ರಾಜ್ಯದ 7 ಜಿಲ್ಲೆಗಳ ಬಿಸಿಯೂಟದ ಜೊತೆಗೆ ಮೊಟ್ಟೆ ಸೇರ್ಪಡೆ
ಶಾಲಾ ಮಕ್ಕಳಿಗೆ ನೀಡುವ ಬಿಸಿಯೂಟದ ಜೊತೆಗೆ ಕೊನೆಗೂ ಮೊಟ್ಟೆಯನ್ನು ಸೇರ್ಪಡೆಗೊಳಿಸಲಾಗಿದೆ.

ಬೆಂಗಳೂರು: ಶಾಲಾ ಮಕ್ಕಳಿಗೆ ನೀಡುವ ಬಿಸಿಯೂಟದ ಜೊತೆಗೆ ಕೊನೆಗೂ ಮೊಟ್ಟೆಯನ್ನು ಸೇರ್ಪಡೆಗೊಳಿಸಲಾಗಿದೆ.
ಹೆಚ್ಚು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿರುವ ಆಯ್ದ ಜಿಲ್ಲೆಗಳ ಬಿಸಿಯೂಟದಲ್ಲಿ ಮೊಟ್ಟೆ ಸೇರ್ಪಡೆಗೊಳಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಪ್ರಸಕ್ತ ಸಾಲಿನಿಂದ 7 ಜಿಲ್ಲೆಗಳ 46 ಶಾಲೆಗಳ ಮಧ್ಯಾಹ್ನ ಊಟದಲ್ಲಿ ಮೊಟ್ಟೆ ಸೇರ್ಪಡೆಗೊಳಿಸಲಾಗುತ್ತಿದ್ದು, 14,44,322 ಮಕ್ಕಳಿಗೆ ಮೊಟ್ಟೆ ಲಭ್ಯವಾಗಲಿದೆ.
ಬಿಸಿಯೂಟದಲ್ಲಿ ಮೊಟ್ಟೆ ಸೇರ್ಪಡೆಗೊಳಿಸುವಂತೆ ಹಲವು ವರ್ಷಗಳಿಂದ ಪೌಷ್ಟಿಕತಜ್ಞರು ಬೇಡಿಕೆ ಇಟ್ಟಿದ್ದರು. ವರ್ಷದ ಬಳಿಕ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಇದೀಗ ಸರ್ಕಾರ 1-8 ತರಗತಿಯ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳ ಬಿಸಿಯೂಟದಲ್ಲಿ ಮೊಟ್ಟೆ ಸೇರ್ಪಡೆಗೊಳಿಸಲು ಮುಂದಾಗಿದೆ.
ಕಾರ್ಯಕ್ರಮದ ಸಂಪೂರ್ಣ ವೆಚ್ಚವನ್ನು ಫ್ಲೆಕ್ಸಿಫಂಡ್ ಅಡಿಯಲ್ಲಿ ಕೇಂದ್ರ ಸರ್ಕಾರವೇ ಭರಿಸಲಿದ್ದು, ಪ್ರಸಕ್ತ ಸಾಲು ರೂ.3,953.14 ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾತನಾಡಿ, ಆರಂಭಿಕ ಹಂತದಲ್ಲಿ ಎರಡು ಜಿಲ್ಲೆಗಳ ಶಾಲೆಗಳಲ್ಲಿ ಕಾರ್ಯಕ್ರಮ ಆರಂಭಿಸಲು ಇಲಾಖೆ ಅನುಮತಿ ಕೇಳಿತ್ತು. ಆದರೆ, ಕೇಂದ್ರ ಸರ್ಕಾರ 7 ಜಿಲ್ಲೆಗಳಲ್ಲಿ ಆರಂಭಿಸುವಂತೆ ಸೂಚಿಸಿದೆ. ಆದರೆ, ಶಿಕ್ಷಣ ಇಲಾಖೆ ಈ ಜಿಲ್ಲೆಗಳಲ್ಲಿ 236 ದಿನಗಳ ಬದಲಿಗೆ 46 ದಿನಗಳು ಮಾತ್ರ ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡಲಿದೆ ಎಂದು ಹೇಳಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಅನ್ಬು ಕುಮಾರ್ ಅವರು ಮಾತನಾಡಿ, ಯಾದಗಿರಿ, ರಾಯಚೂರು, ಬೀದರ್, ಬಳ್ಳಾರಿ, ಕಲಬುರಗಿ, ಕೊಪ್ಪಳ ಹಾಗೂ ವಿಜಯಪುರ ಜಿಲ್ಲೆಯ ಶಾಲೆಗಳ ಬಿಸಿಯೂಟದಲ್ಲಿ ಮೊಟ್ಟೆಯನ್ನು ಸೇರ್ಪಡೆಗೊಳಿಸಲಾಗುತ್ತಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಕಾರ್ಯದರ್ಶಿ ಅನಿತಾ ಕರ್ವಾಲ್ ಅವರೊಂದಿಗಿನ ಇಲಾಖಾ ಸಭೆ ನಡೆದಿದ್ದು, ಸಭೆಯಲ್ಲಿ ರಕ್ತಹೀನತೆ ಹೆಚ್ಚಾಗಿರುವ ಮತ್ತು ಅಪೌಷ್ಟಿಕತೆ ಹೆಚ್ಚಿರುವ ಜಿಲ್ಲೆಗಳಲ್ಲಿ ಪೂರಕ ಪೌಷ್ಠಿಕಾಂಶವುಳ್ಳ ಆಹಾರ ಒದಗಿಸುವಂತೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.
ಧಾರವಾಡ ಹಾಗೂ ಕಲಬುರಗಿ ಜಿಲ್ಲೆಯ ಶಿಕ್ಷಣಾಧಿಕಾರಿಗಳು ಶೀಘ್ರದಲ್ಲೇ ತಮಿಳುನಾಡು ರಾಜ್ಯಕ್ಕೆ ಭೇಟಿ ನೀಡಲಿದ್ದು, ಈ ವೇಳೆ ಅಲ್ಲಿನ ಅಪೌಷ್ಟಿಕತೆ ದೂರಾಗಿಲು ಅಲ್ಲಿ ಕೈಗೊಂಡಿರುವ ಕಾರ್ಯಕ್ರಮಗಳನ್ನು ಅಧ್ಯಯನ ನಡೆಸಲಿದ್ದಾರೆ. ದಿನ ಕಳೆದಂತೆ ಮೊಟ್ಟೆ ವಿತರಣೆಯನ್ನು 150 ದಿನಕ್ಕೆ ಹೆಚ್ಚಿಸಲಾಗುತ್ತದೆ. 9-10ನೇ ತರಗತಿಯ ಮಕ್ಕಳ ಬಿಸಿಯೂಟದಲ್ಲಿ ಮೊಟ್ಟ ಸೇರ್ಪಡೆಗೊಳಿಸುವ ಸೂಚನೆಗಳಿಲ್ಲ ಎಂದು ತಿಳಿದುಬಂದಿದೆ.
ಸಸ್ಯಾಹಾರಿ ಆಯ್ಕೆ ಕುರಿತಂತೆಯೂ ಸರ್ಕಾರ ಚಿಂತನೆ ನಡೆಸಿದ್ದು, ಇದಕ್ಕಾಗಿ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್)ದ ಸಲಹೆ ಹಾಗೂ ಆಯ್ಕೆಯನ್ನು ಕೋರಿದ್ದು, ಈ ಕುರಿತು ಯಾವುದೇ ಪ್ರತಿಕ್ರಿಯೆಗಳು ಬಾರದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು ಸ್ಥಳೀಯ ಅಭಿರುಚಿಯ ಆಧಾರದ ಮೇಲೆ ಎನರ್ಜಿ ಬಾಲ್ ಗಳನ್ನು ಅಥವಾ ಪರ್ಯಾಯ ಆಹಾರ ಪದಾರ್ಥಗಳ ಸೇರ್ಪಡೆಗೊಳಿಸಲು ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


