ದೇಶದಲ್ಲಿ ಪಾರ್ಕಿನ್ಸನ್ ರೋಗ ಹೆಚ್ಚಳ: 2030ರ ವೇಳೆಗೆ ಶೇ.200-300ಕ್ಕೆ ಏರಿಕೆ ಸಾಧ್ಯತೆ; ಸಚಿವ ಸುಧಾಕರ್
ದೇಶದಲ್ಲಿ ಪಾರ್ಕಿನ್ಸನ್ ರೋಗ ಹೆಚ್ಚಳವಾಗುತ್ತಿದ್ದು, 2030ರ ವೇಳೆಗೆ ಶೇ.200-300ರಷ್ಟು ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಹೇಳಿದ್ದಾರೆ.

ಬೆಂಗಳೂರು: ದೇಶದಲ್ಲಿ ಪಾರ್ಕಿನ್ಸನ್ ರೋಗ ಹೆಚ್ಚಳವಾಗುತ್ತಿದ್ದು, 2030ರ ವೇಳೆಗೆ ಶೇ.200-300ರಷ್ಟು ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಹೇಳಿದ್ದಾರೆ.
ಕಿಂಗ್ಸ್ ಕಾಲೇಜ್ ಲಂಡನ್ ಮತ್ತು ಪಾರ್ಕಿನ್ಸನ್ ರೀಸರ್ಜ್ ಅಲೆಯನ್ಸ್ ಆಫ್ ಇಂಡಿಯಾ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವರ್ಚಿಯಲ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುಧಾಕರ್ ಅವರು ಮಾತನಾಡಿದ್ದಾರೆ.
ದೇಶದಲ್ಲಿ ಒಂದು ಲಕ್ಷ ಜನರಲ್ಲಿ 350-400ಜನರು ಪಾರ್ಕಿನ್ಸನ್ ರೋಗಕ್ಕೆ ಒಳಗಾಗುತ್ತಿದ್ದಾರೆ. ಈ ಪ್ರಮಾಣ 2030ರ ವೇಳೆಗೆ ಶೇ.200-300ರಷ್ಟು ಹೆಚ್ಚಲಿದೆ. ಒಟ್ಟು ಜನಸಂಖ್ಯೆಯ ಶೇ.1ರಷ್ಟು ಜನರು ಈ ರೋಗದಿಂದ ಸಮಸ್ಯೆಗೆ ಒಳಗಾಗಲಿದ್ದಾರೆ. ಕೆಸಿಎಲ್-ಪಿಎಆರ್'ಐ ಕಾರ್ಯಕ್ರಮವು ಪಾರ್ಕಿನ್ಸನ್ ರೋಗಕ್ಕೆ ಸಂಬಂಧಿಸಿದ ಸಂಶೋಧನೆಗೆ ನೆರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನ್ಯೂರೋ ಡಿಜನರೇಟಿವ್ ಕಾಯಿಲೆಗಳಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿರುವುದಕ್ಕೆ ನಿಮ್ಹಾನ್ಸ್ ಗುರುತಿಸಿಕೊಂಡಿದೆ. ಪಾರ್ಕಿನ್ಸನ್ ರೋಗಕ್ಕೆ ಸಂಬಂಧಪಟ್ಟಂತೆ ನಿಮ್ಹಾನ್ಸ್ ಪಿಎಆರ್'ಐನ ಇತರೆ ಕೇಂದ್ರಗಳೊಂದಿಗೆ ಸಂಶೋಧನಾ ಕಾರ್ಯಗಳನ್ನು ಕೈಗೊಳ್ಳಲಿದೆ. ಜತೆಗೆ ಅಕಾಡೆಮಿಕ್ ತರಬೇತಿ ಹಾಗೂ ಸಂಶೋಧನಾ ವಲಯದಲ್ಲಿ ಕೆಸಿಎಲ್-ಪಿಎಆರ್'ಐ ಜೊತೆ ಕಾರ್ಯ ನಿರ್ವಹಿಸುವ ಅವಕಾಶಗಳನ್ನು ರಾಜ್ಯ ಸರ್ಕಾರ ಪರಿಶೀಲಿಸಲಿದೆ ಎಂದು ತಿಳಿಸಿದರು.
ಪಾರ್ಕಿನ್ಸನ್ ಹಾಗೂ ಇತರೆ ನ್ಯೂರೋ ಡಿ ಜನರೇಟಿವ್ ರೋಗಕ್ಕೆ ಸಂಬಂಧಿಸಿದಂತೆ ಪ್ರೊ.ರೇ ತಂಡ ಕೈಗೊಂಡ ಸಂಶೋಧನಾ ಚಟುವಟಿಕೆಗಳಿಗೆ ಅಭಿನಂದಿಸುತ್ತೇನೆ. ಎರಡೂ ಸಂಸ್ಥೆಗಳ ಈ ಸಹಯೋಗದ ಕೆಲಸ ಸೂಕ್ತ ವೇದಿಕೆ ಸೃಷ್ಟಿಸಲು ಹಾಗೂ ಕೌಶಲ್ಯಯುತ ಸಂಶೋಧಕರನ್ನು ಸೃಷ್ಟಿಸಲು ಸಹಕಾರಿಯಾಗಲಿದೆ. ಬೆಂಗಳೂರಿನಲ್ಲಿ ತರಬೇತಿ ಕಾರ್ಯಾಗಾರ ಆಯೋಜಿಸಲು ಸರ್ಕಾರ ಸಿದ್ಧವಿದೆ ಎಂದು ಭರವಸೆ ನೀಡಿದ್ದಾರೆ.
ಪಾರ್ಕಿನ್ಸನ್ ರೋಗಿಗಳ ಚಿಕಿತ್ಸೆಗೆ ಹಣ ಸಂಗ್ರಹಿಸಲು ಕೆಸಿಎಲ್'ನಲ್ಲಿ ಆಯೋಜಿಸಿದ್ದ ವಾರ್ಷಿಕ ಚಾರಿಟಿ ಕ್ರಿಕೆಟ್ ಪಂದ್ಯದಲ್ಲಿ ಹಿಂದೊಮ್ಮೆ ಭಾಗವಹಿಸಿದ್ದೆ. ಹಾಗೆಯೇ ಕೆಸಿಎಲ್'ನ ಪಾರ್ಕಿನ್ಸನ್ ಸೆಂಟರ್ ಆಫ್ ಎಕ್ಸಲೆನ್ಸ್'ಗೂ ಭೇಟಿ ನೀಡಿದ್ದೆ ಎಂದು ಸಚಿವರು ನೆನೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


