ರಾಜ್ಯ

ಪಾಳು ಬಿದ್ದಿದ್ದ ಶಹಬಾದ್ ಇಎಸ್ಐ ಆಸ್ಪತ್ರೆಗೆ ಆಧುನಿಕ ಸ್ಪರ್ಶ: ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ

ಕೋವಿಡ್ ಸೋಂಕಿತರಿಗೆ ಸಕಾಲದಲ್ಲಿ ಸೂಕ್ತ ವೈದ್ಯಕೀಯ ‌ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಜಿಲ್ಲೆಯ ಶಹಬಾದ್ ನಲ್ಲಿ ಶೀತಲಾವಸ್ಥೆಯಲ್ಲಿರುವ ಇಎಸ್ ಐ ಆಸ್ಪತ್ರೆಗೆ ಆತ್ಯುಧುಮಿಕ ಸೌಲಭ್ಯ ಕಲ್ಪಿಸಿ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲು ತೀರ್ಮಾನಿಸಲಾಗಿದೆ.

ಪಾಳು ಬಿದ್ದಿದ್ದ ಶಹಬಾದ್ ಇಎಸ್ಐ ಆಸ್ಪತ್ರೆಗೆ ಆಧುನಿಕ ಸ್ಪರ್ಶ: ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ
ಸಂಗ್ರಹ ಚಿತ್ರ
Published On :

ಕಲಬುರಗಿ: ಕೋವಿಡ್ ಸೋಂಕಿತರಿಗೆ ಸಕಾಲದಲ್ಲಿ ಸೂಕ್ತ ವೈದ್ಯಕೀಯ ‌ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಜಿಲ್ಲೆಯ ಶಹಬಾದ್ ನಲ್ಲಿ ಶೀತಲಾವಸ್ಥೆಯಲ್ಲಿರುವ ಇಎಸ್ ಐ ಆಸ್ಪತ್ರೆಗೆ ಆತ್ಯುಧುಮಿಕ ಸೌಲಭ್ಯ ಕಲ್ಪಿಸಿ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲು ತೀರ್ಮಾನಿಸಲಾಗಿದೆ.

ಈಗಾಗಲೇ ಗಣಿ ಮತ್ತು ಭೂವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ಆರ್ ನಿರಾಣಿ ಅಧಿಕಾರಿಗಳೊಂದಿಗೆ ಚರ್ಚೆಸಿ ಕೂಡಲೇ ಶಹಬಾದ್ ಪಟ್ಟಣದ ವಾಡಿ ರಸ್ತೆಯಲ್ಲಿರುವ ಇಎಸ್ ಐ ಆಸ್ಪತ್ರೆಯನ್ನು ಕೋವಿಡ್ ಕೇರ್ ಕೇಂದ್ರವಾಗಿ ಪರಿವರ್ತಿಸಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದರು.

ಕಲಬುರಗಿ ಜಿಲ್ಲಾಧಿಕಾರಿ ವಿ.ವಿ ಜ್ಯೋತ್ಸ್ನಾ, ಶಹಬಾದ್ ತಹಸೀಲ್ದಾರ್ ಸುರೇಶ್ ವರ್ಮ, ಪುರಸಭೆ ಆಯುಕ್ತ ಕೆ.ಗುರುಲಿಂಗಪ್ಪ, ಕಂದಾಯ, ಮತ್ತು ಆರೋಗ್ಯ ಇಲಾಖೆ ಸೇರಿದಂತೆ ಮತ್ತಿತರ ಅಧಿಕಾರಿಗಳ ಜೊತೆ ಚರ್ಚೆಸಿ ಅತೀ ಶೀಘ್ರದಲ್ಲಿ ಕಾರ್ಯಾರಂಭ ಮಾಡುವಂತೆ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಅವರು ತಾಕೀತು ಮಾಡಿದ್ದರು.

ಸಚಿವರು ಸೂಚನೆ ಕೊಟ್ಡ ಬೆನ್ನಲ್ಲೇ ಬುಧವಾರ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಆಸ್ಪತ್ರೆಯಲ್ಲಿ ಬೆಳೆದು ನಿಂತಿರುವ ಗಿಡ-ಗಂಟೆಗಳು, ಬಿರುಕು ಬಿಟ್ಟಿರುವ ಗೋಡೆಗಳು, ಕೈಕೊಟ್ಟಿರುವ ವಿದ್ಯುತ್ ಸಂಪರ್ಕ, ಹಾಳಾಗಿರುವ ಬೆಡ್‍ಗಳು, ಚಿಕಿತ್ಸಾ ಕೊಠಡಿ, ರೋಗಿಗಳು ತಂಗುವ ಕೊಠಡಿಗಳು, ಶೌಚಾಲಯ, ಅಡುಗೆ ಮನೆ, ಸ್ನಾನದ ಕೋಣೆ ಸೇರಿ ಎಲ್ಲ ರೀತಿಯ ಸವಲತ್ತುಗಳನ್ನು ಕಲ್ಪಿಸಬೇಕು ಎಂದು ಸಚಿವರು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದರು.

