ರಾಜ್ಯ

ಮಂಗಳೂರು: ಕೃಷ್ಣ ಜನ್ಮಾಷ್ಟಮಿ ಬ್ಯಾನರ್‌ನಲ್ಲಿ ಗೋಡ್ಸೆ, ಸಾವರ್ಕರ್ ಫೋಟೋ, ಪಾಲಿಕೆಯಿಂದ ತೆರವು

ರಾಜ್ಯದಲ್ಲಿ ಸಾವರ್ಕರ್ ಮತ್ತು ಗೋಡ್ಸೆ ಬ್ಯಾನರ್ ವಿವಾದ ತೀವ್ರವಾಗಿರುವ ಸಂದರ್ಭದಲ್ಲೇ ಮಂಗಳೂರಿನಲ್ಲಿ ಮತ್ತೊಂದು ಬ್ಯಾನರ್ ವಿವಾದ ಪ್ರತಿಧ್ವನಿಸಿದೆ.

ಮಂಗಳೂರು: ಕೃಷ್ಣ ಜನ್ಮಾಷ್ಟಮಿ ಬ್ಯಾನರ್‌ನಲ್ಲಿ ಗೋಡ್ಸೆ, ಸಾವರ್ಕರ್ ಫೋಟೋ, ಪಾಲಿಕೆಯಿಂದ ತೆರವು
ತೆರವುಗೊಳಿಸಿದ ಬ್ಯಾನರ್
Published On :

ಮಂಗಳೂರು: ರಾಜ್ಯದಲ್ಲಿ ಸಾವರ್ಕರ್ ಮತ್ತು ಗೋಡ್ಸೆ ಬ್ಯಾನರ್ ವಿವಾದ ತೀವ್ರವಾಗಿರುವ ಸಂದರ್ಭದಲ್ಲೇ ಮಂಗಳೂರಿನಲ್ಲಿ ಮತ್ತೊಂದು ಬ್ಯಾನರ್ ವಿವಾದ ಪ್ರತಿಧ್ವನಿಸಿದೆ. 

ಅಖಿಲ ಭಾರತ ಹಿಂದೂ ಮಹಾಸಭಾ ಕೃಷ್ಣ ಜನ್ಮಾಷ್ಟಮಿಗೆ ನಾಡಿನ ಜನತೆಗೆ ಶುಭಾಶಯ ಕೋರುವ ನಿಟ್ಟಿನಲ್ಲಿ ಹಾಕಲಾಗಿದ್ದ ಬ್ಯಾನರ್ ನಲ್ಲಿ ನಾಥೋರಾಮ್ ಗೋಡ್ಸೆ ಮತ್ತು ಸಾವರ್ಕರ್ ಫೋಟೋ ಇರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.  ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಹೆಸರಿನಲ್ಲಿ ಬ್ಯಾನರ್ ಹಾಕಲಾಗಿದೆ. ಮಂಗಳೂರಿನ ಸುರತ್ಕಲ್, ಬೈಕಂಪಾಡಿ, ಕೂಳೂರು ಭಾಗದಲ್ಲಿ ಬ್ಯಾನರ್ ಅಳವಡಿಸಲಾಗಿದೆ.

ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಶುಭಕೋರುವ ನೆಪದಲ್ಲಿ ಬ್ಯಾನರ್ ಹಾಕಲಾಗಿದೆ. ಈ ಬ್ಯಾನರ್‌ನಲ್ಲಿ ವಿನಾಯಕ ದಾಮೋದರ ಸಾವರ್ಕರ್ ಮತ್ತು ನಾಥುರಾಮ್ ಗೋಡ್ಸೆಯ ಫೋಟೋವನ್ನು ಹಾಕಲಾಗಿದೆ. ಅಲ್ಲದೇ ಬ್ಯಾನರ್‌ನಲ್ಲಿ "ರಾಜಕೀಯವನ್ನು ಹಿಂದುತ್ವಗೊಳಿಸಿ, ಹಿಂದೂಗಳನ್ನು ಸೈನಿಕೀಕರಣಗೊಳಿಸಿ" ಎಂಬ ಘೋಷ ವಾಕ್ಯವನ್ನು ನಮೂದಿಸಿದ್ದಾರೆ. ಬ್ಯಾನರ್‌ನಲ್ಲಿ ಹಿಂದೂ ಮಹಾಸಭಾದ ಪದಾಧಿಕಾರಿಗಳ ಫೋಟೋವನ್ನು ಕೂಡ ಹಾಕಲಾಗಿದೆ.

