ರಾಜ್ಯ

ರೈತರಿಂದ ಭಾರತ್ ಬಂದ್'ಗೆ ಕರೆ: ನಾಳೆ ಏನಿರುತ್ತೆ, ಏನಿರಲ್ಲ? ಇಲ್ಲಿದೆ ಮಾಹಿತಿ...

ಕೊರೋನಾ ಸಾಂಕ್ರಾಮಿಕ ರೋಗದ ಸಂಕಷ್ಟ, ಲಾಕ್‌ಡೌನ್‌ ಹೊಡೆತ ಎಲ್ಲ ಮುಗಿಯಿತು ಎನ್ನುವಷ್ಟರದಲ್ಲಿ ಕೊರೋನಾ ಮೂರನೇ ಅಲೆಯ ಜೊತೆಗೆ ದುಬಾರಿಯಾದ ಪೆಟ್ರೋಲ್‌, ಡೀಸೆಲ್, ಅನಿಲ ದರ, ಆಹಾರ ಸಾಮಾಗ್ರಿಗಳ ಬೆಲೆ ಏರಿಕೆಯಿಂದಾಗಿ ಜನರು ದುಡಿದ ಹಣ ಹೊಟ್ಟೆಗೆ ಸಾಕಾಗುತ್ತಿಲ್ಲ...

ರೈತರಿಂದ ಭಾರತ್ ಬಂದ್'ಗೆ ಕರೆ: ನಾಳೆ ಏನಿರುತ್ತೆ, ಏನಿರಲ್ಲ? ಇಲ್ಲಿದೆ ಮಾಹಿತಿ...
ಸಂಗ್ರಹ ಚಿತ್ರ
Published On :

ಬೆಂಗಳೂರು: ಕೊರೋನಾ ಸಾಂಕ್ರಾಮಿಕ ರೋಗದ ಸಂಕಷ್ಟ, ಲಾಕ್‌ಡೌನ್‌ ಹೊಡೆತ ಎಲ್ಲ ಮುಗಿಯಿತು ಎನ್ನುವಷ್ಟರದಲ್ಲಿ ಕೊರೋನಾ ಮೂರನೇ ಅಲೆಯ ಜೊತೆಗೆ ದುಬಾರಿಯಾದ ಪೆಟ್ರೋಲ್‌, ಡೀಸೆಲ್, ಅನಿಲ ದರ, ಆಹಾರ ಸಾಮಾಗ್ರಿಗಳ ಬೆಲೆ ಏರಿಕೆಯಿಂದಾಗಿ ಜನರು ದುಡಿದ ಹಣ ಹೊಟ್ಟೆಗೆ ಸಾಕಾಗುತ್ತಿಲ್ಲ. ಈ ಕುರಿತು ಜನರ ಆಕ್ರೋಶ ಒಂದೆಡೆಯಾದರೆ, ಮತ್ತೊಂದೆಡೆ ಅನ್ನದಾತರೂ ಸರ್ಕಾರದ ನೀತಿ ವಿರುದ್ಧ ಭಾರತ್ ಬಂದ್'ಗೆ ಕರೆ ನೀಡಿದ್ದಾರೆ.

ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಸಂಘಟನೆಗಳು ನಾಳೆ ಭಾರತ್‌ ಬಂದ್‌ಗೆ ಕರೆ ಕೊಟ್ಟಿದೆ. ಆದರೆ, ಈ ಭಾರತ್‌ ಬಂದ್ ಯಶಸ್ಸು ಕಾಣುವ ಸಾಧ್ಯತೆಗಳು ಕಡಿಮೆ ಇದೆ ಎಂದು ಹೇಳಳಾಗುತ್ತಿದೆ.

