BBMP ಕಚೇರಿಯಲ್ಲಿ ಅಗ್ನಿ ಅವಘಡ: ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಭೇಟಿ, ತನಿಖೆಗೆ ಆದೇಶ
ಬಿಬಿಎಂಪಿ (BBMP) ಕೇಂದ್ರ ಕಚೇರಿ ಆವರಣದಲ್ಲಿ ನಡೆದ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದ ಗಾಯಾಳುಗಳನ್ನು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿದರು.

ಬೆಂಗಳೂರು: ಬಿಬಿಎಂಪಿ (BBMP) ಕೇಂದ್ರ ಕಚೇರಿ ಆವರಣದಲ್ಲಿ ನಡೆದ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದ ಗಾಯಾಳುಗಳನ್ನು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿದರು.
ಗಾಯಾಳುಗಳು ದಾಖಲಾಗಿದ್ದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಬೆಳಗಾವಿಯಿಂದ ಬೆಂಗಳೂರಿಗೆ ಬರುತ್ತಿದ್ದಂತೆ ನೇರವಾಗಿ ಆಸ್ಪತ್ರೆಗೆ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, 'ಘಟನೆ ಸಂಬಂಧ ತನಿಖೆಗೆ ಸೂಚಿಸಿದ್ದೇನೆ. ಘಟನೆಯಲ್ಲಿ ಒಬ್ಬರಿಗೆ ಶೇ.38ರಷ್ಟು ಸುಟ್ಟು ಗಾಯಗಳಾಗಿದ್ದು, 48 ಗಂಟೆಗಳ ಕಾಲ ನಿಗಾದಲ್ಲಿ ಇಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ. ಎಲ್ಲರನ್ನೂ ಐಸಿಯುಗೆ ಶಿಫ್ಟ್ ಮಾಡುವಂತೆ ಸೂಚನೆ ನೀಡಿದ್ದೇನೆ ಎಂದರು.
ಘಟನೆಯಲ್ಲಿ ಸಿಬ್ಬಂದಿ ಮುಖ, ಕೈಗಳಿಗೆ ಗಾಯಗಳಾಗಿವೆ, ಅದೃಷ್ಟವಶಾತ್ ಕಣ್ಣುಗಳಿಗೆ ಹಾನಿಯಾಗಿಲ್ಲ. ಮೇಲ್ನೋಟಕ್ಕೆ ಎಲ್ಲರೂ ಬದುಕುಳಿಯುತ್ತಾರೆಂಬ ವಿಶ್ವಾಸವಿದೆ. ಆದಷ್ಟು ಬೇಗ ಗುಣಮುಖರಾಗಲಿ ಅಂತಾ ಪ್ರಾರ್ಥಿಸುತ್ತೇನೆ. ಘಟನೆ ಹೇಗಾಯ್ತು ಎಂದು ತನಿಖೆ ನಡೆಸಲು ಆಯುಕ್ತರಿಗೆ ಸೂಚಿಸಿದ್ದೇನೆ. ಬೆಂಕಿ ಪ್ರಕರಣದ ಬಗ್ಗೆ ಎಫ್‌ಐಆರ್ ಸಹ ದಾಖಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಪಾಲಿಕೆ ಕಚೇರಿಯಲ್ಲಿ ಕ್ವಾಲಿಟಿ ಕಂಟ್ರೋಲ್ ರೂಂನಲ್ಲಿ ರೋಟಿನ್ ಮೀಟಿಂಗ್ ವೇಳೆ ಅವಘಡ ಸಂಭವಿಸಿದೆ. ಕೆಳಗಡೆ ಕೇಮಿಕಲ್ ಇದ್ದು, ಲ್ಯಾಬ್ ಟೆಸ್ಟಿಂಗ್ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಸುಮಾರು ಐದು ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ. ಅವಘಡ ಸಂಭವಿಸುತ್ತಿದ್ದಂತೆ ಇಬ್ಬರು ಅಪರೇಟರ್ಸ್ ಸುರೇಶ್ ಮತ್ತು ಆನಂದ್ ಕೆಳಗಡೆ ಬಂದಿದ್ದಾರೆ. ನಂತರ ಹೊರಗಡೆ ಬರುವಾಗ ಬೆಂಕಿ ತಗುಲಿದೆ. ಕೆಲವರಿಗೆ ಶೇ.28 ರಷ್ಟು, ಇನ್ನೂ ಕೆಲವರಿಗೆ ಶೇ.35 ರಿಂದ 40 ರಷ್ಟು ಗಾಯಗಳಾಗಿವೆ ಎಂದರು.
ಬಳಿಕ ಮಾತನಾಡಿದ ಗಾಯಾಳುಗಳ ಆರೋಗ್ಯ ವಿಚಾರಿಸಿದ ನಂತರ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಬೆಂಕಿ ಪ್ರಕರಣದ ಬಗ್ಗೆ ಪ್ರತ್ಯೇಕವಾಗಿ ತನಿಖೆ ಮಾಡಿಸುತ್ತೇವೆ. ಗಾಯಗೊಂಡಿರುವ ವ್ಯಕ್ತಿಗಳಿಗೆ ಗುಣಮಟ್ಟದ ಚಿಕಿತ್ಸೆ ಕೊಡಿಸುವ ಕೆಲಸ ಮಾಡುತ್ತೇವೆ. ಈ ಬಗ್ಗೆ ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದರು. ಘಟನಾ ಸ್ಥಳಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದಲ್ಲಿರುವ ಗುಣಮಟ್ಟ ನಿಯಂತ್ರಣ ವಿಭಾಗದ ಲ್ಯಾಬ್ ಮತ್ತು ಕಚೇರಿ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿ, ಘಟನೆಯಲ್ಲಿ 8 ರಿಂದ 10 ಮಂದಿ ಸಿಬ್ಬಂದಿ ಗಾಯಗೊಂಡಿದ್ದರು. ಗಾಯಗೊಂಡ ಹತ್ತು ಮಂದಿಯನ್ನು ಮೊದಲು ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರವಾಗಿ ಸುಟ್ಟ ಬಿಬಿಎಂಪಿ ನೌಕರನಿಗೆ ಸೆಂಟ್ ಮಾರ್ಥಾಸ್ನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


