ಕೋಲಾರದ ಮಾಲೂರಿನಲ್ಲಿ ಕೋವ್ಯಾಕ್ಸಿನ್ ಲಸಿಕೆ ತಯಾರಿಕಾ ಘಟಕ: ಡಿಸಿಎಂ ಅಶ್ವತ್ಥನಾರಾಯಣ
ಕೋಲಾರ ಜಿಲ್ಲೆಯ ಮಾಲೂರು ಕೈಗಾರಿಕಾ ಪ್ರದೇಶದಲ್ಲಿ ಭಾರತ್ ಬಯೋಟೆಕ್, ಕೋವ್ಯಾಕ್ಸಿನ್ ಲಸಿಕೆ ತಯಾರಿಕಾ ಘಟಕ ಸ್ಥಾಪಿಸಲಾಗುತ್ತಿದೆ ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಶುಕ್ರವಾರ ಹೇಳಿದ್ದಾರೆ.

ಬೆಂಗಳೂರು: ಕೋಲಾರ ಜಿಲ್ಲೆಯ ಮಾಲೂರು ಕೈಗಾರಿಕಾ ಪ್ರದೇಶದಲ್ಲಿ ಭಾರತ್ ಬಯೋಟೆಕ್, ಕೋವ್ಯಾಕ್ಸಿನ್ ಲಸಿಕೆ ತಯಾರಿಕಾ ಘಟಕ ಸ್ಥಾಪಿಸಲಾಗುತ್ತಿದೆ ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಶುಕ್ರವಾರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಜಧಾನಿಗೆ ಹತ್ತಿರದಲ್ಲೇ ಇರುವ ಮಾಲೂರಿನಲ್ಲಿ ಕೋವ್ಯಾಕ್ಸಿನ್ ಘಟಕ ಸ್ತಾಪಿಸಲಾಗುತ್ತಿದೆ. ಅಲ್ಲಿಗೆ ರೈಲು ಸೇರಿದಂತೆ ಉತ್ತಮ ಸಂಪರ್ಕ ವ್ಯವಸ್ಥೆ ಇದೆ. ಲಸಿಕೆ ತಯಾರಿಕೆಗೆ ಸರ್ಕಾರ ಎಲ್ಲಾ ರೀತಿಯ ಒಪ್ಪಿಗೆ ನೀಡಿದೆ. ಆಡಳಿತಾತ್ಮಕ ಕೆಲಸಗಳನ್ನು ಕಂಪನಿ ಪೂರ್ಣ ಮಾಡುತ್ತಿದ್ದು, ಸಿವಿಲ್ ಕಾಮಗಾರಿಗಳು ಆರಂಭಗೊಂಡಿವೆ. ಅವು ತ್ವರಿತವಾಗಿ ಪೂರ್ಣಗೊಂಡು ಆದಷ್ಟು ಬೇಗ ಲಸಿಕೆ ತಯಾರಿಕೆ ಆರಂಭವಾಗಲಿದೆ ಎಂದರು.
ಈಗಾಗಲೇ ಕೋವಿಶೀಲ್ಡ್ ತಯಾರಿಸುವ ಸೆರಂ ಇನ್ಸ್ಟಿಟ್ಯೂಟ್ ಮಾತ್ರವಲ್ಲದೆ, ಯಾವುದೇ ಲಸಿಕೆ ತಯಾರಿಕಾ ಕಂಪನಿ ರಾಜ್ಯಕ್ಕೆ ಬಂದು ಘಟಕ ಸ್ಥಾಪಿಸಲು ಮುಂದಾದಲ್ಲಿ, ಎಲ್ಲ ಸಹಕಾರ ನೀಡಲಾಗುವುದು. ಅತ್ಯಂತ ಕ್ಷಿಪ್ರಗತಿಯಲ್ಲಿ ಎಲ್ಲ ಅನುಮತಿಗಳನ್ನು ನೀಡಲಾಗುವುದು ಎಂದರು.
100 ಹಾಸಿಗೆಗಳ ಆಸ್ಪತ್ರೆ
ಕೋವಿಡ್ ಎರಡನೇ ಅಲೆ ಹಾಗೂ ಸಂಭನೀಯ ಮೂರನೇ ಅಲೆ ಎದುರಿಸಲು ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಅತ್ಯುತ್ತಮ ವೈದ್ಯಕೀಯ ಮೂಲಸೌಕರ್ಯಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಸರಕಾರ ಕೆಲಸ ಮಾಡುತ್ತಿದೆ. ಪ್ರತಿ ವಿಧಾನಸಭೆ ಕ್ಷೇತ್ರದಲ್ಲೂ ಕನಿಷ್ಠ 100 ಹಾಸಿಗೆಗಳ ಆಸ್ಪತ್ರೆ ಇರಲೇಬೇಕು. ಅದರಲ್ಲಿ ಆಕ್ಸಿಜನ್ ಮತ್ತು ಐಸಿಯು ಬೆಡ್ʼಗಳೂ ಇರಬೇಕು. ಈ ಬಗ್ಗೆ ಕ್ರಮ ವಹಿಸಲಾಗಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.
