ಭ್ರಷ್ಟಾಚಾರ ಆರೋಪ: ಸಿಎಂ ಯಡಿಯೂರಪ್ಪ, ಇತರರ ವಿರುದ್ಧ ದೂರು ದಾಖಲು
ಕೆಎಸ್‌ಪಿಸಿಬಿ ಅಧ್ಯಕ್ಷ ಹುದ್ದೆ ನೀಡಲು ತಮ್ಮ ಬಳಿ ರೂ.16 ಕೋಟಿ ಲಂಚಕ್ಕೆ ಬೇಡಿಕೆ ಇರಿಸಿ, ರೂ.9.75 ಕೋಟಿ ಪಡೆದಿದ್ದರು ಎಂದು ಮಂಡಳಿಯ ಮಾಜಿ ಅಧ್ಯಕ್ಷ ಡಾ.ಎಂ. ಸುಧೀಂದ್ರ ರಾವ್ ಮಾಡಿರುವ ಆರೋಪದ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಇತರರ ವಿರುದ್ಧ ತನಿಖೆ ನಡೆಸುವಂತೆ ಟಿ.ಜೆ. ಅಬ್ರಹಾಂ ಎಸಿಬಿಗೆ ದೂರು ಸಲ್ಲಿಸಿದ್ದಾರೆ.

ಬೆಂಗಳೂರು: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧ್ಯಕ್ಷ ಹುದ್ದೆ ನೀಡಲು ತಮ್ಮ ಬಳಿ ರೂ.16 ಕೋಟಿ ಲಂಚಕ್ಕೆ ಬೇಡಿಕೆ ಇರಿಸಿ, ರೂ.9.75 ಕೋಟಿ ಪಡೆದಿದ್ದರು ಎಂದು ಮಂಡಳಿಯ ಮಾಜಿ ಅಧ್ಯಕ್ಷ ಡಾ.ಎಂ. ಸುಧೀಂದ್ರ ರಾವ್ ಮಾಡಿರುವ ಆರೋಪದ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಇತರರ ವಿರುದ್ಧ ತನಿಖೆ ನಡೆಸುವಂತೆ ಸಾಮಾಜಿಕ ಹೋರಾಟಗಾರ ಟಿ.ಜೆ. ಅಬ್ರಹಾಂ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ಸಲ್ಲಿಸಿದ್ದಾರೆ.
ಸುದ್ದಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಸುಧೀಂದ್ರ ರಾವ್ ಅವರು ಮಾಡಿದ್ದ ಆರೋಪಗಳನ್ನು ಆಧರಿಸಿ ಅಬ್ರಹಂ ಅವರು ಎಸಿಬಿಗೆ ದೂರು ನೀಡಿದ್ದಾರೆಂದು ತಿಳಿದುಬಂದಿದೆ.
ಯಡಿಯೂರಪ್ಪ, ಸುಧೀಂದ್ರ ರಾವ್, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷರೂ ಆಗಿರುವ ಯಡಿಯೂರಪ್ಪ ಅವರ ಸಂಬಂಧಿ ಜಿ. ಮರಿಸ್ವಾಮಿ, ಯಡಿಯೂರಪ್ಪ ಅವರ ಮಗ ಬಿ.ವೈ. ವಿಜಯೇಂದ್ರ, ಮೊಮ್ಮಗ ಶಶಿಧರ ಮರಡಿ ಮತ್ತು ಅಳಿಯ ಸಂಜಯ್ ಶ್ರೀ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿ, ತನಿಖೆ ನಡೆಸುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ ಎನ್ನಲಾಗುತ್ತಿದೆ.
ಸುಧೀಂದ್ರ ರಾವ್ ಅವರು ಕೇಂದ್ರ ಪರಿಸರ ಸಚಿವಾಲಯ ನಿಗದಿಪಡಿಸಿದ್ದ ಅರ್ಹತೆಗಳನ್ನು ಹೊಂದಿರದಿದ್ದರೂ ಅವರನ್ನು ಮಾಲಿನ ನಿಯಂತ್ರಣ ಮಂಡಳಿ ಅಧ್ಯಕ್ಷರ ಹುದ್ದೆಗೆ ನೇಮಕ ಮಾಡಲಾಗಿತ್ತು. ಯಡಿಯೂರಪ್ಪ ಅವರ ಮಗ ಬಿ.ವೈ. ವಿಜಯೇಂದ್ರ ಮತ್ತು ಅವರ ಕುಟುಂಬದ ಸದಸ್ಯರು ಸುಧೀಂದ್ರ ರಾವ್ ಅವರಿಂದ 60 ಖಾಸಗಿ ಕಂಪನಿಗಳಿಗೆ ನಿರಾಕ್ಷೇಪಣಾ ಪತ್ರಗಳನ್ನು ಕೊಡಿಸಿ ರೂ.60 ಕೋಟಿಯಷ್ಟು ಹಣ ಸಂಗ್ರಹಿಸಿದ್ದಾರೆ. ಈ ಕೃತ್ಯದಲ್ಲಿ ಶಶಿಧರ ಮರಡಿ ಮತ್ತು ಸಂಜಯ್ ಶ್ರೀ ಕೂಡ ಭಾಗಿಯಾಗಿದ್ದಾರೆ. ಸುಧೀಂದ್ರ ರಾವ್ ಅವರೇ ತಪ್ಪೊಪ್ಪಿಕೊಂಡಿದ್ದಾರೆ’ ಎಂಬ ಆರೋಪ ದೂರಿನಲ್ಲಿದೆ.
ಅಧ್ಯಕ್ಷ ಹುದ್ದೆ ನೀಡಲು ರೂ.16 ಕೋಟಿ ಲಂಚಕ್ಕೆ ಬೇಡಿಕೆ ಇಡಲಾಗಿತ್ತು. ಆದರೆ, 9.75 ಕೋಟಿ ಮಾತ್ರ ಪಾವತಿಸಲು ಸಾಧ್ಯವಾಗಿತ್ತು. ಉಳಿದ ಮೊತ್ತ ನೀಡುವಂತೆ ಮರಿಸ್ವಾಮಿ ಅವರ ಮೂಲಕ ಕಿರುಕುಳ ನೀಡಲಾಗುತ್ತಿತ್ತು ಎಂಬ ಆರೋಪವನ್ನೂ ಸುಧೀಂದ್ರ ರಾವ್ ಮಾಡಿದ್ದಾರೆ. ಈ ಬಗ್ಗೆಯೂ ತನಿಖೆ ನಡೆಸಬೇಕು’ ಎಂದು ಅಬ್ರಹಾಂ ಆಗ್ರಹಿಸಿದ್ದಾರೆ.
ಅರ್ಹತೆ ಇಲ್ಲದಿದ್ದರೂ ಸುಧೀಂದ್ರ ರಾವ್ ಅವರನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ಹುದ್ದೆಗೆ ನೇಮಿಸಲು ರೂ.16 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿರುವುದು, ರೂ.9.75 ಕೋಟಿ ಲಂಚ ಪಡೆದಿರುವುದು, 60 ಕಡತಗಳಿಗೆ ಸಹಿ ಹಾಕುವಂತೆ ಒತ್ತಡ ಹೇರಿರುವುದು ಮತ್ತು ಅದನ್ನು ಬಳಸಿಕೊಂಡು ಹಣ ಸಂಗ್ರಹಿಸಿರುವ ಆರೋಪಗಳ ಕುರಿತು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ, ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


