ಬೆಳಗಾವಿ ಗಡಿ ತಕರಾರು ವಿಚಾರದಲ್ಲಿ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಆಸ್ಥೆ; ಕರ್ನಾಟಕ ಸರ್ಕಾರದ್ದು ಇನ್ನೂ ನಿದ್ರಾವಸ್ಥೆ!
ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದ ವಿಚಾರದಲ್ಲಿ, ಸಮರ್ಥ ವಾದ ಮಂಡಿಸಲು ಬೇಕಾದ ಎಲ್ಲ ಸಿದ್ಧತೆಗಳನ್ನೂ ಮಹಾರಾಷ್ಟ್ರ ಸರ್ಕಾರ ಮಾಡಿಕೊಂಡಿದೆ

ಬೆಳಗಾವಿ: ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದ ವಿಚಾರದಲ್ಲಿ, ಸಮರ್ಥ ವಾದ ಮಂಡಿಸಲು ಬೇಕಾದ ಎಲ್ಲ ಸಿದ್ಧತೆಗಳನ್ನೂ ಮಹಾರಾಷ್ಟ್ರ ಸರ್ಕಾರ ಮಾಡಿಕೊಂಡಿದೆ. ಆದರೆ, ಕರ್ನಾಟಕ ಸರ್ಕಾರ ತುರ್ತು ಸಿದ್ಧತೆಗಳನ್ನೂ ಮಾಡಿಕೊಳ್ಳದಿರುವುದು ಗಡಿ ಕನ್ನಡಿಗರು ಹಾಗೂ ಹೋರಾಟಗಾರರನ್ನು ಆತಂಕಕ್ಕೆ ತಳ್ಳಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದಲ್ಲಿ ಸೋಮವಾರ ಉನ್ನತ ಮಟ್ಟದ ಸಮಿತಿ ಸಭೆ ಕೂಡ ನಡೆಯಿತು. ಎಲ್ಲ ಪಕ್ಷಗಳ ನಾಯಕರೂ ಸಭೆಯಲ್ಲಿ ಪಾಲ್ಗೊಂಡರು. ಗಡಿ ಪ್ರದೇಶಗಳಲ್ಲಿ ವಾಸಿಸುವ ಮರಾಠಿ ಭಾಷಿಕ ಜನಸಂಖ್ಯೆಯ ಹಿತಾಸಕ್ತಿಗಾಗಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣವನ್ನು ಎದುರಿಸುತ್ತೇವೆ ಎಂದು ಹೇಳಿದರು.
ಮಹಾರಾಷ್ಟ್ರ ಸಿ.ಎಂ ಏಕನಾಥ ಶಿಂಧೆ ಅವರು ಗಡಿ ತಂಟೆ ವಿಚಾರದಲ್ಲಿ ಅವರು ಆಸ್ಥೆ ವಹಿಸಿದ್ದಾರೆ. ಮಹಾರಾಷ್ಟ್ರದ ಉನ್ನತ ಶಿಕ್ಷಣ ಸಚಿವ ಚಂದ್ರಕಾಂತ ಪಾಟೀಲ ಹಾಗೂ ಅಬಕಾರಿ ಸಚಿವ ಶಂಭುರಾಜೇ ದೇಸಾಯಿ; ಈ ಇಬ್ಬರನ್ನೂ ಗಡಿ ಉಸ್ತುವಾರಿ ಸಚಿವರಾಗಿಯೂ ನಿಯೋಜಿಸಿದ್ದಾರೆ.
ಸಭೆಯಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಎನ್‌ಸಿಪಿ ನಾಯಕ ಶರದ್ ಪವಾರ್, ಪೃಥ್ವಿರಾಜ್ ಚವಾಣ್, ಎಂಇಎಸ್ ಮುಖಂಡರು ಉಪಸ್ಥಿತರಿದ್ದರು. ವಿಚಾರಣೆ ವೇಳೆ ಹಿರಿಯ ಕಾನೂನು ತಜ್ಞ ವೈದ್ಯನಾಥನ್ ಮಹಾರಾಷ್ಟ್ರವನ್ನು ಪ್ರತಿನಿಧಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯಗಳ ಮಧ್ಯೆ ವ್ಯಾಜ್ಯ ಹುಟ್ಟಿಸುವ ಕೆಲಸ ಮಹಾರಾಷ್ಟ್ರ ಸರ್ಕಾರ ಮತ್ತು ಅಲ್ಲಿನ ಮುಖ್ಯಮಂತ್ರಿ ಮಾಡಬಾರದು: ಸಿಎಂ ಬೊಮ್ಮಾಯಿ
1956ರ ರಾಜ್ಯ ಪುನರ್ ವಿಂಗಡಣಾ ಕಾಯ್ದೆಯನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿದೆ. 2004ರಲ್ಲಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆ 18 ವರ್ಷಗಳ ಬಳಿಕ ನಡೆಯಲಿದೆ. ಗಡಿ ವಿವಾದವನ್ನು ಸುಪ್ರೀಂ ಕೋರ್ಟಿನಲ್ಲಿ ತೆಗೆದುಕೊಳ್ಳಬೇಕೇ– ಬೇಡವೇ ಎಂಬ ವಿಚಾರವಾಗಿ ನವೆಂಬರ್ 23ರಂದು ಅಂತಿಮ ವಿಚಾರಣೆ ನಡೆಯಲಿದೆ.
‘ಕರ್ನಾಟಕ ಸರ್ಕಾರದಿಂದ ಮಾಡಿಕೊಂಡ ಸಿದ್ಧತೆಗಳು ಏನು ಎಂಬ ಬಗ್ಗೆ ಇನ್ನೂ ಮಾಹಿತಿ ನೀಡಿಲ್ಲ. ಮಹಾರಾಷ್ಟ್ರದಂತೆ ಇಲ್ಲಿ ಒಂದು ಉನ್ನತ ಮಟ್ಟದ ಸಮಿತಿಯೇ ಇಲ್ಲ. 2018ರ ನಂತರ ಇಲ್ಲಿಯವರೆಗೆ ಗಡಿ ಉಸ್ತುವಾರಿ ಸಚಿವರನ್ನೂ ನೇಮಿಸಿಲ್ಲ’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ದೂರಿದ್ದಾರೆ.
‘ಗಡಿ ಸಂರಕ್ಷಣಾ ಆಯೋಗವೂ ನಿಷ್ಕ್ರಿಯವಾಗಿದೆ. ಬಸವರಾಜ ಬೊಮ್ಮಾಯಿ ಅವರಿಗೆ ಗಡಿ ವಿಚಾರದಲ್ಲಿ ಸಾಕಷ್ಟು ಜ್ಞಾನವಿದೆ. ಆದರೆ, ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮುಖ್ಯ. ಅವರು ಇದೂವರೆಗೆ ಇಂಥ ಯಾವುದೇ ಹೆಜ್ಜೆ ಇಟ್ಟಿಲ್ಲ’ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


