ಕೋವಿಡ್-19: ರಾಜ್ಯದ 4 ಜಿಲ್ಲೆಗಳಲ್ಲಿ ಶೇ.99 ತಲುಪಿದ ಚೇತರಿಕೆ ಪ್ರಮಾಣ!
ರಾಜ್ಯದ ಬಾಗಲಕೋಟೆ, ಚಿತ್ರದುರ್ಗ, ರಾಯಚೂರು ಮತ್ತು ಯಾದಗಿರಿಯಲ್ಲಿ ಚೇತರಿಕೆ ದರ ಶೇ.99ಕ್ಕೆ ತಲುಪಿದೆ.

ಬೆಂಗಳೂರು: ರಾಜ್ಯದ ಬಾಗಲಕೋಟೆ, ಚಿತ್ರದುರ್ಗ, ರಾಯಚೂರು ಮತ್ತು ಯಾದಗಿರಿಯಲ್ಲಿ ಚೇತರಿಕೆ ದರ ಶೇ.99ಕ್ಕೆ ತಲುಪಿದೆ,
ಇದು ರಾಜ್ಯದ ಸರಾಸರಿ ಶೇ.98 ಗಿಂತ ಹೆಚ್ಚಾಗಿದೆ. ವಾರ್ ರೂಮ್ ನೀಡಿರುವ ಮಾಹಿತಿಗಳ ಪ್ರಕಾರ ಸೆಪ್ಟೆಂಬರ್ 23ರ ವೇಳೆಗೆ, ರಾಜ್ಯದಲ್ಲಿ ಅತಿ ಹೆಚ್ಚು ಚೇತರಿಕೆ ದರ ಹೊಂದಿರುವ ಜಿಲ್ಲೆ ಯಾದಗಿರಿ, ಶೇ.99.24, ರಾಯಚೂರು ಶೇ99.16, ಚಿತ್ರದುರ್ಗ ಶೇ.99.09 ಮತ್ತು ಬಾಗಲಕೋಟೆ ಶೇ.99.03 ಎಂದು ತಿಳಿದುಬಂದಿದೆ.
ಗುಣಮುಖರ ಜೊತೆಗೆ ಈ ನಾಲ್ಕು ಜಿಲ್ಲೆಗಳಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಕೂಡ ಕಡಿಮೆಯಾಗಿರುವುದು ಕಂಡು ಬಂದಿದೆ. ಯಾದಗಿರಿಯಲ್ಲಿ ನಿನ್ನೆ ಎರಡು ಪ್ರಕರಣಗಳು ಪತ್ತೆಯಾಗಿದ್ದರೆ, ಬಾಗಲಕೋಟೆಯಲ್ಲಿ 4, ರಾಯಚೂರು 5 ಪ್ರಕರಣಗಳು ಮತ್ತು ಚಿತ್ರದುರ್ಗದಲ್ಲಿ 41 ಪ್ರಕರಣಗಳು ವರದಿಯಾಗಿವೆ. ಸಕ್ರಿಯ ಪ್ರಕರಣಗಳೂ ಕೂಡ ಈ ಜಿಲ್ಲೆಯಲ್ಲಿ ಕಡಿಮೆಯಾಗಿವೆ. ಯಾದಗಿರಿಯಲ್ಲಿ ಮೂರು ಸಕ್ರಿಯ ಪ್ರಕರಣಗಳಿದ್ದರೆ, ಬಾಗಲಕೋಟೆ 10 , ರಾಯಚೂರಿನಲ್ಲಿ 7 ಮತ್ತು ಚಿತ್ರದುರ್ಗದಲ್ಲಿ 129 ಸಕ್ರಿಯ ಪ್ರಕರಣಗಳಿದೆ ಎಂದು ತಿಳಿದುಬಂದಿದೆ.
