ಕೊಡಗಿನಲ್ಲಿ ನೈತಿಕ ಪೊಲೀಸ್ ಗಿರಿಯ 2 ಪ್ರಕರಣಗಳು ವರದಿ: ಎಫ್ಐಆರ್ ದಾಖಲು
ಕೊಡಗಿನಲ್ಲಿ ನೈತಿಕ ಪೊಲೀಸ್ ಗಿರಿಯ 2 ಪ್ರಕರಣಗಳು ವರದಿಯಾಗಿದ್ದು, ಸೋಮವಾರಪೇಟೆ ತಾಲ್ಲೂಕಿನ ಮಾದಪುರ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ಕೊಡಗು: ಕೊಡಗಿನಲ್ಲಿ ನೈತಿಕ ಪೊಲೀಸ್ ಗಿರಿಯ 2 ಪ್ರಕರಣಗಳು ವರದಿಯಾಗಿದ್ದು, ಸೋಮವಾರಪೇಟೆ ತಾಲ್ಲೂಕಿನ ಮಾದಪುರ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಎರಡು ಪ್ರತ್ಯೇಕ ಪ್ರಕರಣಗಳು ಇದಾಗಿದ್ದು, ತನಿಖೆ ಪ್ರಗತಿಯಲ್ಲಿದ್ದು ಈ ವರೆಗೂ ಯಾರನ್ನೂ ಬಂಧಿಸಲಾಗಿಲ್ಲ.
ಸೋಮವಾರ ಬೆಳಿಗ್ಗೆ ಗರಗಂದೂರು ನಿವಾಸಿ ರಶೀದ್ (23), "ನಾನು ಸ್ನೇಹಿತರೊಂದಿಗೆ ಮಾದಪುರದಲ್ಲಿರುವ ತನ್ನ ನಿವಾಸಕ್ಕೆ ವಾಪಸ್ಸಾಗುತ್ತಿದ್ದಾಗ ತನ್ನ ಸ್ಕೂಟರ್ ನ್ನು ಮಾರ್ಗಮಧ್ಯದಲ್ಲೇ 15 ಯುವಕರ ಗುಂಪು ತಡೆದು ನಿಲ್ಲಿಸಿತು. ಅದು ಬೆಳಿಗ್ಗೆ 9 ರ ಸಮಯ. ಹಲವು ದ್ವಿಚಕ್ರ ವಾಹನಗಳು, ಪಿಕ್ ಅಪ್ ವಾಹನ ಹಾಗೂ ಕಾರು ನಮಗೆ ಎದುರಾಗಿ ನಿಂತಿತ್ತು. ಅವರೆಲ್ಲರೂ ಹಿಂದೂ ಸಂಘಟನೆಯ ಯುವಕರಾಗಿದ್ದು, ನಾನು ಹಿಂದೂ ಸಮುದಾಯದ ಯುವತಿಯೊಂದಿಗೆ ಮಾತನಾಡಿದೆ ಎಂದು ಆರೋಪಿಸಿದರು. ಅಷ್ಟೇ ಅಲ್ಲದೇ ಕಲ್ಲು ತೂರಾಟ ನಡೆಸಿದರು. ನಾನು ಆ ಹುಡುಗಿಯನ್ನು ಕರೆಸಿ ಆಕೆಯೊಂದಿಗೆ ಮಾತನಾಡಿದ್ದೇನಾ? ಎಂದು ಕೇಳುವಂತೆ ಹೇಳಿದೆ. ಆದರೆ ಅವರ್ಯಾರೂ ನನ್ನ ಮಾತನ್ನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ, ನನ್ನ ಮೇಲೆ 15 ಮಂದಿ ಹಲ್ಲೆ ನಡೆಸಿದರು" ಎಂದು ಆರೋಪಿಸಿದ್ದಾರೆ.
ಗಾಯಾಳು ರಶೀದ್ ಮಡಿಕೇರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ದಾಳಿಯ ಸಂದರ್ಭದಲ್ಲಿ ತನ್ನ ಬಳಿ ಇದ್ದ 35,000 ನಗದು ನಾಪತ್ತೆಯಾಗಿದೆ. ತನ್ನ ತಲೆಗೆ ಗಾಯಗಳಾಗಿವೆ ಎಂದು ರಶೀದ್ ಹೇಳಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಹಸಿರು ಬಣ್ಣದ ಮಾಸ್ಕ್ ಧರಿಸಿದ್ದ ಎಂಬ ಕಾರಣಕ್ಕಾಗಿ ಶಂಸುದ್ದೀನ್ (18) ಮೇಲೆ ಇದೇ ತಂಡದ ಯುವಕರು ದಾಳಿ ನಡೆಸಿದ್ದಾರೆ. "ನಾನು ಆ ರೀತಿಯ ಮಾಸ್ಕ್ ಧರಿಸಿರಲಿಲ್ಲ. ಬೇರೊಬ್ಬ ಧರಿಸಿದ್ದ. ಆದರೆ ಈ ಯುವಕರು ನನ್ನ ಮೇಲೆ ದಾಳಿ ನಡೆಸಿದ್ದರು ಎಂದು ಶಂಸುದ್ದೀನ್ ಹೇಳಿದ್ದಾರೆ. ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


