ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಸಿರಿಧಾನ್ಯ ಸಂಸ್ಕರಣಾ ಘಟಕಗಳ ಸ್ಥಾಪನೆ: ಮುಖ್ಯಮಂತ್ರಿ ಬೊಮ್ಮಾಯಿ
ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಸಿರಿಧಾನ್ಯ ಸಂಸ್ಕರಣಾ ಘಟಕಗಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ರಾಯಚೂರು: ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಸಿರಿಧಾನ್ಯ ಸಂಸ್ಕರಣಾ ಘಟಕಗಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಇಂದು ರಾಯಚೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಇಂದು ಆಯೋಜಿಸಿದ್ದ ಸಿರಿಧಾನ್ಯ ಮೇಳ 2022 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಿರಿಧಾನ್ಯ ಬ್ರಾಂಡ್ ಗಳನ್ನು ರೈತ ಉತ್ಪಾದಕ ಸಂಸ್ಥೆಗಳ ಮೂಲಕ ಮಾಡಬಹುದು. ಕೆಪೆಕ್ ಮೂಲಕ ರಫ್ತು ಮಾಡುವವರಿಗೆ ಪ್ರೋತ್ಸಾಹಕಗಳನ್ನು ನೀಡುವ ಉದ್ದೇಶದಿಂದ 50 ಕೋಟಿ ರೂ.ಗಳನ್ನು ಒದಗಿಸಿದೆ. ಅದರ ಉಪಯೋಗ ಪಡೆದು ರಫ್ತು ಮಾಡಲು ಕೆಪೆಕ್ ಮೂಲಕ ಎಲ್ಲಾ ಸಹಾಯ ಮತ್ತು ಸಹಕಾರವನ್ನು ಸರ್ಕಾರ ಮಾಡಲಿದೆ ಎಂದರು.
ಕಾಲ ಬದಲಾಗಿದೆ. ಅಕ್ಕಿ ಬೆಳೆಯುತ್ತಿದ್ದೇವೆ. ಅದೇ ನಮಗೆ ಆಹಾರವಾಗಿದೆ. ಆದರೆ ಆರೋಗ್ಯ ಗಮನಿಸಿದಾಗ ಕನಿಷ್ಠ ವಾಗಿಯಾದರೂ ಸಿರಿಧಾನ್ಯಗಳನ್ನು ಆಹಾರವಾಗಿ ಸೇವಿಸಬೇಕು. ರೈತರು ಸಿರಿಧಾನ್ಯಗಳನ್ನು ಮುಖ್ಯ ಆಹಾರವಾಗಿ ಬಳಸುತ್ತಿದ್ದರು.ಈಗ ಸರ್ಕಾರ ಕಾರ್ಯಕ್ರಮವನ್ನು ಮಾಡಿ ಬೆಳೆಸಲು ಉತ್ತೇಜನ ನೀಡುವ ಸ್ಥಿತಿಗೆ ನಾವು ಬಂದಿದ್ದೇವೆ. ಮಿಲೆಟ್ ಗಳ ಬಗ್ಗೆ ಅತಿ ದೊಡ್ಡ ರಾಯಭಾರಿಗಳು ನಾವು. ಕಳೆದ 30 ವರ್ಷಗಳಿಂದ ಸಿರಿಧಾನ್ಯಗಳನ್ನು ಬಳಕೆ ಮಾಡುತ್ತಿದ್ದೇನೆ.ಅನ್ನವನ್ನು ಊಟ ಮಾಡುವುದಿಲ್ಲ. ಹೀಗಾಗಿ ಸಿರಿಧಾನ್ಯಗಳನ್ನು ಅತ್ಯಂತ ಯಶಸ್ವಿ ಮಾಡಲು ನಾನು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತೇನೆ ಎಂದರು.
