ದೇಶದಲ್ಲಿ ಶೀಘ್ರವೇ 5ಜಿ ಸೇವೆ ಕಾರ್ಯಾರಂಭ: ನಿರ್ಮಲಾ ಸೀತಾರಾಮನ್
ದೇಶದಲ್ಲಿ ಶೀಘ್ರವೇ 5 ಜಿ ಸೇವೆ ಕಾರ್ಯಾರಂಭ ಮಾಡಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಹೇಳಿದ್ದಾರೆ.

ಬೆಂಗಳೂರು: ದೇಶದಲ್ಲಿ ಶೀಘ್ರವೇ 5 ಜಿ ಸೇವೆ ಕಾರ್ಯಾರಂಭ ಮಾಡಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಹೇಳಿದ್ದಾರೆ.
ಇಂದು ಬಿಜೆಪಿ ರಾಜ್ಯ ಆರ್ಥಿಕ ಪ್ರಕೋಷ್ಠದ ವತಿಯಿಂದ ಬೆಂಗಳೂರಿನ ಜೆಡಬ್ಲ್ಯೂ ಮ್ಯಾರಿಯೆಟ್ ಹೋಟೆಲ್‍ನಲ್ಲಿ “ವಿಶ್ವಗುರು ಭಾರತ” 100ನೇ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಪಕ್ಷದ ತತ್ವ, ಸಿದ್ಧಾಂತಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಇದು ಉತ್ತಮ ಕಾರ್ಯ. ಕರ್ನಾಟಕ ಬಿಜೆಪಿ ಆರ್ಥಿಕ ಪ್ರಕೋಷ್ಠದ ಈ ಸಾಧನೆ ಶ್ಲಾಘನಾರ್ಹ ಎಂದು ತಿಳಿಸಿದರು. ಇದು ಅನುಕರಣಾರ್ಹ ಎಂದು ಮೆಚ್ಚುಗೆ ಸೂಚಿಸಿದರು. 100ನೇ ಸಂಚಿಕೆ ಹಿನ್ನೆಲೆಯಲ್ಲಿ ಅಭಿನಂದನೆಗಳನ್ನು ಸಲ್ಲಿಸಿದರು.
ಇದೇ ವೇಳೆ ಕೇಂದ್ರ ಸರಕಾರದ ಸಾಧನೆಗಳನ್ನು ವಿವರಿಸಿದ ಅವರು, ಹಿಂದಿನ ಆಡಳಿತಗಳು 20 ಅಂಶಗಳ ಕಾರ್ಯಕ್ರಮ, ಗರೀಬಿ ಹಠಾವೋ ಮಾತುಗಳನ್ನಷ್ಟೇ ಆಡಿದವು. ಆದರೆ, ಅರ್ಹ ಫಲಾನುಭವಿಗಳ ವಿಚಾರದಲ್ಲಿ ನಿಗದಿತ ಗುರಿ ತಲುಪಲು ವಿಫಲವಾದವು. ಕುಡಿಯುವ ನೀರು, ಬಡವರಿಗೆ ಮನೆ ನೀಡುವ ವಿಚಾರ ಸೇರಿ ಅರ್ಹ ಫಲಾನುಭವಿಗಳಿಗೆ ವಿವಿಧ ಯೋಜನೆಗಳನ್ನು ತಲುಪಿಸಿದ ಸಂತಸ ನಮ್ಮ ಸರಕಾರದ್ದು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಾವು ಅರ್ಹ ಫಲಾನುಭವಿಗಳನ್ನು ತಲುಪಿದ್ದೇವೆ. ಪ್ರತಿ ನಾಗರಿಕರಿಗೆ ಮೂಲಸೌಕರ್ಯ ಕೊಡಲು ಸಾಧ್ಯವಾಗಿದೆ ಎಂದು ವಿಶ್ಲೇಷಿಸಿದರು.
