ಮಾಸ್ಕ್ ಧರಿಸದೆ ನಿಯಮ ಉಲ್ಲಂಘಿಸುತ್ತಿದ್ದೀರಾ? ಶೀಘ್ರದಲ್ಲೇ 250 ರೂ. ದಂಡ ಕಟ್ಟಲು ಸಿದ್ಧರಾಗಿ...
ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸದೆ ನಿಯಮ ಉಲ್ಲಂಘಿಸುವವರಿಗೆ ಶೀಘ್ರದಲ್ಲೇ ರೂ.250 ದಂಡ ವಿಧಿಸಲು ಬಿಬಿಎಂಪಿ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ಬೆಂಗಳೂರು: ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸದೆ ನಿಯಮ ಉಲ್ಲಂಘಿಸುವವರಿಗೆ ಶೀಘ್ರದಲ್ಲೇ ರೂ.250 ದಂಡ ವಿಧಿಸಲು ಬಿಬಿಎಂಪಿ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಈಗಾಗಲೇ ರಾಜ್ಯ ಆರೋಗ್ಯ ಆಯುಕ್ತ ಡಿ ರಂದೀಪ್ ಅವರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಆರೋಗ್ಯ) ಅವರಿಗೆ ಪ್ರಸ್ತಾವನೆ ಕಳುಹಿಸಿದ್ದು, ಬಿಬಿಎಂಪಿ ಮತ್ತು ಬೆಂಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ನಿಯಮ ಜಾರಿಗೆ ತರುವಂತೆ ಮನವಿ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.
ನಗರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ (ಟಿಎಸಿ) ಶಿಫಾರಸುಗಳನ್ನು ಆಧರಿಸಿ ಕ್ರಮಗಳ ಕೈಗೊಳ್ಳಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
4,682 ಪ್ರಕರಣಗಳೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ದೇಶದಲ್ಲಿಯೇ ಬೆಂಗಳೂರು ಮೂರನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಜಿಗಿದಿದೆ. ಮುಂಬೈ ಅಗ್ರಸ್ಥಾನದಲ್ಲಿದೆ.
ಕೇಂದ್ರ ಗೃಹ ಸಚಿವಾಲಯವು ಮಾರ್ಚ್ 31 ರಿಂದ ಕೋವಿಡ್ ನಿಯಂತ್ರಣ ಕ್ರಮಗಳಿಗಾಗಿ ವಿಪತ್ತು ನಿರ್ವಹಣಾ ಕಾಯ್ದೆಯನ್ನು ಬಳಸುವುದನ್ನು ನಿಲ್ಲಿಸಿದೆ, ಆದರೆ, ಮುಖ್ಯ ಕಾರ್ಯದರ್ಶಿಯ ಅಧೀನದ ಸಮಿತಿಯು ಇನ್ನೂ ದಂಡವನ್ನು ವಿಧಿಸಲು ಕಾಯಿದೆಯನ್ನು ಬಳಸುವ ಅಧಿಕಾರವನ್ನು ಹೊಂದಿರುವುದರಿಂದ, ರಾಜ್ಯ ಆರೋಗ್ಯ ಆಯುಕ್ತರು ಮುಖ್ಯ ಕಾರ್ಯದರ್ಶಿಗಳಿಗೆ ಪ್ರಸ್ತಾವನೆ ಕಳುಹಿಸಿದ್ದಾರೆ.
ಮಂಗಳವಾರ, ಬೆಂಗಳೂರಿನಲ್ಲಿ 887 ಸೇರಿದಂತೆ ರಾಜ್ಯದಲ್ಲಿ 968 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಐಸಿಯುನಲ್ಲಿ ಆರು ಸೇರಿದಂತೆ ಆಸ್ಪತ್ರೆಗೆ ದಾಖಲಾದ ರೋಗಿಗಳ ಸಂಖ್ಯೆ 81 ಆಗಿದೆ. ರಾಜ್ಯ ರಾಜಧಾನಿಯು 27 ಕ್ಲಸ್ಟರ್ಗಳನ್ನು ಹೊಂದಿದ್ದು, ಇವೆಲ್ಲವೂ ಮಹದೇವಪುರ ವಲಯದ ಅಪಾರ್ಟ್ಮೆಂಟ್ಗಳಲ್ಲಿದ್ದು, ಇಲ್ಲಿ ಸಾಕಷ್ಟು ಐಟಿ ಉದ್ಯೋಗಿಗಳು ವಾಸಿಸುತ್ತಿದ್ದಾರೆ.
ಇದನ್ನೂ ಓದಿ: ಮಾಸ್ಕ್ ಧರಿಸದ ಪ್ರಯಾಣಿಕನನ್ನು ಮುಲಾಜಿಲ್ಲದೇ ಕೆಳಿಗಿಳಿಸಿ: ವಿಮಾನಯಾನ ಸಂಸ್ಥೆಗಳಿಗೆ DGCA ಖಡಕ್ ವಾರ್ನಿಂಗ್!!
ಈ ಕ್ಲಸ್ಟರ್ಗಳಲ್ಲಿ, 26 ಐದಕ್ಕಿಂತ ಕಡಿಮೆ ಪ್ರಕರಣಗಳನ್ನು ಹೊಂದಿವೆ. ಕಳೆದ ಒಂದು ವಾರದಿಂದ ಬೆಳ್ಳಂದೂರು, ಕಾಡುಗೋಡಿ, ದೊಡ್ಡ ನೆಕ್ಕುಂಡಿ, ವರ್ತೂರು, ಎಚ್ಎಸ್ಆರ್ ಲೇಔಟ್, ಹೊರಮಾವು, ಹಗದೂರು, ಹುಡಿ, ಬೇಗೂರು ಮತ್ತು ಗರುಡಾಚಾರ್ ಪಾಳ್ಯ ವಾರ್ಡ್ಗಳಲ್ಲಿ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.
ಕೋವಿಡ್ ಪ್ರಕರಣಗಳ ಸಂಖ್ಯೆಗೆ ಅನುಗುಣವಾಗಿ ನಗರದಲ್ಲಿ ಮಾಸ್ಕ್ ಉಲ್ಲಂಘನೆಗಾಗಿ ದಂಡದ ಷರತ್ತುಗಳನ್ನು ಏಳು ದಿನಗಳಲ್ಲಿ ಪರಿಚಯಿಸಲು ಜೂನ್ 6 ರಂದು ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.
ಜೂನ್ 10 ರಂದು, ಆರೋಗ್ಯ ಇಲಾಖೆಯು ಮಾಲ್ಗಳು, ಹೋಟೆಲ್ಗಳು, ಕೆಲಸದ ಸ್ಥಳಗಳು ಮತ್ತು ಇತರ ಮುಚ್ಚಿದ ಸ್ಥಳಗಳಲ್ಲಿ ಮಾಸ್ಕ್ ಧರಿಸದವರಿಗೆ ಪ್ರವೇಶವನ್ನು ನಿರಾಕರಿಸಬೇಕು ಎಂದು ಆದೇಶವನ್ನು ಹೊರಡಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


