ಬೆಂಗಳೂರು: ಮೊಬೈಲ್ ಚಾರ್ಜರ್ ಕ್ಯಾಮೆರಾದಿಂದ ನಗ್ನ ಚಿತ್ರ ಶೂಟಿಂಗ್ ಮಾಡಿ ಮಹಿಳೆಗೆ ಬ್ಲ್ಯಾಕ್‌ಮೇಲ್; ಯುವಕ ಅರೆಸ್ಟ್
ಮಹಿಳೆ ಬಟ್ಟೆ ಬದಲಿಸುವ ವಿಡಿಯೋವನ್ನು ಸ್ಪೈ ಕ್ಯಾಮೆರಾದಲ್ಲಿ ಸೆರೆಹಿಡಿದು ದೈಹಿಕ ಸಂಬಂಧ ಹೊಂದುವಂತೆ ಮಹಿಳೆಯನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದ 30 ವರ್ಷದ ವ್ಯಕ್ತಿಯನ್ನು ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಮಹಿಳೆ ಬಟ್ಟೆ ಬದಲಿಸುವ ವಿಡಿಯೋವನ್ನು ಸ್ಪೈ ಕ್ಯಾಮೆರಾದಲ್ಲಿ ಸೆರೆಹಿಡಿದು ದೈಹಿಕ ಸಂಬಂಧ ಹೊಂದುವಂತೆ ಮಹಿಳೆಯನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದ 30 ವರ್ಷದ ವ್ಯಕ್ತಿಯನ್ನು ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ವಿ. ಮಹೇಶ್ (30) ಎಂಬಾತನನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರು ಜಿಲ್ಲೆಯ ಟಿ. ನರಸೀಪುರದ ಮಹೇಶ್, ಈಶಾನ್ಯ ವಿಭಾಗ ವ್ಯಾಪ್ತಿಯಲ್ಲಿ ವಾಸವಿದ್ದ ಮಹಿಳೆಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ.
ಮಹಿಳೆ ಹಾಗೂ ಅವರ ಕುಟುಂಬದವರನ್ನು ಮಾತನಾಡಿಸುವ ಸೋಗಿನಲ್ಲಿ ಆರೋಪಿ ಮನೆಗೆ ತೆರಳಿದ್ದ. ಮಹಿಳೆ ಮಲಗುತ್ತಿದ್ದ ಕೊಠಡಿ ಸ್ವಿಚ್ ಬೋರ್ಡ್‌ಗೆ ಮೊಬೈಲ್ ಜಾರ್ಜರ್ ಹಾಕಿ ವಾಪಸು ಹೋಗಿದ್ದ. ಇದೇ ಸಂದರ್ಭದಲ್ಲೇ ಮಹಿಳೆಯ ನಗ್ನ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಕೆಲ ದಿನ ಬಿಟ್ಟು ಮನೆಗೆ ಪುನಃ ತೆರಳಿದ್ದ ಆರೋಪಿ, ಚಾರ್ಜರ್ ತೆಗೆದುಕೊಂಡು ಹೋಗಿದ್ದ, ಈ ಬಗ್ಗೆ ತನಗೆ ಮಾಹಿತಿಯೇ ಇರಲಿಲ್ಲ ಎಂದು ತಿಳಿಸಿದ್ದಾರೆ.
ದೂರುದಾರ ಮಹಿಳೆಗೆ ಪರಿಚಯಸ್ಥನಾಗಿದ್ದ ಆರೋಪಿ, ಆಗಾಗ ಮನೆಗೂ ಬಂದು ಹೋಗುತ್ತಿದ್ದ. ಮಹಿಳೆ ಜೊತೆ ಲೈಂಗಿಕವಾಗಿ ಸಲುಗೆ ಬೆಳೆಸಿಕೊಳ್ಳಲು ಮುಂದಾಗಿದ್ದ. ಆದರೆ, ಮಹಿಳೆ ನಿರಾಕರಿಸಿದ್ದರು. ಇದರಿಂದ ಸಿಟ್ಟಾದ ಆರೋಪಿ, ಮಹಿಳೆಯ ನಗ್ನ ದೃಶ್ಯಗಳನ್ನು ಚಿತ್ರೀಕರಿಸಿಕೊಂಡು ಬ್ಲ್ಯಾಕ್‌ಮೇಲ್ ಮಾಡಲು ಸಂಚು ರೂಪಿಸಿದ್ದ ಎಂದು ತಿಳಿಸಿವೆ.
ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್ ಆ್ಯಪ್‌ನಲ್ಲಿ ನಕಲಿ ಖಾತೆ ತೆರೆದಿದ್ದ ಆರೋಪಿ, ಮಹಿಳೆಯ ಖಾತೆಗೆ ಸಂದೇಶ ಕಳುಹಿಸುತ್ತಿದ್ದ. ಅಪರಿಚಿತನ ಖಾತೆ ಆಗಿದ್ದರಿಂದ ಮಹಿಳೆ ಬ್ಲಾಕ್ ಮಾಡಿದ್ದರು. ಆರೋಪಿಯು ಮತ್ತೊಂದು ನಕಲಿ ಖಾತೆ ತೆರೆದು ಸಂದೇಶ ಕಳುಹಿಸಲಾರಂಭಿಸಿದ್ದ ಎಂದು ಪೊಲೀಸ್ ಮೂಲಗಳು ಹೇಳಿವೆ.
ನನ್ನ ಜೊತೆ ಲೈಂಗಿಕವಾಗಿ ಸಲುಗೆ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ, ನಿಮ್ಮ ನಗ್ನ ವಿಡಿಯೊಗಳು ನನ್ನ ಬಳಿ ಇವೆ. ಅವುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುತ್ತೇನೆ’ ಎಂದು ಆರೋಪಿ ಹೇಳಿದ್ದ. ಅದಕ್ಕೆ ತಲೆಕೆಡಿಸಿಕೊಳ್ಳದ ಮಹಿಳೆಯು ಸಂದೇಶಕ್ಕೆ ಉತ್ತರ ನೀಡಿರಲಿಲ್ಲ. ಇದರಿಂದ ಕೋಪಗೊಂಡ ಆರೋಪಿ, ನಗ್ನ ದೃಶ್ಯದ ತುಣುಕು ಕಳುಹಿಸಿದ್ದ. ಹೆದರಿದ್ದ ಮಹಿಳೆ, ಕುಟುಂಬದವರಿಗೆ ವಿಷಯ ತಿಳಿಸಿ ಠಾಣೆಗೆ ದೂರು ನೀಡಿದ್ದರು. ಮಹಿಳೆ ನೀಡಿದ್ದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಮೊಬೈಲ್ ಚಾರ್ಜರ್ ಮಾದರಿಯ ರಹಸ್ಯ ಕ್ಯಾಮೆರಾ, ಲ್ಯಾಪ್‌ಟಾಪ್, 2 ಮೆಮರಿ ಕಾರ್ಡ್, ಪೆನ್ ಡ್ರೈವ್ ಹಾಗೂ ಎರಡು ಮೊಬೈಲ್ ಜಪ್ತಿ ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