ಪ್ರತಿ ನಾಗರಿಕರು ಕನಿಷ್ಠ ಮೂಲಸೌಕರ್ಯಕ್ಕೆ ಅರ್ಹರಿದ್ದು, ಅದನ್ನು ಕೊಡಲಾಗುತ್ತಿದೆ. ಬಳಿಕ ಅವರ ಸಶಕ್ತೀಕರಣದತ್ತ ಕೇಂದ್ರದ ಬಿಜೆಪಿ ಸರಕಾರ ಶ್ರಮಿಸುತ್ತಿದೆ. ತಂತ್ರಜ್ಞಾನ ಆಧರಿತ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಇದಕ್ಕೆ ಒಂದು ದೇಶ- ಒಂದೇ ಪಡಿತರಚೀಟಿ ಯೋಜನೆ ಸ್ಪಷ್ಟ ಉದಾಹರಣೆ ಎಂದು ತಿಳಿಸಿದರು.
ಪಿಎಂ ಜನಧನ್ ಯೋಜನೆ ಮೂಲಕ ಎಲ್ಲರೂ ಬ್ಯಾಂಕ್ ಖಾತೆ ತೆರೆಯುವಂತೆ ಮಾಡಲಾಯಿತು. ಆರ್ಥಿಕ ಒಳಗೊಳ್ಳುವಿಕೆಗೆ ಇದು ಪೂರಕವೆನಿಸಿತು. ಇದರಿಂದ ಅರ್ಹರಿಗೆ ನೇರ ಸೌಲಭ್ಯ ವರ್ಗಾವಣೆ(ಡಿಬಿಟಿ) ಸಾಧ್ಯವಾಯಿತು. ಆಧಾರ್ ಜೋಡಿಸಲು ಸಾಧ್ಯವಾಯಿತು. ಪಿಎಂ ಮುದ್ರಾ ಜಾರಿಗೊಳಿಸಲಾಯಿತು. ಮಹಿಳಾ ಸಶಕ್ತೀಕರಣವೂ ಇದರಿಂದ ಸಾಧ್ಯವಾಗಿದೆ ಎಂದರು. ‘ಮೋದಿ @ 20’ ಪುಸ್ತಕವನ್ನೂ ಅವರು ಭಾಷಣದಲ್ಲಿ ಪ್ರಸ್ತಾಪಿಸಿದರು.
ಪಿಎಂ ಸ್ವನಿಧಿ ಮೂಲಕ ಬೀದಿಬದಿ ವ್ಯಾಪಾರಿಗಳು ಬಡ್ಡಿರಹಿತ ಹಣ ಪಡೆದು ವ್ಯವಹಾರ ಮಾಡಲು ಸಾಧ್ಯವಾಗಿದೆ. ಸ್ಟಾರ್ಟಪ್ ಮೂಲಕ ಬೆಂಗಳೂರು ಮಹತ್ವದ ಸಾಧನೆ ಮಾಡಿದೆ. ದೇಶದೆಲ್ಲೆಡೆ ಉದ್ಯಮಶೀಲತೆಗೆ ಇದು ನೆರವಾಗಿದೆ ಎಂದು ಮೆಚ್ಚುಗೆ ಸೂಚಿಸಿದರು.
ಪಿಎಂ ಆವಾಸ್ ಯೋಜನೆ ಅತ್ಯಂತ ಜನಪ್ರಿಯವಾದುದು. ಆದರೆ, ಕೆಲ ರಾಜ್ಯಗಳಲ್ಲಿ ಇದನ್ನು ಬೇರೆ ಹೆಸರಿನೊಂದಿಗೆ ಜಾರಿಗೊಳಿಸಲಾಗುತ್ತಿದೆ ಎಂದ ಅವರು, ಸ್ವಚ್ಛತಾ ಯೋಜನೆ, ಎಂಎಸ್‍ಎಂಇಗಳಿಗೆ ಹಣಕಾಸು ನೆರವು ನೀಡಲಾಗಿದೆ. ಹಾಗೆಂದು ಮೂಲ ಅವಶ್ಯಕತೆಗಳೆನಿಸಿದ ರಸ್ತೆ, ವಿಮಾನನಿಲ್ದಾಣಗಳನ್ನು ನಮ್ಮ ಸರಕಾರ ಮರೆತಿಲ್ಲ. ಉಡಾಣ್ ಯೋಜನೆ ಜಾರಿಯಿಂದ 65 ಲಕ್ಷ ಜನರಿಗೆ ಪ್ರಯೋಜನವಾಗಿದೆ. ಜನರನ್ನು ಸಶಕ್ತೀಕರಣಗೊಳಿಸಬೇಕು ಎಂಬ ಚಿಂತನೆಯೊಂದಿಗೆ ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲೂ ಕಡಿಮೆ ಅಭಿವೃದ್ಧಿ ಹೊಂದಿದ ಜಿಲ್ಲೆಗಳ ಪ್ರಗತಿಗೆ ಆದ್ಯತೆ ಕೊಡಲಾಗಿದೆ ಎಂದು ವಿವರಿಸಿದರು.