Story image

ಇದೀಗ ಈ ಬ್ಯಾನರ್‌ಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಮಹಾತ್ಮ ಗಾಂಧೀಜೀ ಅವರನ್ನು ಹತ್ಯೆ ಮಾಡಿದ ನಾಥುರಾಮ್ ಗೋಡ್ಸೆಯ ಫೋಟೋವನ್ನು ಹಾಕಿದ್ದು, ಉದ್ಧಟತನದ ಪರಮಾವಧಿ ಎನ್ನುವ ಮಾತುಗಳು ಎಲ್ಲೆಡೆ ಕೇಳಿಬರುತ್ತಿವೆ. ಕೂಡಲೇ ಈ ಬ್ಯಾನರ್ ಅನ್ನು ತೆರವುಗೊಳಿಸಿ. ಬ್ಯಾನರ್ ಹಾಕಿದ ಸಂಘಟನೆಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಕಾಂಗ್ರೆಸ್ ಒತ್ತಾಯಿಸಿದೆ.

ಈ ಬ್ಯಾನರ್ ತೀವ್ರ ವಿವಾದ ಸೃಷ್ಠಿಸಿದ ಹಿನ್ನಲೆಯಲ್ಲಿ ಪೊಲೀಸರು, ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಾಥುರಾಮ್ ಗೋಡ್ಸೆಯ ಫೋಟೋ ಹಾಕಿರುವುದು ಮತ್ತಷ್ಟು ಸಂಘರ್ಷಕ್ಕೆ ಆಸ್ಪದ ನೀಡುವ ಹಿನ್ನೆಲೆಯಲ್ಲಿ ಬ್ಯಾನರ್ ತೆರವುಗೊಳಿಸುವಂತೆ ಅಖಿಲ ಭಾರತ ಹಿಂದೂ ಮಹಾಸಭಾಗೆ ಸೂಚನೆ ನೀಡಿದ್ದಾರೆ. ಈ ಬಗ್ಗೆ ಹಿಂದೂಮಹಾಸಭಾ ಪ್ರತಿಕ್ರಿಯೆ ನೀಡಿದ್ದು, ಹಿಂದೂಮಹಾಸಭಾವನ್ನು ಆರಂಭಗೊಳಿಸಿರುವುದು ಸಾವರ್ಕರ್. ಅವರ ಚಿಂತನೆಗಳಿಗೆ ಪ್ರಭಾವಿತರಾದವರು ನಾಥುರಾಮ್ ಗೋಡ್ಸೆ. ಈ ಹಿನ್ನೆಲೆಯಲ್ಲಿ ಫೋಟೋವನ್ನು ಬ್ಯಾನರ್‌ನಲ್ಲಿ ಹಾಕಲಾಗಿದೆ ಎಂದಿದ್ದಾರೆ.

ದೂರು ಬಂದ ನಂತರ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರ ಆದೇಶದ ಮೇರೆಗೆ ಬ್ಯಾನರ್ ಗಳನ್ನು ತೆರವು ಮಾಡಲಾಗಿದೆ. ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಸುರತ್ಕಲ್‌ನಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ಸುರತ್ಕಲ್ ಮೇಲ್ಸೇತುವೆಯಲ್ಲಿ ಆಗಸ್ಟ್ 14 ರಂದು ಸಾವರ್ಕರ್ ಅವರ ಭಾವಚಿತ್ರವಿರುವ ಬ್ಯಾನರ್ ಪ್ರದರ್ಶಿಸಿ ಹಿಂದೂ ಮಹಾಸಭಾ ವಿವಾದಕ್ಕೆ ಕಾರಣವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.