ಏಕೆಂದರೆ, ಈಗಾಗಲೇ ಕೊವಿಡ್ ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡಿದ್ದು, ಈಗಷ್ಟೇ ಜನಜೀವನ ಸಾಮಾನ್ಯಕ್ಕೆ ತಿರುಗಿದೆ. ಸಾಕಷ್ಟು ಸಂಘಟನೆಗಳು ರೈತರಿಗೆ ನೈತಿಕ ಬೆಂಬಲ ನೀಡುವುದಾಗಿ ಹೇಳುತ್ತಿವೆ. ಆದರೆ, ಬಂದ್'ಗೆ ಆಸಕ್ತಿ ತೋರುತ್ತಿಲ್ಲ. 

ರೈತರು ಕರೆ ಕೊಟ್ಟಿರೋ ಬಂದ್‌ಗೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ನೈತಿಕ ಬೆಂಬಲ ನೀಡಿದ್ದು, ಸಂಪೂರ್ಣ ಬೆಂಬಲ ನೀಡಿಲ್ಲ. ಹೀಗಾಗಿ ನಾಳೆ ಎಂದಿನಂತೆ ಹೋಟೆಲ್ ಓಪನ್ ಇರಲಿದೆ. ಅಲ್ಲದೇ, ಕೆಎಸ್ಆರ್'ಟಿಸಿ ಮತ್ತು ಬಿಎಂಟಿಸಿ ನೌಕರರ ಸಂಘವೂ ಬಂದ್‌ನಿಂದ ದೂರ ಉಳಿದಿದ್ದು, ಎಂದಿನಂತೆ ಬಸ್ ಓಡಿಸಲು ನೌಕರರು ನಿರ್ಧರಿಸಿದ್ದಾರೆ. ಅಲ್ಲದೇ ಲಾರಿ ಮಾಲೀಕರ ಸಂಘಟನೆ ಕೂಡಾ ನೈತಿಕ ಬೆಂಬಲವಷ್ಟೇ ನೀಡಿದ್ದು, ನಾಳೆ ಎಂದಿನಂತೆ ಲಾರಿಗಳನ್ನ ರಸ್ತೆಗಿಳಿಸಲು ತೀರ್ಮಾನಿಸಿದೆ. ನಮ್ಮ ಮೆಟ್ರೋ ಕೂಡಾ ಎಂದಿನಂತೆ ಸಂಚರಿಸಲಿದೆ. ರಾಜ್ಯ ಟ್ಯಾಕ್ಸಿ ಮಾಲೀಕರ ಸಂಘಟನೆಯೂ ಬಂದ್‌ಗೆ ಬೆಂಬಲ ನೀಡಿಲ್ಲ. ಹೀಗಾಗಿ ಓಲಾ ಉಬರ್ ಸೇರಿ ಎಲ್ಲಾ ರೀತಿಯ ಟ್ಯಾಕ್ಸಿಗಳು ಸಂಚರಿಸಲಿವೆ.

ಆಟೋ ಡ್ರೈವರ್ಸ್ ಯೂನಿಯನ್ ಮತ್ತು ಆಟೋ ಚಾಲಕರ ಸಂಘವೂ ನೈತಿಕ ಬೆಂಬಲವಷ್ಟೇ ನೀಡಿದ್ದು, ನಾಳೆ ಆಟೋ ಸಂಚಾರ ಇರಲಿದೆ. ಬೀದಿಬದಿ ವ್ಯಾಪಾರಿಗಳು ಕೂಡಾ ಕೊರೋನಾದಿಂದ ಕಂಗೆಟ್ಟು ಹೋಗಿದ್ದು, ಮತ್ತೊಂದು ಬಂದ್‌ ಮಾಡೋಕೆ ಆಸಕ್ತಿ ತೋರುತ್ತಿಲ್ಲ. 

ಇನ್ನು ಮಕ್ಕಳು ವರ್ಷದ ಬಳಿಕ ಶಾಲೆಗಳ ಮುಖ ನೋಡುತ್ತಿದ್ದು, ಮಕ್ಕಳ ಶಿಕ್ಷಣದ ದೃಷ್ಟಿಯಿಂದ ಶಾಲಾ ಕಾಲೇಜು ಬಂದ್‌ ಮಾಡದೇ ಇರಲು ಖಾಸಗಿ ಶಾಲಾ-ಕಾಲೇಜುಗಳ ಒಕ್ಕೂಟ ನಿರ್ಧರಿಸಿದೆ. 

