ರಾಜ್ಯದಲ್ಲಿ ಓಮಿಕ್ರಾನ್ ರೂಪಾಂತರಿ ಬಿಕ್ಯು.1 ಭೀತಿ: ಲಕ್ಷಣ ಇರುವವರು ಪರೀಕ್ಷೆ ಮಾಡಿಸಿಕೊಳ್ಳುವಂತೆ ಆರೋಗ್ಯ ಇಲಾಖೆ ಸಲಹೆ
ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್'ನ ಓಮಿಕ್ರಾನ್ ತಳಿಯ ಹೊಸ ರೂಪಾಂತರಿ ಬಿಕ್ಯೂ.1 ಪತ್ತೆಯಾಗಿದ್ದು, ಇದೀಗ ರಾಜ್ಯದಲ್ಲೂ ಆತಂಕ ಹೆಚ್ಚಾಗತೊಡಗಿದೆ. ಈ ಹಿನ್ನೆಲೆಯಲ್ಲಿ ಶೀತ, ಕೆಮ್ಮು ಪರೀಕ್ಷೆ ಮಾಡಿಸಿಕೊಂಡು ಐಸೋಲೇಷನ್ ನಲ್ಲಿರುವಂತೆ ರಾಜ್ಯ ಆರೋಗ್ಯ ಇಲಾಖೆ ಸಲಹೆ ನೀಡಿದೆ.

ಬೆಂಗಳೂರು: ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್'ನ ಓಮಿಕ್ರಾನ್ ತಳಿಯ ಹೊಸ ರೂಪಾಂತರಿ ಬಿಕ್ಯೂ.1 ಪತ್ತೆಯಾಗಿದ್ದು, ಇದೀಗ ರಾಜ್ಯದಲ್ಲೂ ಆತಂಕ ಹೆಚ್ಚಾಗತೊಡಗಿದೆ. ಈ ಹಿನ್ನೆಲೆಯಲ್ಲಿ ಶೀತ, ಕೆಮ್ಮು ಪರೀಕ್ಷೆ ಮಾಡಿಸಿಕೊಂಡು ಐಸೋಲೇಷನ್ ನಲ್ಲಿರುವಂತೆ ರಾಜ್ಯ ಆರೋಗ್ಯ ಇಲಾಖೆ ಸಲಹೆ ನೀಡಿದೆ.
ಹೊಸ ತಳಿ ಪತ್ತೆಯಾಗಿರುವುದರಿಂದ ಕೊರೋನಾ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ, ಗುಂಪು ಸೇರಿವಿಕೆಯಿಂದ ದೂರ ಇರುವುದು ಹಾಗೂ ಮೂರನೇ ಡೋಸ್ ಲಸಿಕೆ ಪಡೆಯುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾರ್ವಜನಿಕರಿಗೆ ಸಲಹೆ ನೀಡಿದೆ.
ಜ್ವರ, ಕೆಮ್ಮು, ನೆಗಡಿ, ಗಂಟಲು ಕೆರೆತ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಬಹಳಷ್ಟು ಎಚ್ಚರ ವಹಿಸಬೇಕಿದ್ದು, ಲಕ್ಷಣಗಳು ಕಂಡು ಬಂದ ಕೂಡಲೇ ಹತ್ತಿರದ ಆಸ್ಪತ್ರೆ, ಆರೋಗ್ಯ ಸಂಸ್ಥೆಗಳಲ್ಲಿ ಕೋವಿಡ್ ಪರೀಕ್ಷೆ ನಡೆಸಿ ಫಲಿತಾಂಶ ದೊರೆಯುವವರೆಗೂ ಸ್ವಂಯ ಪ್ರತ್ಯೇಕವಾಸ ಇರಬೇಕು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರು ಕೂಡಲೇ ಹತ್ತಿರದ ಆಸ್ಪತ್ರೆಯಲ್ಲಿ ವೈದ್ಯಕೀಯ ಆರೈಕೆ ಪಡೆದುಕೊಳ್ಳಬೇಕೆಂದು ತಿಳಿಸಿದೆ.
ಹವಾನಿಯಂತ್ರಣ ವ್ಯವಸ್ಥೆ ಇರುವ ಒಳಾಂಗಣ, ಅಗತ್ಯ ಗಾಳಿ-ಬೆಳಕಿಲ್ಲದಿರುವ ಸ್ಥಳಗಳು, ಹೆಚ್ಚಿನ ಜನಸಂದಣಿ ಇರುವ ಪ್ರದೇಶಗಳು ಹಾಗೂ ಆರೋಗ್ಯ ಸಂಸ್ಥೆಗಳಲ್ಲಿ ಮಾಸ್ಕ್ ಧರಿಸಬೇಕು. ಹಬ್ಬಗಳನ್ನು ಸಾಧ್ಯವಾದಷ್ಟು ಹೊರಾಂಗಣಗಳಲ್ಲಿ ಆಚರಿಸಬೇಕು. ಜನ ದಟ್ಟಣೆಯ ಪ್ರದೇಶಗಳಿಂದ ದೂರವಿರಬೇಕು ಎಂದು ಮನವಿ ಮಾಡಿಕೊಂಡಿದೆ.
ಮುನ್ನೆಚ್ಚರಿಕೆ ಲಸಿಕೆ ಡೋಸ್ ಪಡೆಯಲು ಬಾಕಿ ಇರುವವರು ಕೂಡಲೇ ಪಡೆದುಕೊಳ್ಳಬೇಕು. 60 ವರ್ಷ ಮೇಲ್ಪಟ್ಟವರು ಹಾಗೂ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಶೀಘ್ರವೇ ಲಸಿಕೆಯನ್ನು ಪಡೆಯಬೇಕು. ಜೀವ ನಿರೋಧಕ ಕಡಿಮೆ ಇರುವವರು, ಡಯಾಲಿಸಿಸಿ ಮಾಡಿಸಿಕೊಳ್ಳುವವರು ಮತ್ತು ಕ್ಯಾನ್ಸರ್ ನಿರೋಧಕ ಔಷಧಿಗಳನ್ನು ಸೇವಿಸುತ್ತಿರುವವರು ತಮಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೊಂದಿಗೆ ಸಮಾಲೋಚನೆ ನಂತರ ಆದ್ಯತೆಯ ಮೇಲೆ ಕೋವಿಡ್-19 ಲಸಿಕೆಯನ್ನು ಪಡೆದುಕೊಳ್ಳಬೇಕೆಂದು ತಿಳಿಸಿದೆ.
ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಮಡಚಿದ ಮೊಣಕೈ ಒಳಗೆ ಕೆಮ್ಮುವುದು ಹಾಗೂ ಸೀನುವುದು. ಕರವಸ್ತ್ರ/ಟಿಶ್ಯೂ ಪೇಪರ್'ನ ಬಳಕೆ, ಸಾರ್ವಜನಿಕ ಸ್ಥಳಗಳಲ್ಲಿ ಮೂಗನ್ನು ಶುಚಿಗೊಳಿಸದಿರುವುದು ಹಾಗೂ ಉಗುಳದಿರುವುದು. ಕೈಗಳನ್ನು ಸೋಪ್ ನಿಂದ ತೊಳೆಯುವುದು ಹಾಗೂ ಸೋಂಕಿನ ಲಕ್ಷಣಗಳನ್ನು ಹೊಂದಿದವರ ಸಂಪರ್ಕದಿಂದ ದೂರವಿರುವ ಕ್ರಮಗಳನ್ನು ಪಾಲಿಸಬೇಕೆಂದು ಇಲಾಖೆ ಮನವಿ ಮಾಡಿಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


