ರಾಜ್ಯ

ಭಯದಲ್ಲಿ ಸಿದ್ದರಾಮಯ್ಯ ಒಳ ಮೈತ್ರಿ, ಹೊರ ಮೈತ್ರಿ ಎಂದು ಮಾತನಾಡುತ್ತಿದ್ದಾರೆ, ಚುನಾವಣೆಯಲ್ಲಿ ಸ್ವಂತ ಬಲದಿಂದ ಗೆಲ್ಲುತ್ತೇನೆ: ಸಿಎಂ ಬೊಮ್ಮಾಯಿ

ಒಳ ಮೈತ್ರಿ, ಹೊರ ಮೈತ್ರಿ ಎಂದು ಮಾತನಾಡುತ್ತಿರುವ ಸಿದ್ದರಾಮಯ್ಯ ಅವರಲ್ಲಿ ಭಯ ಹುಟ್ಟಿಕೊಂಡಿದೆ ಎಂದು ಮುಖ್ಯಮಂತ್ರಿ ಬಸವರಾ ಬೊಮ್ಮಾಯಿಯವರು ಗುರುವಾರ ಹೇಳಿದ್ದಾರೆ.

ಭಯದಲ್ಲಿ ಸಿದ್ದರಾಮಯ್ಯ ಒಳ ಮೈತ್ರಿ, ಹೊರ ಮೈತ್ರಿ ಎಂದು ಮಾತನಾಡುತ್ತಿದ್ದಾರೆ, ಚುನಾವಣೆಯಲ್ಲಿ ಸ್ವಂತ ಬಲದಿಂದ ಗೆಲ್ಲುತ್ತೇನೆ: ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ
Published On :

ಬೆಂಗಳೂರು: ಒಳ ಮೈತ್ರಿ, ಹೊರ ಮೈತ್ರಿ ಎಂದು ಮಾತನಾಡುತ್ತಿರುವ ಸಿದ್ದರಾಮಯ್ಯ ಅವರಲ್ಲಿ ಭಯ ಹುಟ್ಟಿಕೊಂಡಿದೆ ಎಂದು ಮುಖ್ಯಮಂತ್ರಿ ಬಸವರಾ ಬೊಮ್ಮಾಯಿಯವರು ಗುರುವಾರ ಹೇಳಿದ್ದಾರೆ.

ಆರ್ ಟಿ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸ್ಪರ್ಧಿಸುತ್ತಿರುವ ಶಿಗ್ಗಾವಿ ಕ್ಷೇತ್ರದಲ್ಲಿ ಯಾರು ಯಾರ ಜತೆಗಾದರೂ  ಹೊಂದಾಣಿಕೆ ಮಾಡಿಕೊಳ್ಳಲಿ. ನನಗೆ ಭಯ ಇಲ್ಲ. ನಾನು ನನ್ನ ಸ್ವಂತ ಬಲದಿಂದ ಗೆಲ್ಲುತ್ತೇನೆಂದು ವಿಶ್ವಾಸ ವ್ಯಕ್ತಪಡಿಸಿದರು.

‘ವರುಣ ಕ್ಷೇತ್ರದಲ್ಲಿ ಬಿಜೆಪಿ– ಜೆಡಿಎಸ್ ಒಳಮೈತ್ರಿ ಮಾಡಿಕೊಂಡಿದೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿ, ‘ಯಾರೂ ಸೇರಿಕೊಂಡರೂ ಸಿದ್ದರಾಮಯ್ಯ ಅವರಿಗೆ ಸ್ವಂತ ಬಲ ಇದ್ದರೆ, ಅವರು ಗೆಲ್ಲುತ್ತಾರೆ. ಇಲ್ಲದಿದ್ದರೆ ಗೆಲ್ಲುವುದಿಲ್ಲ’ ಎಂದು ಹೇಳಿದರು.