ಬೆಂಗಳೂರು ವಕೀಲರ ಸಂಘಟನೆಯೂ ನೈತಿಕ ಬೆಂಬಲ ನೀಡಿದ್ದು, ಕೋರ್ಟ್‌ ಕಲಾಪಗಳು ಎಂದಿನಂತೆ ನಡೆಯಲಿವೆ. ರೈತರ ಹೋರಾಟಕ್ಕೆ ಕರವೇ ನಾರಾಯಣಗೌಡ ಬಣವೂ ಕೂಡಾ ನೈತಿಕ ಬೆಂಬಲ ನೀಡಿದ್ದು, ಬಂದ್‌ನಲ್ಲಿ ಭಾಗವಹಿಸುತ್ತಿಲ್ಲ ಎಂದು ತಿಳಿದುಬಂದಿದೆ. 

ಈಗಷ್ಟೇ ಕೊರೋನಾದಿಂದ ಪರಿಸ್ಥಿತಿ ಸುಧಾರಿಸುತ್ತಿದ್ದು, ಬಂದ್ ನಿಂದ ಮತ್ತೆ ಸಂಕಷ್ಟ ಎದುರಾಗಲಿದೆ. ಹೀಗಾಗಿ ಮತ್ತೆ ಬಂದ್ ಬೇಡ ಎಂದು ಸಾಕಷ್ಟು ಸಂಘಟನೆಯ ಮುಖಂಡರು ಹೇಳುತ್ತಿದ್ದಾರೆ. 

ಇನ್ನುಳಿದಂತೆ, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಕಬ್ಬು ಬೆಳೆಗಾರರ ಸಂಘ, ದಲಿತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳ ಯೂನಿಯನ್, ಗ್ರಾಮೀಣ ಬ್ಯಾಂಕ್ ನೌಕರರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಮತ್ತು ಎಪಿಎಂಸಿ ವರ್ತಕರ ಸಂಘದವರು ಮಾತ್ರ ಬಂದ್‌ಗೆ ಬೆಂಬಲ ನೀಡಿದ್ದಾರೆ. 

ಹೆದ್ದಾರಿ ತಡೆಯಲು ಪ್ರತಿಭಟನಾಕಾರರು ಯೋಜನೆಗಳನ್ನು ರೂಪಿಸಿದ್ದಾರೆ. ಆದರೆ, ರಸ್ತೆ ತಡೆಗೆ ಅವಕಾಶ ಕೊಡುವುದಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಹೇಳಿದ್ದಾರೆ. 

ಸೋಮವಾರ ರಾಜಧಾನಿಯಲ್ಲಿ ರೈತ ಪರ ಸಂಘಟನೆಗಳಿಂದ ಪ್ರತಿಭಟನೆ, ಮೆರವಣಿಗೆ, ಹೆದ್ದಾರಿ ಬಂದ್​ಗೆ ಸಿದ್ಧತೆ ನಡೆದಿದೆ. 

ನಾಳೆ ಬೆಳಗ್ಗೆ 11 ಗಂಟೆಗೆ ಟೌನ್ ಹಾಲ್​ನಿಂದ ಮೈಸೂರು ಬ್ಯಾಂಕ್ ಸರ್ಕಲ್‌ ವರೆಗೆ ರೈತರಿಂದ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಲಿದೆ. ಕೆ.ಆರ್. ಮಾರುಕಟ್ಟೆಯಿಂದ ಟೌನ್ ಹಾಲ್​​ವರಗೆ ಸಾವಿರಾರು ರೈತರು ಜಾಥಾ ನಡೆಸಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.