ರಾಜಕೀಯ ಲಾಭ ದೂರವಿಟ್ಟು ಅಭಿವೃದ್ಧಿಗೆ ನೇರ ಅನುದಾನ ಕೊಡಲಾಗಿದೆ. ದೇಶದ ಪ್ರತಿ ಪಂಚಾಯತ್ ಮಟ್ಟಕ್ಕೆ ಆಪ್ಟಿಕಲ್ ಫೈಬರ್ ಸಂಪರ್ಕ ತಲುಪಿದ್ದು, ಇದು ಶಿಕ್ಷಣ, ಆರೋಗ್ಯ ಸುಧಾರಣೆಗೆ ನೆರವಾಗುತ್ತಿದೆ. ದೇಶದಲ್ಲಿ 5 ಜಿ ಸೇವೆ ಶೀಘ್ರವೇ ಕಾರ್ಯಾರಂಭ ಮಾಡಲಿದೆ. ಹರಾಜು ಈಗಾಗಲೇ ಮುಗಿದಿದೆ ಎಂದರಲ್ಲದೆ, ಅಮೃತ ಕಾಲದತ್ತ ನಾವು ಮುನ್ನಡೆಯುತ್ತಿದ್ದೇವೆ ಎಂದು ವಿವರಿಸಿದರು.
8 ಕೋಟಿ ಅರ್ಹ ಬಡಜನರಿಗೆ ಉಚಿತ ಎಲ್‍ಪಿಜಿ ಗ್ಯಾಸ್ ಸಿಲಿಂಡರ್ ಸಂಪರ್ಕ ಕೊಡಲಾಗಿದೆ. ಇನ್ನೂ ಒಂದು ಕೋಟಿ ಜನರಿಗೆ ಆ ಸೌಲಭ್ಯ ಸಿಗಲಿದೆ. ಭವಿಷ್ಯದ 25 ವರ್ಷಗಳ ಸವಾಲನ್ನು ಎದುರಿಸಲು ಭಾರತ ಸಿದ್ಧಗೊಂಡಿದೆ. ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಅಸಾಧಾರಣ ಸಾಧನೆ ಮಾಡಿದೆ ಎಂದರು.
ಸಾರ್ವಜನಿಕ ವಲಯದ ಬ್ಯಾಂಕ್‍ಗಳು ಇದೀಗ ಅತ್ಯುತ್ತಮ ಸ್ಥಿತಿಗೆ ತಲುಪಿವೆ; ಲಾಭ ಮಾಡುತ್ತಿವೆ. ಬ್ಯಾಂಕ್ ಹಣ ಲೂಟಿ ಮಾಡಿದವರ ಆಸ್ತಿಯನ್ನು ಹರಾಜು ಹಾಕಿ ಹಣ ಪಡೆದು ಬ್ಯಾಂಕ್‍ಗಳಿಗೆ ಕೊಡಲಾಗುತ್ತಿದೆ. ಲೂಟಿ ಮಾಡಿದವರನ್ನು ಹಾಗೇ ಬಿಡುವ ಪ್ರವೃತ್ತಿಗೆ ವಿದಾಯ ಹೇಳಲಾಗಿದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


