ಭೌತಿಕ ತರಗತಿಗಳ ಪುನರಾರಂಭಿಸಿ: ಸರ್ಕಾರಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಒತ್ತಾಯ
ತಜ್ಞರ ಶಿಫಾರಸಿನಂತೆ ರಾಜ್ಯದಲ್ಲಿ ಭೌತಿಕ ತರಗತಿಗಳನ್ನು ಆರಂಭಿಸಬೇಕು ಎಂದು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ.

ಬೆಂಗಳೂರು: ತಜ್ಞರ ಶಿಫಾರಸಿನಂತೆ ರಾಜ್ಯದಲ್ಲಿ ಭೌತಿಕ ತರಗತಿಗಳನ್ನು ಆರಂಭಿಸಬೇಕು ಎಂದು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ.
ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ್ ಹಲಗೇರಿಯವರು ಸರ್ಕಾರಕ್ಕೆ ಮನವಿ ಮಾಡಿದ್ದು, ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆ. ಇದರಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಕರಪತ್ರ ಮುದ್ರಿಸಿ ಗಲ್ಲಿಗಲ್ಲಿಗಳಿಗೆ ಹೋಗಿ ಸರ್ಕಾರಿ ಶಾಲೆಗಳಿಗೆ ದಾಖಲಾಗುವಂತೆ ಶಿಕ್ಷಕರು ಪೋಷಕರ ಮನವೊಲಿಸಿದ್ದಾರೆ. ಧ್ವನಿವರ್ಧಕದ ಮೂಲಕ ಪ್ರಚಾರ ಕೈಗೊಂಡ ಕಾರಣ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಾಗಿದೆ. ತಜ್ಞರ ಸಮಿತಿ ಶಿಫಾರಸಿನಂತೆ ರಾಜ್ಯದಲ್ಲಿ ಕೂಡಲೇ ಭೌತಿಕ ತರಗತಿಗಳನ್ನು ಆರಂಭಿಸಿ ಮಕ್ಕಳಿಗೆ ಹಾಲು, ಮಧ್ಯಾಹ್ನದ ಬಿಸಿಯೂಟ ನೀಡಬೇಕು ಎಂದು ಹೇಳಿದ್ದಾರೆ.
ಕಳೆದ 15 ತಿಂಗಳಿನಿಂದ ಶಾಲೆಗಳು ನಡೆಯದ ಕಾರಣ ಪಾಲಕರು, ಮಕ್ಕಳು ಗೊಂದಲದಲ್ಲಿದ್ದಾರೆ. ಶಿಕ್ಷಕರ ಸಹಿತ ಮಕ್ಕಳ ಆಟ-ಪಾಠ ನೋಡಲು ಪೋಷಕರಿಗೆ ಸಾಧ್ಯವಾಗದ ಪರಿಸ್ಥಿತಿ ಕೊರೋನಾ ಮಹಾಮಾರಿಯಿಂದ ನಿರ್ಮಾಣವಾಗಿದೆ. ಆನ್‍ಲೈನ್‍ನಿಂದ ಕೇವಲ ಶೇ.30 ರಿಂದ 35ರಷ್ಟು ಮಕ್ಕಳು ಮಾತ್ರ ಅಭ್ಯಾಸ ಮಾಡುತ್ತಿದ್ದಾರೆ. ಎಲ್ಲ ಮಕ್ಕಳಿಗೂ ಏಕರೂಪದ ಶಿಕ್ಷಣ ದೊರೆಯಬೇಕೆಂಬುದು ನಮ್ಮ ಸಂಘದ ಆಶಯವಾಗಿದೆ.
ಟಿವಿ, ರೇಡಿಯೋ, ಆನ್‍ಲೈನ್, ವಾಟ್ಸಾಪ್, ಇನ್ನಿತರ ತಂತ್ರಜ್ಞಾನಗಳ ಮೂಲಕ ನೀಡುವ ಶಿಕ್ಷಣ ಪ್ರಾಥಮಿಕ ಹಂತದ ನಂತರದ ಮಕ್ಕಳಿಗೆ ಸೂಕ್ತವಾದರೂ ಅದರಲ್ಲಿಯೂ ಸಾಕಷ್ಟು ತೊಂದರೆಗಳಿವೆ. ಈ ಕಾರಣದಿಂದ ಭೌತಿಕ ತರಗತಿಗಳನ್ನು ಆರಂಭಿಸುವುದು ಸೂಕ್ತ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಾಲೆಗಳನ್ನು ಪ್ರಾರಂಭಿಸಬೇಕು. 1 ರಿಂದ 2ನೆ ತರಗತಿಗೆ ಒಂದು ದಿನ, 3 ರಿಂದ 4ನೆ ತರಗತಿಗಳಿಗೆ ಒಂದು ದಿನ, 5 ರಿಂದ 6ನೆ ತರಗತಿಗಳಿಗೆ 2 ದಿನ, 7 ರಿಂದ 8ನೆ ತರಗತಿಗಳಿಗೆ 2 ದಿನ ಈ ರೀತಿ ಶಾಲೆಗಳನ್ನು ಪ್ರಾರಂಭಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