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಸಿರಿಧಾನ್ಯ
ಕಲ್ಯಾಣ ಕರ್ನಾಟಕ ಅರೆ ಒಣ ಪ್ರದೇಶ. ಜಾಹೀರಾಬಾದಿನಲ್ಲಿರುವ ಕೃಷಿ ಸಂಸ್ಥೆಯಲ್ಲಿ 108 ವರ್ಷದ ಜೋಳ, ನವಣೆ, ಸಾಮೆಗಳನ್ನು ಸಂರಕ್ಷಣೆ ಮಾಡಿದ್ದು, ರೈತರು ಹೇಗೆ ಬೆಳೆಯಬೇಕೆಂದು ತರಬೇತಿಯನ್ನು ನೀಡುತ್ತಾರೆ. ಇಂಥ 8 ಸಂಸ್ಥೆಗಳು ಜಗತ್ತಿನಲ್ಲಿದ್ದು, ಈ ಪೈಕಿ ಜಾಹೀರಾಬಾದಿನಲ್ಲಿದೆ. ಇಲ್ಲಿನ ಹವಾಮಾನಕ್ಕೆ ತಕ್ಕ ಬೆಳೆಗಳನ್ನು ಬೆಳೆಯಬೇಕು. ಇದಕ್ಕೆ ವಿಶೇಷ ಮಾರುಕಟ್ಟೆ ನಿರ್ಮಾಣ ಮಾಡುವುದು ಸರ್ಕಾರದ ಸಂಘ ಸಂಸ್ಥೆಗಳ ಕರ್ತವ್ಯ. ಮಾರುಕಟ್ಟೆ ನಿರ್ಮಾಣ ಮಾಡಲು ವಿಶೇಷ ಗಮನ ನೀಡಬೇಕು. ಮಾರುಕಟ್ಟೆಗೆ ಸಂಸ್ಕರಣಾ ಘಟಕಗಳು ಅಗತ್ಯವಿದೆ. ರಾಗಿ, ಸಾಮೆ, ನವಣೆ, ಬರಗು, ಉದುಲು, ಹಾರಕ, ಕೊರ್ಲ ಎಂಬ ಏಳು ಸಿರಿಧಾನ್ಯಗಳನ್ನು ಬೆಳೆಯುತ್ತೇವೆ. ಕಲ್ಯಾಣ ಕರ್ನಾಟಕದಲ್ಲಿ 7 ಜಿಲ್ಲೆಗಳಿವೆ. ಏಳು ಜಿಲ್ಲೆಗಳಲ್ಲಿ 7 ಸಿರಿಧಾನ್ಯಗಳನ್ನು ನಾವು ಬೆಳೆಸಬೇಕು. ಅದರ ಉತ್ಪಾದನೆ, ಇಳುವರಿ ಹೆಚ್ಚು ಮಾಡಿ ಗುಣಮಟ್ಟ ವನ್ನು ಸುಧಾರಿಸಬೇಕು. ರಾಯಚೂರು ಕರ್ನಾಟಕದ ಪ್ರಮುಖ ಸ್ಥಳ. ಇದರ ಸಮಗ್ರ ಅಭಿವೃದ್ಧಿ ಕೃಷಿಗೆ ನೇರವಾದ ಸಂಬಂಧವಿದೆ. ಬರುವ ತಿಂಗಳಲ್ಲಿ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ಹಾಕಲಾಗುವುದು.ಅದರೊಂದಿಗೆ ವಿಶೇಷವಾದ ಕೈಗಾರಿಕಾ ಪಾರ್ಕ್ ಇದೇ ವರ್ಷ ನಿರ್ಮಿಸಲಾಗುವುದು ಎಂದರು.
ರಾಯಚೂರಿನಲ್ಲಿ ಜವಳಿ ಪಾರ್ಕ್
ಕರ್ನಾಟಕದ ಜವಳಿ ನೀತಿಯಿಂದ ಪ್ರೋತ್ಸಾಹಕಗಳಿರುವ ಜವಳಿ ಪಾರ್ಕ್ ನಿರ್ಮಿಸಲಾಗುವುದು. ರಾಜ್ಯ ಸರ್ಕಾರದ ನೆರವಿನಿಂದ ರಾಯಚೂರಿನಲ್ಲಿ ಜವಳಿ ಪಾರ್ಕ್ ಸ್ಥಾಪಿಸಲಾಗುವುದು. ಬಳ್ಳಾರಿಯಲ್ಲಿ ಜೀನ್ಸ್ ತಯಾರಿಸುವ ಕಾರ್ಖಾನೆ ಇದೆ. ಉತ್ತಮ ಹತ್ತಿ ಬೆಳೆಯುವ ಕಾಲವಿತ್ತು. ರಫ್ತು ಮಾಡುವಂಥ ಹತ್ತಿ ಬೆಳೆಯಲಾಗುತ್ತಿತ್ತು. ಇದಕ್ಕೆ ಮಾರುಕಟ್ಟೆ ನಿರ್ಮಾಣ ಮಾಡುವ ಅವಶ್ಯಕತೆ ಇದೆ. ಆ ಕೆಲಸವನ್ನು ಮಾಡುತ್ತೇವೆ ಎಂದು ಸಿಎಂ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