ಒಳ ಮೈತ್ರಿ, ಹೊರ ಮೈತ್ರಿ ಎಂದು ಮಾತನಾಡುತ್ತಿರುವ ಸಿದ್ದರಾಮಯ್ಯ ಅವರಿಗೆ ಭಯ ಹುಟ್ಟಿಕೊಂಡಿದೆ. ಎಲ್ಲ ಪಕ್ಷಗಳಿಂದಲೂ ಅಭ್ಯರ್ಥಿಗಳು ಫಿಕ್ಸ್ ಆಗಿದ್ದಾರೆ ಎಂಬ ಭಯವಿದ್ದು, ಅವರಿಬ್ಬರೂ ಸೇರಿಕೊಂಡಿದ್ದಾರೆ ಎಂಬ ಭಯ ಬಂದಿದೆ. ಆದರೆ, ಎಲ್ಲ ಅಭ್ಯರ್ಥಿಗಳು ತಾವೇ ಗೆಲ್ಲಬೇಕೆಂದು ಚುನಾವಣೆಗೆ ನಿಲ್ಲುತ್ತಾರೆ‘ ಎಂದು ತಿಳಿಸಿದರು.

ನನ್ನ ಕ್ಷೇತ್ರ ಶಿಗ್ಗಾವಿಯಲ್ಲೂ ಕಾಂಗ್ರೆಸ್- ಜೆಡಿಎಸ್ ಸೇರಿಕೊಂಡಿದ್ದಾರೆ. ಇದರಿಂದ ನನಗೇನೂ ಭಯವಿಲ್ಲ ಕಾಂಗ್ರೆಸ್ ಅಭ್ಯರ್ಥಿ ಬದಲಾಯಿಸಿದೆ. ಆದರೆ, ನನ್ನ ಮೇಲೆ ವ್ಯತ್ಯಾಸ ಆಗುವುದಿಲ್ಲ. ಕಾಂಗ್ರೆಸ್‌ನ ಒಬ್ಬರಿಗೆ ಜೆಡಿಎಸ್ ಟಿಕೆಟ್ ಕೊಟ್ಟಿದೆ. ಇದನ್ನು ನಾನು ಕಾಂಗ್ರೆಸ್ ಜೆಡಿಎಸ್ ಮೈತ್ರಿ ಎನ್ನಬಹುದೇ? ಇಂತಹ ಆರೋಪವನ್ನು ನಾನು ಮಾಡುವುದಿಲ್ಲ’ ಎಂದರು.

