ಒತ್ತಡದಿಂದಲ್ಲ, ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಬಾರದೆಂಬ ಉದ್ದೇಶದಿಂದ ಹೇಳಿಕೆ ವಾಪಸ್ ಪಡೆದೆ: ಸತೀಶ್ ಜಾರಕಿಹೊಳಿ
ಹಿಂದೂ ಪದದ ಬಗ್ಗೆ ನಾನು ನೀಡಿದ್ದ ಹೇಳಿಕೆ ವಾಪಸ್ ಪಡೆದಿದ್ದರ ಹಿಂದೆ ಯಾವುದೇ ಒತ್ತಡ ಇರಲಿಲ್ಲ. ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಬಾರದು ಎಂಬ ಏಕೈಕ ಉದ್ದೇಶದಿಂದ ಹೇಳಿಕೆ ವಾಪಸ್ ಪಡೆದುಕೊಂಡು ವಿಷಾದ ವ್ಯಕ್ತಪಡಿಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಹೇಳಿದ್ದಾರೆ.

ಬೆಳಗಾವಿ: ಹಿಂದೂ ಪದದ ಬಗ್ಗೆ ನಾನು ನೀಡಿದ್ದ ಹೇಳಿಕೆ ವಾಪಸ್ ಪಡೆದಿದ್ದರ ಹಿಂದೆ ಯಾವುದೇ ಒತ್ತಡ ಇರಲಿಲ್ಲ. ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಬಾರದು ಎಂಬ ಏಕೈಕ ಉದ್ದೇಶದಿಂದ ಹೇಳಿಕೆ ವಾಪಸ್ ಪಡೆದುಕೊಂಡು ವಿಷಾದ ವ್ಯಕ್ತಪಡಿಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನೀಡಿದ್ದ ಹೇಳಿಕೆ ಹಿಂದಕ್ಕೆ ಪಡೆಯಲು ಸರ್ಕಾರ ಅಥವಾ ಯಾರ ಒತ್ತಡವೂ ಇರಲಿಲ್ಲ. ಪಕ್ಷಕ್ಕೆ ಹಾನಿ ಆಗಬಾರದೆಂದು ಸ್ಥಳೀಯ ನಾಯಕರೊಂದಿಗೆ ಚರ್ಚಿಸಿ ಸ್ವತಃ ನಾನೇ ಈ ನಿರ್ಣಯ ಕೈಗೊಂಡಿದ್ದೇನೆ ಎಂದು ಹೇಳಿದರು.
ನಿಪ್ಪಾಣಿಯಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ನಾನು ನೀಡಿದ್ದ ಹೇಳಿಕೆಯನ್ನು ಬೇರೆ ರೀತಿ ತಿರುಚಿ ಹೇಳುವ ಕೆಲಸವಾಯಿತು. ಇದರಿಂದ ವಿವಾದ ಸೃಷ್ಟಿಯಾಯಿತು. ನನ್ನನ್ನು ಹಿಂದೂ ವಿರೋಧಿ ಎಂದು ಬಿಂಬಿಸಲಾಯಿತು. ಹಾಗಾಗಿ ಪಕ್ಷದ ಹಿತದೃಷ್ಟಿಯಿಂದ ಈ ಹೇಳಿಕೆಯನ್ನು ಹಿಂದಕ್ಕೆ ಪಡೆದು ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.
ನಿಪ್ಪಾಣಿಯಲ್ಲಿ ನಡೆದಿದ್ದು ಖಾಸಗಿ ಕಾರ್ಯಕ್ರಮ. ಅದು ನನ್ನ ವೈಯಕ್ತಿಕ ಹೇಳಿಕೆ. ಪಕ್ಷಕ್ಕೂ ಅದಕ್ಕೂ ಸಂಬಂಧವಿಲ್ಲ. ಈ ಹೇಳಿಕೆಯಿಂದ ವಿವಾದ ಉಂಟಾಗಿದ್ದಲ್ಲದೆ ನನ್ನ ಮೇಲೆಯೇ ಆರೋಪ ಬಂತು. ಆದರೆ ನಾನು ನನ್ನ ಸಿದ್ಧಾಂತದಿಂದ ಹಿಂದೆ ಸರಿದಿಲ್ಲ. ಮುಂದಿನ ದಿನಗಳಲ್ಲಿ ನನ್ನ ಹೇಳಿಕೆ ಸಾಬೀತುಗೊಳಿಸುವ ಪ್ರಯತ್ನ ಮುಂದುವರಿಸುತ್ತೇನೆ. ಪೂರಕ ದಾಖಲೆಗಳೊಂದಿಗೆ ವಿವಿಧ ವೇದಿಕೆಗಳ ಮೇಲೆ ಇದರ ಬಗ್ಗೆ ಮನವರಿಕೆ ಮಾಡಿಕೊಡುತ್ತೇನೆ ಎಂದರು.
ನನ್ನನ್ನು ಹಿಂದೂ ವಿರೋಧಿ ಎಂದು ಬಿಂಬಿಸಲಾಗಿದೆ. ನನ್ನ ಹೆಸರಿಗೆ ಕಳಂಕ ಹಚ್ಚಲಾಗಿದೆ. ಏನೂ ತಪ್ಪು ಮಾಡದೆ ನಾನು ಕಳಂಕ ಹೊರಲು ಸಿದ್ಧವಿಲ್ಲ. ಚುನಾವಣಾ ಸಂದರ್ಭದಲ್ಲಿ ಈ ವಿಷಯ ಮತ್ತೆ ಪ್ರಸ್ತಾಪವಾಗುತ್ತದೆ ಎಂಬುದು ನನಗೆ ಗೊತ್ತಿದೆ. ಹೀಗಾಗಿ ಇದಕ್ಕೆ ಯಾವ ರೀತಿ ಉತ್ತರ ಕೊಡಬೇಕು. ನಮ್ಮ ಕಾರ್ಯಕರ್ತರು ಏನು ಮಾಡಬೇಕು ಎಂಬುದರ ಬಗ್ಗೆ ಪಕ್ಷದಲ್ಲಿ ಚರ್ಚೆ ಮಾಡುತ್ತೇವೆ.
ಸತೀಶ ಜಾರಕಿಹೊಳಿ ದುಡುಕುವವರಲ್ಲ. ಕಾಂಗ್ರೆಸ್ ಸಹವಾಸದಿಂದ ಅವರಿಗೆ ಹೀಗಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಾನು ಎಂದಿಗೂ ದುಡುಕಿಲ್ಲ. ನನ್ನ ಹೇಳಿಕೆಯನ್ನೇ ಸೂಕ್ಷ್ಮವಾಗಿ ಗಮನಿಸಿ ಎಂದಿದ್ದೇನೆ. ಆದರೆ, ಸರ್ಕಾರದ ಮಟ್ಟದಲ್ಲಿ ಮತ್ತು ಸಮಾಜದಲ್ಲಿ ಗೊಂದಲವಾಗಬಾರದೆಂಬ ಉದ್ದೇಶದಿಂದ ಹೇಳಿಕೆ ವಾಪಸ್ ಪಡಿದಿದ್ದೇನೆ ಎಂದು ಸ್ಪಷ್ಟಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