40 ಕೋಟಿ ಡೋಸ್ ಉತ್ಪಾದನೆ
ನೀತಿ ಆಯೋಗ ಈಗಾಗಲೇ ತಿಳಿಸಿರುವಂತೆ ಅಗಸ್ಟ್ ತಿಂಗಳಲ್ಲಿ 40 ಕೋಟಿ ಡೋಸ್ ಲಸಿಕೆ ದೇಶದಲ್ಲಿ ಉತ್ಪಾದನೆ ಆಗಲಿದೆ. ಇದು ಆಶಾದಾಯಕ ಬೆಳವಣಿಗೆ. ಜೂನ್-ಜುಲೈ ತಿಂಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ತಯಾರಾಗಲಿದೆ. ಇದುವರೆಗೂ ದೇಶದಲ್ಲಿ 19 ಕೋಟಿ ಡೋಸ್ ವ್ಯಾಕ್ಸಿನ್ ಕೊಡಲಾಗಿದೆ. ಜತೆಗೆ ಸಕ್ರಿಯರಾಗಿ ಕೆಲಸ ಮಾಡುತ್ತಿದ್ದಾರೆ. ಈವರೆಗೆ ಎಲ್ಲ ಮೂಲಗಳಿಂದ ಬಂದಿರುವ ನೆರವಿನ ಪ್ರಮಾಣವನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದರು.
ಕೇಂದ್ರವು ಲಸಿಕೆ ತಯಾರಿಕೆ ಕಂಪನಿಗಳಿಗೆ ಸಾಕಷ್ಟು ಉತ್ತೇಜನ ಕೊಡುತ್ತಿದೆ. ಜಾಗತಿಕ ಮಟ್ಟದಲ್ಲಿ ಲಸಿಕೆಗಳ ಮೇಲಿರುವ ಪೇಟೆಂಟ್ ವಿನಾಯಿತಿ ಬಗ್ಗೆಯೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿವಿಧ ದೇಶಗಳ ನಾಯಕರ ಜತೆ ಈಗಾಗಲೇ ಯಶಸ್ವಿ ಮಾತುಕತೆ ನಡೆಸಿದ್ದಾರೆ. ಹೀಗಾಗಿ ಇನ್ನಷ್ಟು ಲಸಿಕೆ ತಯಾರಿಕೆ ಘಟಕಗಳು ರಾಜ್ಯಕ್ಕೆ ಬರಲಿವೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.
ಸಿಎಸ್ಆರ್ ನೆರವು
ಕಾರ್ಪೋರೇಟ್ ವಲಯದಿಂದ ರಾಜ್ಯದಲ್ಲಿ ಉತ್ತಮ ರೀತಿಯಲ್ಲಿ ಸಿಎಸ್ಆರ್ ನೆರವು ಬರುತ್ತಿದೆ. ಹಣದ ರೂಪದಲ್ಲಿ ಮತ್ತು ಸಾಮಗ್ರಿ ರೂಪದಲ್ಲಿ ನೆರವು ಹರಿದುಬರುತ್ತಿದೆ. ಜತೆಗೆ, ಮುಖ್ಯಮಂತ್ರಿ ಪರಿಹಾರ ನಿಧಿಗೂ ಹಣ ಸಂದಾಯವಾಗುತ್ತಿದೆ. ಕೇಂದ್ರ ಸರಕಾರದಿಂದಲೂ ಸಾಕಷ್ಟು ನೆರವು ಸಿಗುತ್ತಿದೆ. ಈಗಾಗಲೇ ಈ ಬಗ್ಗೆ ಉನ್ನತ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದೇನೆ ಎಂದ ಅವರು, ಅಂತಾರಾಷ್ಟ್ರೀಯ ಮಟ್ಟದಿಂದಲೂ ರಾಜ್ಯಕ್ಕೆ ಸಾಕಷ್ಟು ನೆರವು ಬಂದಿದೆ. ಈ ವಿಭಾಗದಲ್ಲಿ ಹಿರಿಯ ಅಧಿಕಾರಿಗಳಾದ ಸೆಲ್ವಕುಮಾರ್ ಹಾಗೂ ಸಿಎಸ್ಆರ್ ಉಸ್ತುವಾರಿ ಅಧಿಕಾರಿ ಉಮಾ ಮಹಾದೇವನ್ ಅವರು ಕೆಲಸ ಮಾಡುತ್ತಿದ್ದಾರೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