ಯಡಿಯೂರಪ್ಪ ನಿವಾಸದಲ್ಲಿ ನಡೆದ ಸಭೆ ಕುರಿತು ಮಾತನಾಡಿ, ಯಡಿಯೂರಪ್ಪ ನೇತೃತ್ವದಲ್ಲಿ ಲಿಂಗಾಯತರ ಸಭೆಯಲ್ಲಿ ಸದ್ಯದ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಚರ್ಚೆ ಆಯಿತು. ಕಾಂಗ್ರೆಸ್​ನವರು ಅಪಪ್ರಚಾರ ಮಾಡುತ್ತಿದ್ದಾರೆ, ಇದನ್ನು ಹೇಗೆ ಕೌಂಟರ್ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡಲಾಯಿತು. ಲಿಂಗಾಯತ ಸಿಎಂ ಬಗ್ಗೆಯೂ ಕೆಲವರು ಸಲಹೆ ಕೊಟ್ಟರು. ಸಭೆಯಲ್ಲಿ ಧರ್ಮೇಂದ್ರ ಪ್ರಧಾನ್ ಅವರೂ ಭಾಗಿಯಾಗಿದ್ದರು. ಅವರು ಹೈಕಮಾಂಡ್​ಗೆ ಸಭೆಯ ಭಾವನೆಗಳನ್ನು ತಿಳಿಸುವುದಾಗಿ ಹೇಳಿದ್ದಾರೆ. ಲಿಂಗಾಯತ ಸಿಎಂ ಘೋಷಣೆ ಬಗ್ಗೆ ನಿರ್ಣಯ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್​ನದ್ದು ಲಿಂಗಾಯತ ವಿರೋಧಿ ನಡೆ. ಅವರಿಗೆ 1967 ರಿಂದ ಈವರೆಗೆ 50 ವರ್ಷದಲ್ಲಿ ಒಬ್ಬ ಲಿಂಗಾಯತ ಸಿಎಂ ಮಾಡಕ್ಕಾಗಲಿಲ್ಲ. ಈ ನಡುವೆ ವಿರೇಂದ್ರ ಪಾಟೀಲರಿಗೆ ಒಂಬತ್ತು ತಿಂಗಳು ಅಧಿಕಾರ ಕೊಟ್ಟು ನಂತರ ಅವರನ್ನು ಕಾಂಗ್ರೆಸ್ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಏರ್​ಪೋರ್ಟ್​ನಲ್ಲೇ ಅವರನ್ನು ತೆಗೆದು ಹಾಕಿದರು. ರಾಜಶೇಖರ ಮೂರ್ತಿ ಅವರನ್ನು ನಡೆಸಿಕೊಂಡ ರೀತಿಯೂ ಸರಿಯಲ್ಲ. ಲಿಂಗಾಯತ ಧರ್ಮವನ್ನು ಒಡೆಯಲು ಕಾಂಗ್ರೆಸ್ ಹೋಗಿತ್ತು. ಮತಬ್ಯಾಂಕ್​ಗಾಗಿ ಧರ್ಮ ಒಡೆಯಲು ಹೋಗಿದ್ದರು. ಜನ‌ ಇದನ್ನೆಲ್ಲ ಮರೆಯಲ್ಲ, ಕಾಂಗ್ರೆಸ್‌ನವರು ದಲಿತರು, ಹಿಂದುಳಿದವರು, ಲಿಂಗಾಯತರಿಗೆ ಮೋಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನಮ್ಮ ಪ್ರಚಾರ ಮಿಲಿಟರಿ ಹೋಟೆಲ್​ನಿಂದಲೇ ಆರಂಭವಾಗಿದೆ. ಅಲ್ಲಿ ಸ್ಥಳೀಯ ಸಾಮಾನ್ಯ ಜನ ಇರ್ತಾರೆ ಅಂತಲೇ ಡಿಕೆಶಿ ಅವರನ್ನು ಭೇಟಿ ಮಾಡಲ್ಲ. ಅಂತಹ ಸಾಮಾನ್ಯ ಜನರನ್ನು ಭೇಟಿ ಮಾಡೋದಕ್ಕೆ ಅಶೋಕ್ ಮಿಲಿಟರಿ ಹೋಟೆಲ್​ಗೆ ಹೋಗಿದ್ದಾರೆ. ಇದರಲ್ಲಿ ಏನ್ ತಪ್ಪಿದೆ? ಯಾಕೆ ಮಿಲಿಟರಿ ಹೋಟೆಲ್​ಗೆ ಹೋಗಬಾರದು? ಎಂದು ಅಶೋಕ್ ಕನಕಪುರದಲ್ಲಿ ಮಿಲಿಟರಿ ಹೋಟೆಲ್​ಗೆ ಬಂದು ಹೋಗಿ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದರು.

ವಲಸೆ ಹೋದವರನ್ನು ವಾಪಸ್ ಕರೆತರುವ ಕೆಲಸ ಮಾಡುತ್ತಿದ್ದೇವೆ. ಜಿಲ್ಲಾ, ಹೋಬಳಿ ಮಟ್ಟದಲ್ಲಿ ಆ ಕೆಲಸ ಮಾಡುತ್ತಿದ್ದೇವೆ. ಎಲ್ಲ ರೀತಿಯ ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದರು.

ಈಶ್ವರಪ್ಪ ಕುಟುಂಬಕ್ಕೆ ಟಿಕೆಟ್ ಮಿಸ್ ಆಗಿರುವ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡದ ಸಿಎಂ, ನಾಮಪತ್ರ ಪ್ರಕ್ರಿಯೆ ಮುಗಿದ ಮೇಲೆ ಪ್ರಧಾನಿ ಅವರು ರಾಜ್ಯಕ್ಕೆ ಪ್ರಚಾರಕ್ಕೆ ಬರುತ್ತಾರೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.