ಕೋವಿಡ್ ಸೋಂಕಿತರಿಗೆ ಅಗತ್ಯವಿರುವ ವೈದ್ಯಕೀಯ ಸೌಲಭ್ಯಗಳನ್ನು ಈ ಆಸ್ಪತ್ರೆಯಲ್ಲಿ ಕಲ್ಪಿಸಬೇಕು. ಹಾಸಿಗೆ, ವೆಂಟಿಲೇಟರ್, ಆಕ್ಸಿಜನ್ ಪೂರೈಕೆ, ಕುಡಿಯುವ ನೀರು, ಅಡುಗೆ ಮನೆ, ಶೌಚಾಲಯ ಸೇರಿದಂತೆ ಆಧುನಿಕ ಆಸ್ಪತ್ರೆಗೆ ಇರಬೇಕಾದ ಎಲ್ಲ ಮೂಲ ಸೌಕರ್ಯಗಳನ್ನೂ ಕಲ್ಪಿಸಬೇಕು. ಇದು ಸಮರೋಪಾದಿಯಲ್ಲಿ ನಡೆಯಬೇಕು ಎಂದು ಅವರು ಸೂಚಿಸಿದ್ದರು.

ಆದಷ್ಟು ಬೇಗ ಕೋವಿಡ್ ಸೆಂಟರ್ ಕಾರ್ಯಾರಂಭ ಮಾಡಬೇಕು. ಅಧಿಕಾರಿಗಳು ಇಲ್ಲದ ಸಬೂಬು ಹೇಳುವುದು, ಕಾರಣ ಕೊಟ್ಟು ವಿಳಂಬ ಮಾಡುವುದು, ಅನಗತ್ಯವಾಗಿ ಅಸಡ್ಡೆ ತೋರಿದರೆ ಅಂತಹವರ ವಿರುದ್ಧ ಶಿಸ್ತುಕ್ರಮ ಜರುಗಿಸುವುದಾಗಿ ಅವರು ಎಚ್ಚರಿಕೆ ನೀಡಿದ್ದರು.

ಇಎಸ್‍ಐ ಆಸ್ಪತ್ರೆಯು ನಮಗೆ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆಯಾದರೆ ನೂರಾರು ಸಂಖ್ಯೆಯ ಸೋಂಕಿತರಿಗೆ ಇಲ್ಲಿ ಚಿಕಿತ್ಸೆ ನೀಡಬಹುದು. ಈಗ ಜಿಲ್ಲೆಯಲ್ಲಿ ಬೆಡ್ ಸಿಗದೆ ಸೋಂಕಿತರು ಪರದಾಡುತ್ತಿದ್ದಾರೆ. ಹೀಗಾಗಿ ಪಾಳು ಬಿದ್ದಿರುವ ಆಸ್ಪತ್ರೆಗೆ ಆಧುನಿಕ ಸ್ಪರ್ಶ ನೀಡಿ ಭವಿಷ್ಯದಲ್ಲಿಯೂ ಬಳಕೆ ಮಾಡಿಕೊಳ್ಳುವ ಯೋಜನೆ ಸಚಿವರದ್ದಾಗಿದೆ.

1994ರಲ್ಲಿ ಶಹಬಾದ್ ಪಟ್ಟಣದಲ್ಲಿ ಕಾರ್ಮಿಕರಿಗಾಗಿಯೇ ಇಎಸ್‍ಐ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗಿತ್ತು. ಪ್ರಾರಂಭದಲ್ಲಿ ಈ ಆಸ್ಪತ್ರೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಜಿಲ್ಲೆಯ ನಾನಾ ಭಾಗಗಳಿಂದ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಕಾರ್ಮಿಕರು, ಜನಸಾಮಾನ್ಯರು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದರು.

ನುರಿತ ವೈದ್ಯರು ಉತ್ತಮ ಚಿಕಿತ್ಸೆ ಕೊಡುತ್ತಿದ್ದರಿಂದ ಇದೊಂದು ಉತ್ತಮ ಇಎಸ್‍ಐ ಆಸ್ಪತ್ರೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಆಸ್ಪತ್ರೆ ಸುತ್ತಮುತ್ತ ಸಿಮೆಂಟ್ ಫ್ಯಾಕ್ಟರಿಗಳಿದ್ದವು. ಕಾಲಕ್ರಮೇಣ ಈ ಕಾರ್ಖಾನೆಗಳು ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಿಗೆ ಸ್ಥಳಾಂತರಗೊಂಡರೆ, ಇನ್ನೂ ಕೆಲವು ಕಾರ್ಖಾನೆಗಳು ಬೇರೆ ಬೇರೆ ಕಾರಣಗಳಿಂದ ಸ್ಥಗಿತಗೊಂಡವು.

ಹೀಗೆ ಕಾರ್ಖಾನೆ ಸ್ಥಗಿತಗೊಂಡಿದ್ದರಿಂದ ಈ ಆಸ್ಪತ್ರೆಗೆ ದಿನದಿಂದ ದಿನಕ್ಕೆ ಕಾರ್ಮಿಕರು ಬರುವ ಸಂಖ್ಯೆ ಕಡಿಮೆಯಾಗುತ್ತ ಕೊನೆಗೊಂದು ದಿನ ಮುಚ್ಚುವ ಹಂತಕ್ಕೆ ಬಂದಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.