ಈ ಜಿಲ್ಲೆಗಳಲ್ಲಿ ಕಳೆದ ಏಳು ದಿನಗಳಿಂದೆ ಸಕ್ರಿಯ ಪ್ರಕರಣಗಳ ದರ ಕಡಿಮೆಯಾಗಿರುವುದು ವರದಿಯಾಗಿದೆ. ರಾಜ್ಯದ ಸರಾಸರಿ ಶೇ.0.65 ಆಗಿದ್ದರೆ, ಹಾವೇರಿಯಲ್ಲಿ ಶೇ.0.02 ಕಡಿಮೆ ದರವಿದೆ, ನಂತರ ಯಾದಗಿರಿ, ಬಾಗಲಕೋಟೆ ಮತ್ತು ರಾಯಚೂರು ಶೇ.0.04 ಮತ್ತು ಚಿತ್ರದುರ್ಗ ಶೇ.0.42 ಇರುವುದು ಕಂಡು ಬಂದಿದೆ.
ಅತೀ ಹೆಚ್ಚು ಚೇತರಿಕೆಯ ದರ ಹೊಂದಿರುವ ಯಾದಗಿರಿಯ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಇಂದುಮತಿ ಅವರು ಮಾತನಾಡಿ, “ನಮ್ಮ ಜಿಲ್ಲೆಯಲ್ಲಿ ವರದಿಯಾಗುತ್ತಿರುವ ಸೋಂಕು ಪ್ರಕರಣಗಳು ತೀವ್ರಗತಿಯಿಂದ ಕೂಡಿಲ್ಲ. ಸೋಂಕು ಪ್ರಕರಣ ಮೇಲೆ ಹೆಚ್ಚಿನ ಕಣ್ಗಾವಲಿರಿಸಲಾಗಿದೆ. ಒಂದು ಸೋಂಕು ಪ್ರಕರಣ ವರದಿಯಾಗುತ್ತಿದ್ದಂತೆಯೇ ಸಂಪರ್ಕಿತರನ್ನು ಪತ್ತೆಹಚ್ಚುವ ಕೆಲಸ ಮಾಡಲಾಗುತ್ತಿದೆ. ಬಳಿಕ ಅವರನ್ನು ಕ್ವಾರಂಟೈನ್ ನಲ್ಲಿ ಇರಿಸುತ್ತಿದ್ದೇವೆ. ಅಗತ್ಯ ಇರುವವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸುವ ಕೆಲಸ ಮಾಡಲಾಗುತ್ತಿದೆ. ಸಾಂಕ್ರಾಮಿಕ ರೋಗ ಎದುರಾದಾಗಿನಿಂದಲೂ ಜಿಲ್ಲೆಯಲ್ಲಿ 207 ಕೋವಿಡ್ ಸಾವುಗಳು ಸಂಭವಿಸಿವೆ. ಪರಿಸ್ಥಿತಿ ಹದಗೆಟ್ಟಿಲ್ಲ. ಜಿಲ್ಲೆ ಚಿಕ್ಕದಾಗಿರುವುದರಿಂದ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗುತ್ತಿಲ್ಲ ಎಂದಿದ್ದಾರೆ.
ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳಿಗಿಂತಲೂ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ಚೇತರಿಕೆ ದರ ಹೆಚ್ಚಾಗಿದೆ. ಪ್ರಕರಣ ಕಡಿಮೆಯಾಗುತ್ತಿರುವುದು ಆರೋಗ್ಯ ಸಿಬ್ಬಂದಿಗಳ ಮೇಲಿನ ಒತ್ತಡ ಕಡಿಮೆಯಾದಂತಾಗಿದೆ. ಸೋಂಕು ತಗುಲಿದ ಜನರು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಶೀಘ್ರಗತಿಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಲಸಿಕೆ ಕೂಡ ಚೇತರಿಕೆ ದರ ಏರಿಕೆಯಾಗಲು ಸಹಾಯಕವಾಗಿದೆ. ಜನರು ಗಂಭೀರ ಸ್ಥಿತಿಗೆ ತಲುಪದಿರಲು ಸಹಾಯ ಮಾಡುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


