ರಾಜ್ಯ

'ಕೆಎಸ್ಆರ್'ಟಿಸಿ' ಹೆಸರು ಬಳಕೆಗೆ ಕರ್ನಾಟಕ ಸ್ವತಂತ್ರವಾಗಿದ್ದು, ಕೇರಳದ ಅನುಮತಿ ಬೇಕಿಲ್ಲ: ಸಚಿವ ಲಕ್ಷ್ಮಣ ಸವದಿ

ಕೆಎಸ್ಆರ್'ಟಿಸಿ ಹೆಸರು ಕರ್ನಾಟಕದ ಕೈತಪ್ಪಿಲ್ಲ, ಹೆಸರು ಬಳಕೆಗೆ ಕರ್ನಾಟಕ ರಾಜ್ಯವು ಸ್ವತಂತ್ರವಾಗಿದೆ. ಈ ಬಗ್ಗೆ ಕೇರಳ ಸರ್ಕಾರದ ಅನುಮತಿ ನಮಗೆ ಬೇಕಿಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿಯವರು ಹೇಳಿದ್ದಾರೆ.

'ಕೆಎಸ್ಆರ್'ಟಿಸಿ' ಹೆಸರು ಬಳಕೆಗೆ ಕರ್ನಾಟಕ ಸ್ವತಂತ್ರವಾಗಿದ್ದು, ಕೇರಳದ ಅನುಮತಿ ಬೇಕಿಲ್ಲ: ಸಚಿವ ಲಕ್ಷ್ಮಣ ಸವದಿ
ಸಾರಿಗೆ ಸಚಿವ ಲಕ್ಷ್ಮಣ ಸವದಿ
Published On :

ಬೆಂಗಳೂರು: ಕೆಎಸ್ಆರ್'ಟಿಸಿ ಹೆಸರು ಕರ್ನಾಟಕದ ಕೈತಪ್ಪಿಲ್ಲ, ಹೆಸರು ಬಳಕೆಗೆ ಕರ್ನಾಟಕ ರಾಜ್ಯವು ಸ್ವತಂತ್ರವಾಗಿದೆ. ಈ ಬಗ್ಗೆ ಕೇರಳ ಸರ್ಕಾರದ ಅನುಮತಿ ನಮಗೆ ಬೇಕಿಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿಯವರು ಹೇಳಿದ್ದಾರೆ. 

ಶುಕ್ರವಾರ ಸಾಮಾಜಿಕ ಜಾಲತಾಣ ಫೇಸ್ ಬುಕ್ ಪೋಸ್ಟ್ ಮೂಲಕ ಹೇಳಿಕೆ ನೀಡಿರುವ ಸಚಿವರು, ಕೆ. ಎಸ್. ಆರ್. ಟಿ. ಸಿ. ಎಂಬ ಹೆಸರನ್ನು ಮುಂದೆಯೂ ಕರ್ನಾಟಕವು ಬಳಸಲು ಸ್ವತಂತ್ರವಾಗಿದೆ. ಈ ಬಗ್ಗೆ ಕೇರಳ ಸರ್ಕಾರದ ಅನುಮತಿ ನಮಗೆ ಬೇಕಾಗಿಲ್ಲ. ಅಗತ್ಯವಿದ್ದರೆ ನ್ಯಾಯಾಲಯಲ್ಲಿ ಕಾನೂನಾತ್ಮಕ ಹೋರಾಟಗಳನ್ನು ನಡೆಸಲು ನಾವು ಹಿಂದೆ ಬೀಳುವುದಿಲ್ಲ ಎಂದು ಹೇಳಿದ್ದಾರೆ.

ರಾಜ್ಯ ರಸ್ತೆ ಸಾರಿಗೆ ನಿಗಮವು ಇನ್ನು ಮುಂದೆ 'ಕೆಎಸ್‌ಆರ್‌ಟಿಸಿ' ಎಂದು ಬಳಸುವಂತಿಲ್ಲವೆಂದು ಕೇಂದ್ರದ ಟ್ರೇಡ್ ಮಾರ್ಕ್ ರಿಜಿಸ್ಟರಿ ಬುಧವಾರ ತನ್ನ ಅಂತಿಮ ತೀರ್ಪನ್ನು ಪ್ರಕಟಿಸಿದೆ. ಎರಡು ರಾಜ್ಯಗಳ ನಡುವಿನ ಒಂದು ದಶಕದ ಕಾನೂನಾತ್ಮಕ ಹೋರಾಟವು ಅಂತ್ಯಗೊಂಡಂತಿದೆ ಎಂಬ ಮಾಧ್ಯಮಗಳ ವರದಿಗಳ ಹಿನ್ನೆಲೆಯಲ್ಲಿ ಇಂದು ಕೂಲಂಕುಶವಾಗಿ ಪರಿಶೀಲಿಸಲಾಗಿದ್ದು, ಇದು ವಾಸ್ತವಕ್ಕೆ ದೂರವಾದ ಸಂಗತಿಯಾಗಿದೆ ಎಂಬುದು ದೃಢಪಟ್ಟಿದೆ ಎಂದು ಸಚಿವರು ತಿಳಿಸಿದ್ದಾರೆ.

ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಕೆ ಎಸ್ ಆರ್ ಟಿ ಸಿ ಗೆ ನೀಡಲಾದ ಟ್ರೇಡ್ ಮಾರ್ಕ್ ಪ್ರಮಾಣಪತ್ರದ ವಿರುಧ್ಧ ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿ (ಐಪಿಎಬಿ)ಯ ಮುಂದೆ ಸಲ್ಲಿಸಿದ ಮೇಲ್ಮನವಿಗಳಲ್ಲಿ ಯಾವುದೇ ಅಂತಿಮ ಆದೇಶಗಳನ್ನು ಸಹ ಹೊರಡಿಸಲಾಗಿಲ್ಲ ಎಂಬುದು ತಿಳಿದುಬಂದಿದೆ. ಆದ್ದರಿಂದ ಅನವಶ್ಯಕ ಅಪಪ್ರಚಾರಕ್ಕೆ ಯಾರೂ ಕಿವಿಕೊಡಬಾರದು ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ.

ಸದರಿ ಮಂಡಳಿಯನ್ನು 4/04/2021ರ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಯ ಮೂಲಕ ರದ್ದುಪಡಿಸಲಾಗಿದೆ ಮತ್ತು ಇಲ್ಲಿ ಬಾಕಿ ಇರುವ ಅರ್ಜಿಗಳನ್ನು ಹೈಕೋರ್ಟ್‌ಗೆ ವರ್ಗಾಯಿಸಲಾಗುತ್ತದೆ. ಆದ್ದರಿಂದ, ಕರ್ನಾಟಕದಲ್ಲಿ ಕೆಎಸ್‌ಆರ್‌ಟಿಸಿಯ ಟ್ರೇಡ್ ಮಾರ್ಕ್ ನೋಂದಣಿಯು ಪ್ರಸ್ತುತ ಜಾರಿಯಲ್ಲಿದೆ ಮತ್ತು ಕೆಎಸ್‌ಆರ್‌ಟಿಸಿಯು ತನಗೆ ನೀಡಲಾಗಿರುವ ಟ್ರೇಡ್‌ಮಾರ್ಕ್‌ಗಳನ್ನು ಬಳಸಲಾಗುವುದಿಲ್ಲ ಎಂಬ ಸುದ್ದಿ, ವರದಿಗಳು ಸತ್ಯಕ್ಕೆ ದೂರವಾಗಿದೆ ಮತ್ತು ಇದನ್ನು ಕಾನೂನಾತ್ಮಕವಾಗಿ ಒಪ್ಪಲಾಗದು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ‘ಕೆಎಸ್‌ಆರ್‌ಟಿಸಿ' ಟ್ರೇಡ್‌ಮಾರ್ಕ್ ಬಳಕೆ ಮಾಡುವ ವಿರುದ್ಧವಾಗಿ ಯಾವುದೇ ಕಾನೂನಾತ್ಮಕ ಅಡೆತಡೆಯಾಗಲಿ ಅಥವಾ ನಿಷೇಧವಾಗಲೀ ಇಲ್ಲ ಎಂಬುದನ್ನು ಗಮನಿಸಬೇಕು. ಕೇರಳ ಎಸ್‌ಆರ್‌ಟಿಸಿಯು, ಕೆಎಸ್ಆರ್‌ಟಿಸಿ/ ಕರ್ನಾಟಕ ಸರ್ಕಾರಕ್ಕೆ ನೋಟಿಸ್ ನೀಡಲು ಉದ್ದೇಶಿಸಿದೆ ಎಂದು ಮಾಧ್ಯಮಗಳಲ್ಲಿನ ಸುದ್ದಿ ಪ್ರಕಟವಾಗಿದೆ. ಒಂದು ವೇಳೆ ಅಂತಹ ನೋಟಿಸ್ ನೀಡಿದರೆ, ಸಂಸ್ಥೆಯಿಂದ ಸೂಕ್ತವಾದ ಉತ್ತರವನ್ನು ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.