ್ ಹಬ್ಬ, ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಹೊರಗಡೆಯಿಂದ ನಗರಕ್ಕೆ ಬರುವರ ಚಲನವಲನಗಳ ಬಗ್ಗೆ ಸೂಕ್ತ ನಿಗಾವಹಿಸಬೇಕು.
ಹೊಸ ವರ್ಷ ಆಚರಿಸಲು ಜನ ಸೇರುವ ಪ್ರಮುಖ ಸ್ಥಳಗಳನ್ನು ಗುರುತಿಸಿ, ಪೊಲೀಸ್ ಅಧಿಕಾರಿಗಳು ಪರಿಶೀಲಿಸಬೇಕು. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ಬಂದೋಬಸ್ತ್ ಗೆ ನಿಯೋಜಿಸಬೇಕು. ಎಸ್.ಡಿ.ಆರ್.ಫ್ ತಂಡಗಳು ಇರಬೇಕು. ಎಂ.ಜಿ.ರಸ್ತೆ, ಬ್ರಿಗೇಡ್ ರೋಡ್ ಗಳಲ್ಲಿ ಬಿಬಿಎಂಪಿಯವರು ತಾತ್ಕಲಿಕ ಆರೋಗ್ಯ ಕೇಂದ್ರಗಳನ್ನು ತೆರೆಯಬೇಕು. ನಗರದ ಎಲ್ಲ ವಿಭಾಗದ ಡಿಸಿಪಿಗಳು ಸ್ಥಳೀಯ ಆಸ್ಪತ್ರೆಗಳಿಗೆ ಭೇಟಿ ನೀಡಿ, ಡಿ.31ರ ತಡರಾತ್ರಿ ತುರ್ತು ಚಿಕಿತ್ಸೆಗಾಗಿ ಅಲರ್ಟ್ ಇರುವಂತೆ ತಿಳಿಸಬೇಕು ಎಂದು ಸೂಚಿಸಿದರು.
ಎಂಜಿ.ರಸ್ತೆ, ಬ್ರಿಗೇಡ್ ರೋಡ್, ಇಂದಿರಾನಗರ, ಎಲೆಕ್ಟ್ರಾನಿಕ್ ಸಿಟಿಗಳಲ್ಲಿನ ರಸ್ತೆಗಳಲ್ಲಿ ಪಬ್ ಮತ್ತು ಬಾರ್, ಶಾಪಿಂಗ್ ಮಾಲ್, ಸ್ಟಾರ್ ಹೋಟೆಲ್ ಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಿದ್ದಾರೆ. ಇದರಿಂದ ಅವಘಡಗಳಾಗುವ ಸಾಧ್ಯತೆ ಇರುತ್ತದೆ. ಅಗ್ನಿಶಾಮಕ ದಳ ಸಿಬ್ಬಂದಿಗಳು ಅಲರ್ಟ್ ಆಗಿರಬೇಕು. ಪಬ್ ಮತ್ತು ಬಾರ್ ಗಳು ಸುರಕ್ಷತಾ ಕ್ರಮಕೈಗೊಂಡಿವೆಯೇ ಎಂಬುದನ್ನು ಪರಿಶೀಲಿಸಿ. ಮೇಲ್ಚಾವಣಿಗಳಲ್ಲಿ ಕಿಚನ್ ತೆರೆಯಲು ಅವಕಾಶ ನೀಡಬೇಡಿ. ಮದ್ಯದ ಅಂಗಡಿಗಳು ಎಂದಿನಂತೆಯೇ ತೆರೆದಿರಲಿ. ಹೆಚ್ಚಿನ ಸಮಯಾವಕಾಶ ನೀಡುವುದು ಬೇಡ ಎಂದು ತಿಳಿಸಿದರು.
ಹೊಸ ವರ್ಷಾಚರಣೆಗಾಗಿ ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ತಾತ್ಕಲಿಕ ‘ಪೊಲೀಸ್ ಹೆಲ್ಪ್ ಡೆಸ್ಕ್’ ತೆರೆಯಬೇಕು. ಈ ಬಗ್ಗೆ ಜನರಿಗೆ ಅನೌನ್ಸ್ ಮೆಂಟ್ ಮಾಡಬೇಕು. ಮೆಟ್ರೋ ರೈಲುಗಳು ಹೆಚ್ಚಿನ ಅವಧಿಯವರೆಗೆ ಸಂಚರಿಸಲಿ. ಅಲ್ಲದೆ, ಬಿಎಂಟಿಸಿ ವತಿಯಿಂದ ಪ್ರತ್ಯೇಕ ಬಸ್ ಗಳನ್ನು ಬಿಡಬೇಕು. ಖಾಸಗಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


