ದೇವರನ್ನು ಮುಂದಿಟ್ಟು ಜಾತಿ-ಧರ್ಮದ ಸಂಘರ್ಷ ಸೃಷ್ಟಿಸುವುದು ದೇವರಿಗೆ ಮಾಡುವ ಅವಮಾನ: ಸಿಎಂ ಸಿದ್ದರಾಮಯ್ಯ
ದೇವರನ್ನು ಮುಂದಿಟ್ಟು ಜಾತಿ-ಧರ್ಮದ ಸಂಘರ್ಷ ಸೃಷ್ಟಿಸುವುದು ದೇವರಿಗೆ ಮಾಡುವ ಅವಮಾನ. ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು: ದೇವರನ್ನು ಮುಂದಿಟ್ಟು ಜಾತಿ-ಧರ್ಮದ ಸಂಘರ್ಷ ಸೃಷ್ಟಿಸುವುದು ದೇವರಿಗೆ ಮಾಡುವ ಅವಮಾನ. ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ರವೀಂದ್ರ ಕಲಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಜಾತಿ, ಧರ್ಮಗಳ ನಡುವೆ ಸಂಘರ್ಷ ಸೃಷ್ಟಿಸುವ ಶಕ್ತಿಗಳು ನಾರಾಯಣಗುರುಗಳ ಅವಧಿಯಲ್ಲೂ ಇದ್ದವು. ಈಗಲೂ ಇವೆ. ನಾರಾಯಣಗುರುಗಳು ಸಂಘರ್ಷಕ್ಕೆ ಕಾರಣ ಆಗದಂತೆ ಸಮಾಜದಲ್ಲಿ ವ್ಯಾಪಕ ಬದಲಾವಣೆ ತಂದರು ಎಂದು ಸ್ಮರಿಸಿದರು.
ದೇವರ ದೃಷ್ಟಿಯಲ್ಲಿ ಎಲ್ಲರೂ ಒಂದೆ. ಬಟ್ಟೆ ಬಿಚ್ಚಿ ದೇವಾಲಯಕ್ಕೆ ಬನ್ನಿ ಎನ್ನುವುದು, ದೇವರನ್ನು ಮುಂದಿಟ್ಟುಕೊಂಡು ತಾರತಮ್ಯ ಮಾಡುವುದು, ಜಾತಿ, ಧರ್ಮದ ನಡುವೆ ಸಂಘರ್ಷ ಸೃಷ್ಟಿಸುವ ವಿಕೃತಿಯನ್ನು ಈಗಲೂ ಮಾಡಲಾಗುತ್ತಿದೆ. ಈ ತಾರತಮ್ಯಕ್ಕೆ ನಾರಾಯಣಗುರುಗಳು ಭಿನ್ನವಾದ ಆಚರಣೆ ಕಂಡುಕೊಂಡರು. ನಿಮಗೆ ಪ್ರವೇಶವಿಲ್ಲದ ದೇವಸ್ಥಾನಗಳಿಗೆ ಹೋಗಲೇಬೇಡಿ. ನೀವೇ ನಿಮ್ಮ ದೇವರುಗಳಿಗೆ ದೇವಸ್ಥಾನ ಕಟ್ಟಿ ಪೂಜೆ ಮಾಡಿ ಎಂದಿದ್ದರು ಎಂದು ಸಿಎಂ ತಿಳಿಸಿದರು.
ನಾರಾಯಣಗುರುಗಳು ಸಮಾಜ ಸುಧಾರಣೆಯ ಕ್ರಾಂತಿಕಾರಕ ಧಾರ್ಮಿಕ ಚಳವಳಿ ಪರಿಣಾಮವಾಗಿ ಕೇರಳದಲ್ಲಿ 60 ದೇವಸ್ಥಾನ ನಿರ್ಮಿಸಿದರು. ಉಳಿದ ದೇವಸ್ಥಾನಗಳಿಗೆ ಪ್ರವೇಶ ಇಲ್ಲದ ಶೂದ್ರ ಮತ್ತು ದಲಿತ ಸಮುದಾಯವನ್ನು ತಾವೇ ಕಟ್ಟಿಸಿದ ದೇವಸ್ಥಾನಗಳಿಗೆ ಪ್ರವೇಶಿಸುವಂತೆ ಕ್ರಾಂತಿ ಮಾಡಿದರು. ವಿದ್ಯೆ ಕಲಿತು ಸ್ವತಂತ್ರರಾಗಿ, ಸಂಘಟಿತರಾಗಿ ಬಲಯುತರಾಗಿ ಎನ್ನುವುದು ನಾರಾಯಣಗುರುಗಳು ಶೂದ್ರ-ದಲಿತ ಸಮುದಾಯಕ್ಕೆ ನೀಡಿದ ಅತ್ಯುನ್ನತ ಧ್ಯೇಯ ಎಂದರು.
ನಾರಾಯಣಗುರುಗಳು ಒಂದು ಜಾತಿ, ಧರ್ಮಕ್ಕೆ ಸೇರಿದವರಲ್ಲ. ಅವರು ಜಾತಿ-ಧರ್ಮದ ತಾರತಮ್ಯಗಳನ್ನು ಮೀರಿದ ವಿಶ್ವಮಾನವ. ಹೀಗಾಗಿ ವಿಶ್ವ ಮಾನವ ನಾರಾಯಣಗುರುಗಳ ಜಯಂತಿಯನ್ನು ಸರ್ಕಾರವೇ ಆಚರಿಸಬೇಕು ಎಂದು ಆದೇಶ ಮಾಡಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು. ಆರ್ಯ ಈಡಿಗ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಮತ್ತು ನಾರಾಯಣಗುರು ಭವನ ನಿರ್ಮಿಸಬೇಕು ಎನ್ನುವ ಸಮುದಾಯದ ಬೇಡಿಕೆಗಳನ್ನು ಈಡೇರಿಸುವುದಾಗಿ ಸಿಎಂ ವೇದಿಕೆಯಲ್ಲಿಯೇ ಭರವಸೆ ನೀಡಿದರು.
ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ವಿಖ್ಯಾತಾನಂದ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಸಚಿವ ಮಧು ಬಂಗಾರಪ್ಪ, ಶಾಸಕರಾದ ಗೋಪಾಲಕೃಷ್ಣ ಬೇಳೂರು, ಹೆಚ್.ಆರ್.ಗವಿಯಪ್ಪ, ಆರ್ಯ ಈಡಿಗ ಸಮಾಜದ ಅಧ್ಯಕ್ಷರಾದ ಡಾ.ಎಂ.ತಿಮ್ಮೇಗೌಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


